Smriti Mandhana Confirms Engagement to Palash Muchaal ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ, ಸಂಗೀತ ಸಂಯೋಜಕ ಪಲಾಶ್ ಮುಚಾಲ್ ಅವರೊಂದಿಗಿನ ತಮ್ಮ ನಿಶ್ಚಿತಾರ್ಥವನ್ನು ವಿಶಿಷ್ಟ ಇನ್ಸ್‌ಸ್ಟಾಗ್ರಾಮ್ ರೀಲ್ ಮೂಲಕ ಖಚಿತಪಡಿಸಿದ್ದಾರೆ.
ಮುಂಬೈ (ನ.20): ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಮತ್ತು ವಿಶ್ವಕಪ್ ವಿಜೇತೆ ಸ್ಮೃತಿ ಮಂಧಾನ ತಮ್ಮ ನಿಶ್ಚಿತಾರ್ಥವನ್ನು ದೃಢಪಡಿಸಿದ್ದಾರೆ. ತಮ್ಮ ಜೀವನದ ಈ ವಿಶೇಷ ಕ್ಷಣವನ್ನು ಹಂಚಿಕೊಳ್ಳಲು ಅವರು ಬಹಳ ಡಿಫರೆಂಟ್ ಆದ ರೀತಿಯನ್ನು ಆರಿಸಿಕೊಂಡಿದ್ದಾರೆ. ತಾವು ಹಾಗೂ ಇತರ ಟೀಮ್ ಇಂಡಿಯಾ ಆಟಗಾರ್ತಿಯರನ್ನು ಒಳಗೊಂಡ ಇನ್ಸ್‌ಸ್ಟಾಗ್ರಾಮ್ ರೀಲ್ ಮೂಲಕ ತಮ್ಮ ಜೀವನದ ವಿಶೇಷ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಸ್ಮೃತಿ ಮಂಧನಾ ತಮ್ಮ ಎಂಗೇಜ್‌ಮೆಂಟ್ ಘೋಷಣೆ ಮಾಡಿದ ರೀತಿಯನ್ನು ಹಲವರು ಇಷ್ಟಪಟ್ಟಿದ್ದಾರೆ. ಸ್ಮೃತಿ ಮಂದನಾ ಅವರು ಗಾಯಕ ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚಾಲ್ ಅವರನ್ನು ವಿವಾಹವಾಗಲಿದ್ದಾರೆ. ಪಲಾಶ್ ಮುಚಾಲ್ ಅವರು ಪ್ರಸಿದ್ಧ ಗಾಯಕಿ ಪಲಕ್ ಮುಚಾಲ್ ಅವರ ಸಹೋದರ. ಆಕೆ ಹಂಚಿಕೊಂಡಿರುವ ರೀಲ್‌ನಲ್ಲಿ ಸ್ಮೃತಿ ಮಂದನಾ ಅವರೊಂದಿಗೆ ಜೆಮಿಮಾ ರೋಡ್ರಿಗಸ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್ ಹಾಗೂ ಅರುಂಧತಿ ರೆಡ್ಡಿ ಕೂಡ ಇದ್ದಾರೆ.
ಪರ್ಫೆಕ್ಟ್ ಆಗಿ ಕೊರಿಯೋಗ್ರಾಫ್ ಮಾಡಿದ ವಿಡಿಯೋ ಇದಾಗಿದ್ದು 2006ರಲ್ಲಿ ರಿಲೀಸ್ ಆಗಿ ಲಗೋ ರಹೋ ಮುನ್ನಾ ಭಾಯಿ ಸಿನಿಮಾದ 'ಸಮ್ಜೋ ಹೋಹಿ ಗಯಾ..' ಹಾಡನ್ನು ಸೇರಿಸಿದ್ದಾರೆ.ಈ ವಿಡಿಯೋ ಸೋಶಿಯಲ್ ಮೀಡಿಯಾಸಲ್ಲಿ ವೈರಲ್ ಆಗಿದೆ. ವಿಡಿಯೋದ ಕೊನೆಯ ಫ್ರೇಮ್‌ನಲ್ಲಿ ಸ್ಮಥತಿ ಮಂದನಾ ತಮ್ಮ ಉಂಗುರ ಬೆರಳಿನಲ್ಲಿ ಧರಿಸಿರುವ ಉಂಗುರವನ್ನು ಕ್ಯಾಮೆರಾಗೆ ತೋರಿಸುತ್ತಾರೆ. ಅದರೊಂದಿಗೆ ದೀರ್ಘಕಾಲದ ರೂಮರ್‌ಗಳಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.
ಈಗಾಗಲೇ ಹಿಂಟ್ ನೀಡಿದ ಪಲಾಶ್
ಅಕ್ಟೋಬರ್‌ನಲ್ಲಿ ಇಂದೋರ್‌ನ ಸ್ಟೇಟ್ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಪಲಾಶ್ ಅವರು ಸ್ಮೃತಿ ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಸುಳಿವು ನೀಡಿದರು. ಅವರು ಅದನ್ನು ನೇರವಾಗಿ ದೃಢೀಕರಿಸದಿದ್ದರೂ, ಸ್ಮೃತಿ ಮಂಧಾನ ಶೀಘ್ರದಲ್ಲೇ "ಇಂದೋರ್‌ನ ಸೊಸೆ" ಆಗುತ್ತಾರೆ ಎಂದು ತಮಾಷೆಯಾಗಿ ಹೇಳಿದ್ದರು.
2025 ರಲ್ಲಿ ಭಾರತ ಐತಿಹಾಸಿಕ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆಲ್ಲುವ ಹಾದಿಯಲ್ಲಿ ಸ್ಮೃತಿ ಮಂಧಾನಾ ಅವರ ಪ್ರದರ್ಶನ ಅದ್ಭುತವಾಗಿತ್ತು. ಅವರು ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 54.22 ರ ಸರಾಸರಿಯಲ್ಲಿ 434 ರನ್ ಗಳಿಸಿದರು, ಇದರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಗೆಲ್ಲಿಸಿದ ಶತಕವೂ ಸೇರಿದೆ. ಈ ಅವಧಿಯಲ್ಲಿ, ಮಂದನಾ ಮಹಿಳಾ ಏಕದಿನ ವಿಶ್ವಕಪ್‌ನ ಒಂದೇ ಋತುವಿನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾದರು. 2017 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಮಿಥಾಲಿ ರಾಜ್ ಅವರ 409 ರನ್‌ಗಳ ದಾಖಲೆಯನ್ನು ಅವರು ಮೀರಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅವರ ಪ್ರಭಾವ ಸ್ಪಷ್ಟವಾಗಿತ್ತು, ಅಲ್ಲಿ ಅವರು ಮತ್ತು ಶಫಾಲಿ ವರ್ಮಾ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಇಬ್ಬರೂ ಕೇವಲ ಏಳು ಓವರ್‌ಗಳಲ್ಲಿ 50 ರನ್‌ಗಳ ಜೊತೆಯಾಟವಾಡುವ ಮೂಲಕ, ಆಫ್ರಿಕಾ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ ಈ ವಿಶ್ವಕಪ್‌ನಲ್ಲಿ 470 ರನ್‌ಗಳೊಂದಿಗೆ ಅಗ್ರ ಸ್ಕೋರರ್ ಆಗಿ ಮುಗಿಸಿದರೂ, ಪಂದ್ಯಾವಳಿಯಾದ್ಯಂತ ಮಂಧಾನ ಅವರ ಪ್ರಾಬಲ್ಯ ಸ್ಪಷ್ಟವಾಗಿತ್ತು.


