ದುಬೈನಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನಕ್ಕೆ ಆರಂಭಿಕ ಆಘಾತ. ಭಾರತದ ವೇಗಿಗಳು ಮೊದಲ ಎರಡು ಓವರ್‌ಗಳಲ್ಲಿ ಎರಡು ವಿಕೆಟ್ ಪಡೆದು ಪಾಕಿಸ್ತಾನಕ್ಕೆ ಆರಂಭಿಕ ಹೊಡೆತ ನೀಡಿದ್ದಾರೆ.
ದುಬೈ: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ಟೀಂ ಇಂಡಿಯಾ ವೇಗಿಗಳ ದಾಳಿಗೆ ಕಂಗಾಲಾಗಿ ಹೋಗಿದೆ. ಮೊದಲ ಎರಡು ಓವರ್ ಅಂತ್ಯಕ್ಕೆ ಒಂದಂಕಿ ಮೊತ್ತಕ್ಕೆ ಪಾಕಿಸ್ತಾನದ ಇಬ್ಬರು ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ.
ಪಾಕ್‌ಗೆ ಆರಂಭಿಕ ಆಘಾತ
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಗಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಇನ್ನು ಮೊದಲ ಓವರ್ ದಾಳಿಗಿಳಿದ ಹಾರ್ದಿಕ್ ಪಾಂಡ್ಯ, ಮೊದಲ ಅಧಿಕೃತ ಎಸೆತದಲ್ಲೇ ಫಾರ್ಮ್‌ನಲ್ಲಿದ್ದ ಬ್ಯಾಟರ್ ಸೈಮ್ ಆಯುಬ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಇದರ ಬೆನ್ನಲ್ಲೇ ಎರಡನೇ ಓವರ್ ದಾಳಿಗಿಳಿದ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ, ಅನುಭವಿ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ದೊಡ್ಡ ಹೊಡೆತಕ್ಕೆ ಯತ್ನಿಸಿದ ಮೊಹಮ್ಮದ್ ಹ್ಯಾರಿಸ್, ಹಾರ್ದಿಕ್ ಪಾಂಡ್ಯಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು.
ಮೊದಲ ಎರಡು ಓವರ್ ಅಂತ್ಯದ ವೇಳೆಗೆ ಪಾಕಿಸ್ತಾನ ತಂಡವು 7 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಸದ್ಯ ಮೊದಲ ಮೂರು ಓವರ್ ಮುಕ್ತಾಯವಾಗಿದ್ದು, ಪಾಕಿಸ್ತಾನ ತಂಡವು ಎರಡು ವಿಕೆಟ್ ನಷ್ಟಕ್ಕೆ 20 ರನ್ ಬಾರಿಸಿದೆ. ಫಖರ್ ಜಮಾನ್ 10 ಹಾಗೂ ಶಾಹಿಬ್‌ಝಾದ್ ಫರ್ಹಾನ್ 3 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇನ್ನು ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ದುಕೊಂಡಿದ್ದು, ಆರಂಭದಲ್ಲಿ ಕೊಂಚ ಹಿನ್ನಡೆಯನ್ನುಂಟು ಮಾಡಿರುವಂತೆ ಕಾಣುತ್ತಿದೆ. ಉಭಯ ತಂಡಗಳು ಯಾವುದೇ ಬದಲಾವಣೆಗಳಲ್ಲದೇ ಕಣಕ್ಕಿಳಿದಿವೆ. ಎರಡೂ ತಂಡದಲ್ಲೂ ಆಡುವ ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ತಂಡಗಳು ಹೀಗಿವೆ:
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಪಾಕಿಸ್ತಾನ: ಸೈಮ್, ಫರ್ಹಾನ್, ಹಾರಿಸ್, ಫಖರ್, ಸಲ್ಮಾನ್ ಆಘಾ(ನಾಯಕ), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಹೀಮ್, ಶಾಹೀನ್, ಸುಫಿಯಾನ್, ಅಬ್ರಾರ್ ಅಹ್ಮದ್.


