ಆಗಸ್ಟ್ 19 ರಂದು ಏಷ್ಯಾಕಪ್‌ಗಾಗಿ ಭಾರತ ತಂಡ ಪ್ರಕಟವಾಗುವ ಸಾಧ್ಯತೆ. ಜಸ್ಪ್ರೀತ್ ಬುಮ್ರಾ ವಾಪಸಾತಿ, ಶುಭ್‌ಮನ್ ಗಿಲ್ ಉಪನಾಯಕರಾಗುವ ಸಾಧ್ಯತೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡದಲ್ಲಿ ಹಲವು ಬದಲಾವಣೆಗಳ ನಿರೀಕ್ಷೆ.

ಮುಂಬೈ: ಏಷ್ಯಾಕಪ್‌ಗಾಗಿ ಭಾರತ ಕ್ರಿಕೆಟ್ ತಂಡದ ಪ್ರಕಟಣೆ ಆಗಸ್ಟ್‌ 19ರಂದು ಆಗಬಹುದೆಂದು ನಿರೀಕ್ಷಿಸಲಾಗಿದೆ. ಟಿ20 ಮಾದರಿಯ ಟೂರ್ನಿಗೆ ದುಬೈ ಆತಿಥ್ಯ ವಹಿಸಲಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಶೀಘ್ರದಲ್ಲೇ ಸಭೆ ಸೇರಿ ತಂಡವನ್ನು ಆಯ್ಕೆ ಮಾಡಲಿದೆ. ವೇಗಿ ಜಸ್ಪ್ರೀತ್ ಬುಮ್ರಾ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಏಷ್ಯಾಕಪ್‌ನಲ್ಲಿ ಆಡಿದರೆ, ಕೆಲಸದ ಹೊರೆಯ ನಿರ್ವಹಣೆಯ ಭಾಗವಾಗಿ ಬುಮ್ರಾ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಿಂದ ಹೊರಗಿಡಬಹುದು. ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡದ ಉಪನಾಯಕನಾಗಿ ಶುಭ್‌ಮನ್‌ ಗಿಲ್ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ

ಹೀಗಾದಲ್ಲಿ, ಅಕ್ಷರ್ ಪಟೇಲ್ ಉಪನಾಯಕ ಸ್ಥಾನ ಕಳೆದುಕೊಳ್ಳಲಿದ್ದಾರೆ. ಆರಂಭಿಕನಾಗಿ ಸಂಜು ಸ್ಯಾಮ್ಸನ್ ಮುಂದುವರಿಯುವ ಸಾಧ್ಯತೆಯಿದೆ. ಸಂಜು ಮೊದಲ ವಿಕೆಟ್ ಕೀಪರ್ ಆಯ್ಕೆ ಆಗಿದ್ದರೆ, ಜಿತೇಶ್ ಶರ್ಮಾ ಅಥವಾ ಧ್ರುವ್ ಜುರೆಲ್ ಅವರಲ್ಲಿ ಒಬ್ಬರನ್ನು ಎರಡನೇ ವಿಕೆಟ್ ಕೀಪರ್ ಆಗಿ ಪರಿಗಣಿಸಬಹುದು. ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಸೆಪ್ಟೆಂಬರ್ 14 ರಂದು ಭಾರತ-ಪಾಕಿಸ್ತಾನ ಸೂಪರ್ ಪಂದ್ಯ ನಡೆಯಲಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾದ ಆಟಗಾರರ ಫಿಟ್‌ನೆಸ್ ವರದಿ ಬಂದ ನಂತರ ತಂಡವನ್ನು ಪ್ರಕಟಿಸಲಾಗುತ್ತದೆ.

ಹರ್ನಿಯಾ ಶಸ್ತ್ರಚಿಕಿತ್ಸೆಯ ನಂತರ ವಿಶ್ರಾಂತಿ ಪಡೆಯುತ್ತಿರುವ ಸೂರ್ಯಕುಮಾರ್ ಇತ್ತೀಚೆಗೆ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ ಪಂದ್ಯಕ್ಕೆ ಸಿದ್ಧವಾಗಿಲ್ಲ. ಐಪಿಎಲ್ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಸೂರ್ಯಕುಮಾರ್ ಜೂನ್‌ನಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ನಾಯಕತ್ವದ ತಂಡದಲ್ಲಿ ಗಿಲ್ ಕೊನೆಯದಾಗಿ ಆಡಿದ್ದರು. ಆಗ ಗಿಲ್ ಉಪನಾಯಕರಾಗಿದ್ದರು. ಗಿಲ್ ಮರಳಿದರೆ ಆರಂಭಿಕನಾಗಿ ಆಡುವ ನಿರೀಕ್ಷೆಯಿದೆ.

ಹಾಗಾದರೆ, ದಕ್ಷಿಣ ಆಫ್ರಿಕಾದಲ್ಲಿ ಭಾರತಕ್ಕಾಗಿ ಆರಂಭಿಕರಾಗಿದ್ದ ಅಭಿಷೇಕ್ ಶರ್ಮಾ-ಸಂಜು ಸ್ಯಾಮ್ಸನ್ ಜೋಡಿ ಬದಲಾಗಲಿದೆ. ಗಿಲ್-ಸಂಜು ಜೋಡಿ ಭಾರತ ಪರ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಹೆಚ್ಚು. ಆರಂಭಿಕ ಸ್ಥಾನದಿಂದ ಸಂಜು ಸ್ಥಳಾಂತರಗೊಂಡರೆ, ಅವರನ್ನು ನಾಲ್ಕನೇ ಸ್ಥಾನದಲ್ಲಿ ಆಡಿಸುತ್ತಾರಾ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಸದ್ಯ ಐಸಿಸಿ ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಅಭಿಷೇಕ್ ಶರ್ಮಾ ಸದ್ಯ ನಂ.1 ಸ್ಥಾನದಲ್ಲಿದ್ದಾರೆ. ಹೀಗಾಗಿ ಶುಭ್‌ಮನ್ ಗಿಲ್ ಅವರಿಗಾಗಿ ಪ್ರತಿಭಾನ್ವಿತ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಅವರನ್ನು ಬಲಿ ನೀಡಲಾಗುತ್ತಾ ಎನ್ನುವ ಚರ್ಚೆ ಕೂಡಾ ಜೋರಾಗಿದೆ. ಕಳೆದೊಂದು ವರ್ಷದಿಂದ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸ್ಪೋಟಕ ಆರಂಭವನ್ನು ಒದಗಿಸಿಕೊಡುತ್ತಿದ್ದಾರೆ. ಸಂಜು ಸ್ಯಾಮ್ಸನ್ ಆರಂಭಿಕನಾಗಿ ಕಣಕ್ಕಿಳಿದ ಬಳಿಕ ಮೈಚಳಿಬಿಟ್ಟು ಬ್ಯಾಟ್ ಬೀಸುತ್ತಿದ್ದಾರೆ. ಹೀಗಾಗಿ ಈ ಕಾಂಬಿನೇಷನ್ ಕುರಿತಂತೆ ಸಾಕಷ್ಟು ಕುತೂಹಲಗಳು ಜೋರಾಗಿವೆ.

ಏಷ್ಯಾಕಪ್ ಟೂರ್ನಿಗೆ ಭಾರತದ ಸಂಭಾವ್ಯ ತಂಡ:

ಬ್ಯಾಟರ್‌ಗಳು: ಸೂರ್ಯಕುಮಾರ್ ಯಾದವ್, ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ

ವಿಕೆಟ್ ಕೀಪರ್‌: ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸ್ಥಾನ ಪಡೆಯಲಿದ್ದು, ಎರಡನೇ ವಿಕೆಟ್ ಕೀಪರ್ ಬ್ಯಾಟರ್‌ ಸ್ಥಾನಕ್ಕೆ ಜಿತೇಶ್ ಶರ್ಮಾ ಹಾಗೂ ಧ್ರುವ್ ಜುರೇಲ್ ನಡುವೆ ಪೈಪೋಟಿ ಏರ್ಪಟ್ಟಿದೆ.

ಆಲ್ರೌಂಡರ್: ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್.

ಬೌಲಿಂಗ್ ವಿಭಾಗ: ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ ಹಾಗೂ ಪ್ರಸಿದ್ದ್ ಕೃಷ್ಣ.