ಭಾರತ ೨೦೨೫ರ ಪುರುಷರ ಏಷ್ಯಾ ಕಪ್ ಕ್ರಿಕೆಟ್‌ನಿಂದ ಹಿಂದೆ ಸರಿದಿದೆ. ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹಾಗೂ ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಿಸಿಸಿಐ, ಭಾರತ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದೆ. ಭಾರತದ ಹಿಂದೆ ಸರಿಯುವಿಕೆಯಿಂದ ಟೂರ್ನಿಯ ಭವಿಷ್ಯ ಅನಿಶ್ಚಿತವಾಗಿದೆ.

ಈ ವರ್ಷ ಸೆಪ್ಟೆಂಬರ್‌ನಲ್ಲಿ ಪುರುಷರ ಏಷ್ಯಾ ಕಪ್ 2025 ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಭಾರತ ಆತಿಥ್ಯ ವಹಿಸಬೇಕಿದೆ. ಆದರೆ ಈ ಟೂರ್ನಮೆಂಟ್ ಮೇಲೆ ಇದೀಗ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ, ಏಕೆಂದರೆ ವರದಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಈ ಟೂರ್ನಮೆಂಟ್‌ನಿಂದ ಹಿಂದೆ ಸರಿದಿದೆ ಎಂದು ಹೇಳಲಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರಾದ ಪಾಕಿಸ್ತಾನದ ಸಚಿವ ಮೊಹ್ಸಿನ್ ನಕ್ವಿ ಅವರಿಗೆ ಜೂನ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳಾ ಎಮರ್ಜಿಂಗ್ ಟೀಮ್ ಏಷ್ಯಾ ಕಪ್ ಮತ್ತು ಪುರುಷರ ಏಷ್ಯಾ ಕಪ್ 2025 ರಿಂದ ತಮ್ಮ ತಂಡವನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಬಿಸಿಸಿಐ ತಿಳಿಸಿದೆ. ಹೀಗಾಗಿ ಏಷ್ಯಾ ಕಪ್ 2025ರ ಮೇಲೆ ಸಂಕಷ್ಟದ ಮೋಡಗಳು ಕವಿದಿವೆ.

ಪಹಲ್ಗಾಮ್ ದಾಳಿಯ ನಂತರ ಬಿಸಿಸಿಐನ ದೊಡ್ಡ ನಿರ್ಧಾರ:
ಮಾಧ್ಯಮಗಳ ವರದಿಗಳ ಪ್ರಕಾರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಹೆಚ್ಚುತ್ತಿರುವ ಅಂತರದ ನಂತರ ಬಿಸಿಸಿಐ ಈ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಿಒಕೆ ಮತ್ತು ಪಾಕಿಸ್ತಾನದ ಹಲವಾರು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು 'ಆಪರೇಷನ್ ಸಿಂದೂರ' ಎಂಬ ಸೇನಾ ಕಾರ್ಯಾಚರಣೆ ನಡೆಸಿತ್ತು. ಇದರಲ್ಲಿ ಹಲವಾರು ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು.
ಪಾಕ್ ಪ್ರೇರಿತ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಬಾರದು ಎನ್ನುವ ಆಗ್ರಹ ಕೇಳಿ ಬಂದಿತ್ತು. ಇದರ ನಡುವೆ ಪಾಕಿಸ್ತಾನಕ್ಕೆ ಬುದ್ದಿಕಲಿಸುವ ನಿಟ್ಟಿನಲ್ಲಿ ಬಿಸಿಸಿಐ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಭಾರತೀಯ ತಂಡವು ACC ಆಯೋಜಿಸುತ್ತಿರುವ ಮತ್ತು ಅದರ ಅಧ್ಯಕ್ಷರು ಪಾಕಿಸ್ತಾನದ ಸಚಿವರಾಗಿರುವ ಟೂರ್ನಮೆಂಟ್‌ನಲ್ಲಿ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ತಿಳಿಸಿದೆ ಎಂದು ವರದಿಯಾಗಿದೆ.

ಬಿಸಿಸಿಐ ಹೇಳಿದ್ದೇನು?
ಬಿಸಿಸಿಐ ಮೂಲಗಳ ಪ್ರಕಾರ, ಇದು ರಾಷ್ಟ್ರದ ಭಾವನೆ. ಮುಂಬರುವ ಮಹಿಳಾ ಎಮರ್ಜಿಂಗ್ ಟೀಮ್ ಏಷ್ಯಾಕಪ್‌ನಿಂದ ಹಿಂದೆ ಸರಿಯುವ ಬಗ್ಗೆ ನಾವು ACCಗೆ ಮೌಖಿಕವಾಗಿ ತಿಳಿಸಿದ್ದೇವೆ. ನಾವು ನಿರಂತರವಾಗಿ ಭಾರತ ಸರ್ಕಾರದ ಸಂಪರ್ಕದಲ್ಲಿದ್ದೇವೆ. ಈ ವರ್ಷ ಏಷ್ಯಾ ಕಪ್‌ಗೆ ಭಾರತ ಆತಿಥ್ಯ ವಹಿಸಬೇಕಿತ್ತು. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಈ ಲೀಗ್ ಅನ್ನು ಟಿ20 ಸ್ವರೂಪದಲ್ಲಿ ಆಡಬೇಕಿದೆ. 2023ರ ಏಷ್ಯಾ ಕಪ್‌ನಲ್ಲಿ ಭಾರತ ಶ್ರೀಲಂಕಾವನ್ನು ಸೋಲಿಸಿ ಟ್ರೋಫಿ ಗೆದ್ದಿತ್ತು.

ಏಷ್ಯಾ ಕಪ್ 2025ರ ಮೇಲೆ ಸಂಕಷ್ಟ
ಏಷ್ಯಾಕಪ್‌ನ ಹೆಚ್ಚಿನ ಪ್ರಾಯೋಜಕರು ಭಾರತದಿಂದ ಬಂದವರು, ಆದ್ದರಿಂದ ಬಿಸಿಸಿಐ ಏಷ್ಯಾಕಪ್ 2025 ರಿಂದ ಹಿಂದೆ ಸರಿದರೆ ಟೂರ್ನಮೆಂಟ್ ರದ್ದಾಗಬಹುದು. ಏಷ್ಯಾಕಪ್‌ನಲ್ಲಿ ಭಾರತದ ಜೊತೆಗೆ ಶ್ರೀಲಂಕಾ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಭಾಗವಹಿಸುತ್ತವೆ.

ಕಳೆದ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿತ್ತು. ಆದರೆ ಬಿಸಿಸಿಐ, ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಿಕೊಡುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿತ್ತು. ಹೀಗಾಗಿ ಬಹುರಾಷ್ಟ್ರೀಯ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು. ಭಾರತ ಕ್ರಿಕೆಟ್ ತಂಡವು ತನ್ನ ಪಾಲಿನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಫೈನಲ್‌ನಲ್ಲಿ ಶ್ರೀಲಂಕಾವನ್ನು ಅನಾಯಾಸವಾಗಿ ಮಣಿಸಿದ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು ಇದೇ ವರ್ಷದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಪಾಕಿಸ್ತಾನ ಆತಿಥ್ಯ ವಹಿಸಿತ್ತು. ಮತ್ತೊಮ್ಮೆ ಭಾರತ ತಂಡವು ಪಾಕ್ ಪ್ರವಾಸಕ್ಕೆ ಹಿಂದೇಟು ಹಾಕಿತ್ತು. ಪರಿಣಾಮ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಗೊಂಡಿತು. ಭಾರತ ತನ್ನ ಪಾಲಿನ ಪಂದ್ಯಗಳನ್ನು ದುಬೈನಲ್ಲಿ ಆಡಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.