- Home
- Sports
- Cricket
- Asia Cup 2025 Final: ಭಾರತ-ಪಾಕಿಸ್ತಾನ ಕಾದಾಟದಲ್ಲಿ ಯಾರಾಗ್ತಾರೆ ಚಾಂಪಿಯನ್? ಅಚ್ಚರಿ ಭವಿಷ್ಯ ನುಡಿದ ವಾಸೀಂ ಅಕ್ರಂ
Asia Cup 2025 Final: ಭಾರತ-ಪಾಕಿಸ್ತಾನ ಕಾದಾಟದಲ್ಲಿ ಯಾರಾಗ್ತಾರೆ ಚಾಂಪಿಯನ್? ಅಚ್ಚರಿ ಭವಿಷ್ಯ ನುಡಿದ ವಾಸೀಂ ಅಕ್ರಂ
ದುಬೈ: 2025ರ ಏಷ್ಯಾಕಪ್ ಟೂರ್ನಿಯು ನಿರ್ಣಾಯಕ ಘಟ್ಟ ತಲುಪಿದ್ದು, ಫೈನಲ್‌ನಲ್ಲಿ ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ - ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಗೆಲ್ಲೋರು ಯಾರು ಎನ್ನುವ ಕುರಿತಂತೆ ಪಾಕ್ ದಿಗ್ಗಜ ಕ್ರಿಕೆಟಿಗ ವಾಸೀಂ ಅಕ್ರಂ ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ಇಂದು ಇಂಡೋ-ಪಾಕ್ ಫೈಟ್
2025ರ ಏಷ್ಯಾಕಪ್ ಫೈನಲ್‌ಗೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ 8 ಗಂಟೆಯಿಂದ ಆರಂಭವಾಗಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.
41 ವರ್ಷಗಳ ಬಳಿಕ ಇಂಡೋ-ಪಾಕ್ ಏಷ್ಯಾಕಪ್ ಫೈನಲ್
41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಸಲ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಡುತ್ತಿವೆ. ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದ್ದು, ಈಗಾಗಲೇ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ.
ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿ ಭಾರತ
ಭಾರತ ತಂಡವು ಈಗಾಗಲೇ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಮಣಿಸಿದ್ದು, ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದೆ. ಇನ್ನು ಎರಡು ಸಲ ಭಾರತಕ್ಕೆ ಶರಣಾಗಿರುವ ಪಾಕಿಸ್ತಾನ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.
ಅಚ್ಚರಿ ಭವಿಷ್ಯ ನುಡಿದ ಅಕ್ರಂ
ಹೀಗಿರುವಾಗಲೇ ಏಷ್ಯಾಕಪ್ ಫೈನಲ್ ಗೆಲ್ಲುವವರು ಯಾರು ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಂತೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಂ ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ಅಕ್ರಂ ಭವಿಷ್ಯ
ಭಾರತ ಈ ಬಾರಿ ಏಷ್ಯಾಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಪಾಕಿಸ್ತಾನ ಯಾವಾಗ ಬೇಕಿದ್ದರೂ ತಿರುಗೇಟು ನೀಡಬಹುದು. ಫೈನಲ್ ಗೆಲ್ಲಲು ಪಾಕಿಸ್ತಾನಕ್ಕೆ ವಾಸೀಂ ಅಕ್ರಂ ಹೊಸ ಸಲಹೆ ನೀಡಿದ್ದಾರೆ.
ಭಾರತ ಗೆಲ್ಲುವ ಫೇವರೇಟ್
ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಫೈನಲ್‌ನಲ್ಲಿ ಭಾನುವಾರ ಪಾಕ್ ಬೌಲರ್‌ಗಳು ಮಾರಕ ದಾಳಿ ನಡೆಸುವ ವಿಶ್ವಾಸವಿದೆ. ಈ ಪಂದ್ಯದಲ್ಲಿ ಖಂಡಿತ ಭಾರತ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದೆ.
ಫಲಿತಾಂಶ ಏನು ಬೇಕಾದರೂ ಬರಬಹುದು
ಆದರೆ ಈ ಮಾದರಿಯ ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಆಗಬಹುದು, ಒಂದೊಳ್ಳೆಯ ಇನ್ನಿಂಗ್ಸ್, ಒಂದೊಳ್ಳೆಯ ಸ್ಪೆಲ್ ಪಂದ್ಯದ ದಿಕ್ಕನ್ನೇ ಬದಲಿಸಬಹುದು ಎಂದು ವಾಸೀಂ ಅಕ್ರಂ ಹೇಳಿದ್ದಾರೆ.
ಪಾಕ್ ಬೌಲರ್‌ಗಳಿಗೆ ಅಕ್ರಂ ಕಿವಿ ಮಾತು
ಭಾರತದ ಅರಂಭಿಕ ಜೋಡಿಯಾದ ಶುಭ್‌ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಅವರನ್ನು ಆದಷ್ಟು ಬೇಗ ಔಟ್ ಮಾಡಬೇಕು. ಪಾಕ್ ಬೌಲರ್‌ಗಳು ಹೀಗೆ ಮಾಡಿದರೆ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಒತ್ತಡಕ್ಕೆ ಸಿಲುಕಲಿದ್ದಾರೆ ಎನ್ನುವ ಕಿವಿಮಾತನ್ನು ಅಕ್ರಂ ಪಾಕ್ ಬೌಲರ್‌ಗಳಿಗೆ ಹೇಳಿದ್ದಾರೆ.
ಒಳ್ಳೆಯ ತಂಡ ಗೆಲ್ಲಲಿದೆ
ಪಾಕಿಸ್ತಾನ ತಂಡವು ಆತ್ಮವಿಶ್ವಾಸದಿಂದ ಇರಬೇಕು, ಜವಾಬ್ದಾರಿಯುತ ಆಟವಾಡಬೇಕು. ಒಂದುವೇಳೆ ಪಾಕಿಸ್ತಾನ ಆರಂಭದಲ್ಲೇ ವಿಕೆಟ್ ಕಬಳಿಸಿದರೆ ಭಾರತವನ್ನು ಬ್ಯಾಕ್‌ಫುಟ್‌ಗೆ ತಳ್ಳಬಹುದು. ಯಾವ ತಂಡ ಸರ್ವಶ್ರೇಷ್ಠ ಪ್ರದರ್ಶನ ನೀಡುತ್ತೋ ಆ ತಂಡ ಗೆಲ್ಲಲಿದೆ ಎಂದು ಅಕ್ರಂ ಹೇಳಿದ್ದಾರೆ.