ಆರ್‌ಸಿಬಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದ್ದು, ಎಂಗಿಡಿ ಬದಲಿಗೆ ಜಿಂಬಾಬ್ವೆ ವೇಗಿ ಮುಜರಬಾನಿ ತಂಡ ಸೇರಿದ್ದಾರೆ. ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಮುಜರಬಾನಿ ೭೦ ಟಿ೨೦ ಪಂದ್ಯಗಳಲ್ಲಿ ೭೮ ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆಲ್ಲುವತ್ತ ದೃಷ್ಟಿ ನೆಟ್ಟಿದೆ. ಕೆಕೆಆರ್ ತಂಡವು ಪೋವೆಲ್ ಬದಲಿಗೆ ಶಿವಂ ಶುಕ್ಲಾ ಅವರನ್ನು ಸೇರಿಸಿಕೊಂಡಿದೆ.
ಬೆಂಗಳೂರು: ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇನ್ನೂ ಎರಡು ಲೀಗ್ ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಚೊಚ್ಚಲ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ ತಂಡವು ಪ್ಲೇ ಆಫ್‌ಗಾಗಿ ಹೊಸ ರಣತಂತ್ರ ಹೆಣೆದಿದ್ದು, ಜಿಂಬಾಬ್ವೆ ಮೂಲದ ನೀಳಕಾಯದ ವೇಗಿ ಬ್ಲೆಸ್ಸಿಂಗ್ ಮುಜರಬಾನಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.
ಸದ್ಯ ಆರ್‌ಸಿಬಿ ತಂಡದಲ್ಲಿ ದಕ್ಷಿಣ ಆಫ್ರಿಕಾ ಮೂಲದ ವೇಗಿ ಲುಂಗಿ ಎಂಗಿಡಿ ಇದೇ ಮೇ 26ಕ್ಕೆ ತವರಿಗೆ ವಾಪಾಸ್ಸಾಗಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಲು ಅರ್ಗತೆ ಪಡೆದುಕೊಂಡಿದೆ. ಹೀಗಾಗಿ ಮಹತ್ವದ ಟೂರ್ನಿಗೆ ಹರಿಣಗಳ ಪಡೆಯಲ್ಲಿ ಲುಂಗಿ ಎಂಗಿಡಿ ಸ್ಥಾನ ಪಡೆದಿದ್ದು, ನ್ಯಾಷನಲ್ ಡ್ಯೂಟಿಗಾಗಿ ಐಪಿಎಲ್ ಅರ್ಧಕ್ಕೆ ತೊರೆಯಲಿದ್ದಾರೆ. ಹೀಗಾಗಿ ಪ್ಲೇ ಅಫ್ ಪಂದ್ಯಗಳಿಗಾಗಿ ಆರ್‌ಸಿಬಿ ಹೊಸ ದಾಳ ಉರುಳಿಸಿದ್ದು, ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ತಾತ್ಕಾಲಿಕವಾಗಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಅಪಾಯಕಾರಿ ವೇಗಿ ಮುಜರಬಾನಿ:
ಆರ್‌ಸಿಬಿ ತಂಡಕ್ಕೆ ಜಿಂಬಾಬ್ವೆ ವೇಗಿಯ ಸೇರ್ಪಡೆ ತಂಡಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದೆ. ಲುಂಗಿ ಎಂಗಿಡಿ ಬದಲಿ ಆಟಗಾರನಾಗಿ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಟಿ20 ಕ್ರಿಕೆಟ್ ಮಾದರಿಯಲ್ಲಿ ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅವರಿಗೆ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಇದೆ.
ಬ್ಲೆಸ್ಸಿಂಗ್ ಮುಜರಬಾನಿ ಇದುವರೆಗೂ 70 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟಾರೆ 78 ವಿಕೆಟ್ ಕಬಳಿಸಿದ್ದಾರೆ. ಇನ್ನು ಬ್ಲೆಸ್ಸಿಂಗ್ ಮುಜರಬಾನಿ ಅವರ ಬೌಲಿಂಗ್ ಎಕಾನಮಿ ಕೇವಲ 7.02 ಆಗಿದೆ. ಇದರರ್ಥ ಬ್ಲೆಸ್ಸಿಂಗ್ ಮುಜರಬಾನಿ ಆರ್‌ಸಿಬಿ ಪಾಲಿಗೆ ಒಳ್ಳೆಯ ಆಯ್ಕೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪ್ಲೇ ಆಫ್‌ಗೆ ಎಂಟ್ರಿಕೊಟ್ಟ ಆರ್‌ಸಿಬಿ:
ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದೆ. ಸದ್ಯ ಆಡಿದ 12 ಪಂದ್ಯಗಳಲ್ಲಿ ಆರ್‌ಸಿಬಿ 8 ಗೆಲುವು, 3 ಸೋಲು ಹಾಗೂ ಒಂದು ರದ್ದಾದ ಪಂದ್ಯ ಸೇರಿದಂತೆ 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನುಳಿದ ಎರಡು ಪಂದ್ಯಗಳ ಪೈಕಿ ಕನಿಷ್ಠ ಒಂದು ಪಂದ್ಯ ಜಯಿಸಿದರೆ, ಆರ್‌ಸಿಬಿ ತಂಡವು ಟಾಪ್ 2 ಪಟ್ಟಿಯೊಳಗೆ ಸ್ಥಾನ ಪಡೆದು, ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡುವ ಸಾಧ್ಯತೆಯಿದೆ.
ಕಳೆದ 17 ಆವೃತ್ತಿಗಳನ್ನು ಆಡಿಯೂ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗಿರುವ ಆರ್‌ಸಿಬಿ ಈ ತಂಡವು ಬ್ಯಾಟಿಂಗ್-ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸಾಕಷ್ಟು ಬಲಾಢ್ಯವಾಗಿ ಗುರುತಿಸಿಕೊಂಡಿದ್ದು, ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ.
ಕೆಕೆಆರ್ ತಂಡಕ್ಕೂ ಬದಲಿ ಆಟಗಾರನ ಸೇರ್ಪಡೆ:
ಇನ್ನು ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲೂ ಬದಲಿ ಆಟಗಾರನ ಸೇರ್ಪಡೆಯಾಗಿದೆ. ಕೆಕೆಆರ್ ತಂಡದಲ್ಲಿದ್ದ ವೆಸ್ಟ್ ಇಂಡೀಸ್ ಆಲ್ರೌಂಡರ್ ರೋವ್ಮನ್ ಪೋವೆಲ್, ಇಂಗ್ಲೆಂಡ್ ಎದುರಿನ ಸರಣಿ ಆಡಲು ಕೆರಿಬಿಯನ್ ಪಡೆಯನ್ನು ಕೂಡಿಕೊಳ್ಳಲಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಮಧ್ಯಪ್ರದೇಶ ಮೂಲದ ಸ್ಪಿನ್ನರ್ ಶಿವಂ ಶುಕ್ಲಾ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶಿವಂ ಶುಕ್ಲಾ ಅವರಿಗೆ ಕೆಕೆಆರ್ ಫ್ರಾಂಚೈಸಿ 30 ಲಕ್ಷ ರುಪಾಯಿ ನೀಡಿ ತಾತ್ಕಾಲಿಕವಾಗಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಸದ್ಯ ಕೆಕೆಆರ್ ತಂಡವು 13 ಐಪಿಎಲ್ ಪಂದ್ಯಗಳನ್ನಾಡಿ 5 ಗೆಲುವು ಹಾಗೂ 6 ಸೋಲು ಕಂಡಿದ್ದು, ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ.


