Asia Cup Final ಅಬ್ಬರಿಸಿದ ಪಾಕಿಸ್ತಾನಕ್ಕೆ ಸ್ಪಿನ್ ಬ್ರೇಕ್, ಟೀಂ ಇಂಡಿಯಾ 147 ರನ್ ಟಾರ್ಗೆಟ್, ಆರಂಭದಲ್ಲಿ ಅಬ್ಬರಿಸಿದ ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ನೀಡಿದೆ. 146 ರನ್‌ಗೆ ಪಾಕಿಸ್ತಾನ ಕಟ್ಟಿ ಹಾಕಿರುವ ಟೀಂ ಇಂಡಿಯಾ ಚೇಸಿಂಗ್ ಮಾಡಲು ಸಜ್ಜಾಗಿದೆ. 

ದುಬೈ (ಸೆ.28) ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯ ರೋಚಕ ಘಟ್ಟ ತಲುಪಿದೆ. ಆರಂಭದಿಂದಲೇ ಭಾರಿ ಹೈಡ್ರಾಮ ಮೂಲಕ ಸಾಗಿದ ಪಂದ್ಯದಲ್ಲಿ ಪಾಕಿಸ್ತಾನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ದಿಢೀರ್ ಕುಸಿತ ಕಂಡಿತ್ತು. ಸಾಹೀಬ್ಜಾದ್ ಫರ್ಹಾನ್, ಫಖರ್ ಜಮಾನ್ ಅಬ್ಬರಿಸಿದರೆ, ಅಷ್ಟೇ ವೇಗದಲ್ಲಿ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಇದರ ಪರಿಣಾಮ ಪಾಕಿಸ್ತಾನ 146 ರನ್ ಸಿಡಿಸಿ ಆಲೌಟ್ ಆಗಿದೆ. ಈ ಮೂಲಕ ಟೀಂ ಇಂಡಿಯಾಗೆ 147 ರನ್ ಟಾರ್ಗೆಟ್ ನೀಡಿದೆ.

ಫರ್ಹಾನ್ ಸ್ಫೋಟಕ ಬ್ಯಾಟಿಂಗ್

ಟಾಸ್ ಗೆದ್ದ ಭಾರತ, ಪಾಕಿಸ್ತಾನ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತ್ತು. ಕಳೆದೆರಡು ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟಿಂಗ್‌ನಲ್ಲಿ ವಿಫಲವಾಗಿತ್ತು. ಆದರೆ ಈ ಬಾರಿ ಪಾಕಿಸ್ತಾನ ಸ್ಫೋಟಕ ಪ್ರದರ್ಶನ ನೀಡಿತ್ತು. ಫರ್ಹಾನ್ 5 ಬೌಂಡರಿ, ಮೂರು ಸಿಕ್ಸರ್ ಮೂಲಕ ಅಬ್ಬರಿಸಿದರು. 38 ಎಸೆತದಲ್ಲಿ 57 ರನ್ ಸಿಡಿಸಿ ಮಿಂಚಿದರು. ಆರಂಭಿಕರ ಅಬ್ಬರಕ್ಕೆ ವರುಣ್ ಚಕ್ರವರ್ತಿ ಬ್ರೇಕ್ ನೀಡಿದರು. ಫರ್ಹಾನ್ ಔಟಾದರೂ ಫಖರ್ ಜಮಾನ್ ಆಟ ಮುಂದುವರಿದಿತ್ತು.

ಪರ್ಹಾನ್‌ಗೆ ಫಖರ್ ಜಮಾನ್ ಉತ್ತಮ ಸಾಥ್ ನೀಡಿದ್ದ ಫಖರ್ ಅಬ್ಬರಿಸಲು ಆರಂಭಿಸಿದ್ದರು. ಆದರೆ ಸೈಮ್ ಆಯೂಬ್ ಕೇವಲ 14 ರನ್ ಸಿಡಿಸಿ ನಿರ್ಗಮಿಸಿದರು. ರನ್ ರೇಟ್ ಹೆಚ್ಚಾಗುತ್ತಿದ್ದಂತೆ ಭಾರತ 2 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತಸಾಧಿಸಲು ಮುಂದಾಯಿತು. ಇದರ ಬೆನ್ನಲ್ಲೇ ಮೊಹಮ್ಮದ್ ಹ್ಯಾರಿಸ್ ವಿಕೆಟ್ ಪತನಗೊಂಡಿತ್ತು. ಈ ಮೂಲಕ ಪಾಕಿಸ್ತಾನದ ಮೂರು ವಿಕೆಟ್ ಪತನಗೊಂಡಿತ್ತು. ಆದರೆ ಫಖರ್ ಹೋರಾಟದಿಂದ ಪಾಕಿಸ್ತಾನ ಚೇತರಿಕೆ ಕಂಡಿತ್ತು. ಅರ್ಧಶತಕದ ಸನಿಹದಲ್ಲಿ ಫಖರ್ ವಿಕೆಟ್ ಪತನಗೊಂಡಿತ್ತು. 35 ಎಸೆತದಲ್ಲಿ ಫಖರ್ 46 ರನ್ ಸಿಡಿಸಿ ಔಟಾದರು.

ದಿಢೀರ್ ಕುಸಿತ

ಹುಸೈನ್ ತಲಾಟ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರೆ, ನಾಯಕ ಸಲ್ಮಾನ್ ಆಘಾ 8 ರನ್ ಸಿಡಿಸಿದರು. ಸ್ಪಿನ್ನರ್ ಮೇಲೆ ದಾಳಿ ಮಾಡಿದ ಪಾಕಿಸ್ತಾನಕ್ಕೆ ಅದೇ ಸ್ಪಿನ್ನರ್ ಮೂಲಕ ಭಾರತ ತಿರುಗೇಟು ನೀಡಿತು. ವರುಣ್ ಚಕ್ರವರ್ತಿ, ಅಕ್ಸರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ ಪಾಕಿಸ್ತಾನ ಬ್ಯಾಟರ್ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಬೃಹತ್ ಮೊತ್ತದ ಸೂಚನೆ ನೀಡಿದ್ದ ಪಾಕಿಸ್ತಾನ ದಿಢೀರ್ ಕುಸಿತ ಕಂಡಿತು. ಶಾಹೀನ್ ಆಫ್ರಿದಿ, ಫಹೀನ್ ಆಶ್ರಫ್ ಹಾಗೂ ಹ್ಯಾರಿಸ್ ರೌಫ್ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. 18 ಓವರ್‌ಗೆ ಪಾಕಿಸ್ತಾನ 9 ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ನವಾಜ್ ವಿಕೆಟ್ ಪತನದೊಂದಿಗೆ ಪಾಕಿಸ್ತಾನ 19.1 ಓವರ್‌ನಲ್ಲಿ 146 ರನ್‌ಗೆ ಆಲೌಟ್ ಆಯಿತು.