ದುಬೈನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಏಷ್ಯಾಕಪ್ ಪಂದ್ಯದ ಹವಾಮಾನ ಮುನ್ಸೂಚನೆ ಮತ್ತು ಪಿಚ್ ವರದಿ. ಮಳೆಯ ಭೀತಿ ಇಲ್ಲದಿದ್ದರೂ, ಆಟಗಾರರು ದುಬೈನ ಪ್ರತಿಕೂಲ ಹವಾಮಾನವನ್ನು ಎದುರಿಸಬೇಕಾಗುತ್ತದೆ. ಪಿಚ್ ಸ್ಪಿನ್ನರ್‌ಗಳಿಗೆ ಪೂರಕವಾಗಿರುತ್ತದೆ ಎಂದು ಅಂದಾಜಿಸಲಾಗಿದೆ.

ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ-ಪಾಕಿಸ್ತಾನ ಪಂದ್ಯ. ಪಂದ್ಯದ ರೋಮಾಂಚಕತೆ ಎಷ್ಟರ ಮಟ್ಟಿಗೆ ಇರಲಿದೆ, ಪಿಚ್ ಮತ್ತು ಹವಾಮಾನ ಪಂದ್ಯಕ್ಕೆ ಪೂರಕವಾಗುತ್ತದೆಯೇ? ಭಾರತ-ಪಾಕ್ ಪಂದ್ಯಕ್ಕೆ ವೇದಿಕೆಯಾಗಿರುವ ದುಬೈ ಕ್ರಿಕೆಟ್ ಕ್ರೀಡಾಂಗಣದ ಹವಾಮಾನ ಮುನ್ಸೂಚನೆ ಮತ್ತು ಪಿಚ್ ವರದಿಯ ಕಂಪ್ಲೀಟ್ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಭಾರತ-ಪಾಕಿಸ್ತಾನ ಪಂದ್ಯದ ಹವಾಮಾನ ವರದಿ

ಅಕ್ವಾವೆದರ್ ವರದಿಯ ಪ್ರಕಾರ, ದುಬೈನಲ್ಲಿ ಇಂದು ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ಮಳೆಯ ಭೀತಿ ಇಲ್ಲ. ಹಗಲಿನಲ್ಲಿ 39 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಮಳೆ ಬರುವ ಸಾಧ್ಯತೆ ಇಲ್ಲದಿದ್ದರೂ, ಆಟಗಾರರು ದುಬೈನ ಪ್ರತಿಕೂಲ ಹವಾಮಾನವನ್ನು ಎದುರಿಸಬೇಕಾಗುತ್ತದೆ. ಗಾಳಿಯ ವೇಗ ಗಂಟೆಗೆ 33 ಕಿ.ಮೀ. ವರೆಗೆ ಇರುತ್ತದೆ ಎಂದು ವರದಿಯಾಗಿದೆ. ಪಂದ್ಯದ ಸಮಯದಲ್ಲಿ ರಾತ್ರಿ 30 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಅಂದಾಜಿಸಲಾಗಿದೆ. ಆಕಾಶ ನಿಚ್ಚಳವಾಗಿರುತ್ತದೆ, ಆದರೆ ಗಾಳಿಯ ಗುಣಮಟ್ಟ ಅಷ್ಟೇನೂ ಉತ್ತಮವಾಗಿರುವುದಿಲ್ಲ ಎಂದು ವರದಿಯಾಗಿದೆ.

ಭಾರತ-ಪಾಕಿಸ್ತಾನ ಪಂದ್ಯದ ಪಿಚ್ ರಿಪೋರ್ಟ್

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಸೆಂಟ್ರಲ್ ಪಿಚ್ ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಿದೆ. ದುಬೈ ಪಿಚ್‌ನಲ್ಲಿ ಹೆಚ್ಚು ವೇಗ ನಿರೀಕ್ಷಿಸುವುದು ಕಷ್ಟ. ಇಲ್ಲಿನ ಪಿಚ್ ವೇಗಿಗಳಿಗಿಂತ ಸ್ಪಿನ್ನರ್‌ಗಳಿಗೆ ಪೂರಕವಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಮುಂದಿನ ಪಂದ್ಯಗಳಲ್ಲಿ ಪಿಚ್ ಸ್ಪಿನ್‌ಗೆ ಹೆಚ್ಚು ಪೂರಕವಾಗುವ ಸಾಧ್ಯತೆ ಇದೆ. ರಾತ್ರಿಯ ವೇಳೆಗೆ ಇಬ್ಬನಿ ಬೀಳುವ ಸಾಧ್ಯತೆಯೂ ಇದೆ.

ಭಾರತ ಪಾಕಿಸ್ತಾನ ಪಂದ್ಯದ ಇಂಟ್ರೆಸ್ಟಿಂಗ್ ಅಂಕಿ-ಅಂಶ

ದುಬೈನಲ್ಲಿ ಇಂದಿನ ಏಷ್ಯಾಕಪ್ ಪಂದ್ಯಕ್ಕೆ ಇಳಿಯುವಾಗ, ಪಾಕಿಸ್ತಾನ ಕ್ರಿಕೆಟ್ ತಂಡದ ಮೇಲೆ ಭಾರತ ತಂಡಕ್ಕೆ ಸ್ಪಷ್ಟ ಮೇಲುಗೈ ಇದೆ. ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ 19 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 10 ಮತ್ತು ಪಾಕಿಸ್ತಾನ 6 ಪಂದ್ಯಗಳನ್ನು ಗೆದ್ದಿವೆ. ಮೂರು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಟಿ20 ಮಾದರಿಯಲ್ಲಿ, ಭಾರತಕ್ಕೆ ಸ್ಪಷ್ಟ ಮೇಲುಗೈ ಇದೆ. 13 ಪಂದ್ಯಗಳಲ್ಲಿ 10 ರಲ್ಲಿ ಭಾರತ ಗೆದ್ದಿದೆ.

ಭಾರತ ಕ್ರಿಕೆಟ್ ತಂಡವು ಕಳೆದ ಒಂದೂವರೆ ದಶಕದಿಂದೀಚೆಗೆ ಇದೇ ಮೊದಲ ಬಾರಿಗೆ ಬಹುಪಕ್ಷೀಯ ಟೂರ್ನಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಿಲ್ಲದೇ ಕಣಕ್ಕಿಳಿಯುತ್ತಿದೆ. ಆರಂಭದಲ್ಲೇ ಭಾರತದ ಎರಡು-ಮೂರು ವಿಕೆಟ್ ಕಬಳಿಸಿದರೆ, ತಂಡವನ್ನು ಕಾಪಾಡಲು ವಿರಾಟ್ ಕೊಹ್ಲಿ ಇಲ್ಲ. ಹೀಗಾಗಿ ಪಾಕಿಸ್ತಾನ ತಂಡವು ಭಾರತದ ಮೇಲೆ ಒತ್ತಡ ಹೇರಬಹುದು ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಮಿಸ್ಬಾ ಉಲ್ ಹಕ್ ಹೇಳಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ಮೈಂಡ್‌ ಗೇಮ್ ಆರಂಭಿಸಿದೆ. ಇನ್ನು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್, ಹೊರಗಿನ ಮಾತಿಗೆಲ್ಲ ಗಮನ ಕೊಡದೇ ಕೇವಲ ಮ್ಯಾಚ್‌ನತ್ತ ಗಮನಹರಿಸಿ ಎಂದು ಕಿವಿಮಾತು ಹೇಳಿದ್ದಾರೆ.