* ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿಂದು ಭಾರತ-ಪಾಕಿಸ್ತಾನ ಮುಖಾಮುಖಿ*  ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ರೋಹಿತ್ ಶರ್ಮಾ ಪಡೆ* ಪಾಕಿಸ್ತಾನ ಎದುರು ಮುಗ್ಗರಿಸಿ ಒತ್ತಡಕ್ಕೆ ಸಿಲುಕಿರುವ ಟೀಂ ಇಂಡಿಯಾ

ದುಬೈ(ಸೆ.06): ಏಷ್ಯಾಕಪ್‌ ಟಿ20 ಟೂರ್ನಿಯ ಫೈನಲ್‌ಗೇರುವ ರೇಸ್‌ನಲ್ಲಿ ಉಳಿದುಕೊಳ್ಳಬೇಕಿದ್ದರೆ ಭಾರತ ತನ್ನ ಬೌಲಿಂಗ್‌ ಸಮಸ್ಯೆಯನ್ನು ಸರಿಪಡಿಸಿಕೊಂಡು ಮಂಗಳವಾರ ಸೂಪರ್‌-4 ಹಂತದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಬೇಕಿದೆ. ರವೀಂದ್ರ ಜಡೇಜಾ, ಹರ್ಷಲ್‌ ಪಟೇಲ್‌, ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿಯಲ್ಲಿ ತಂಡಕ್ಕೆ ಹೆಚ್ಚು ಆಯ್ಕೆಗಳು ಇಲ್ಲದಿದ್ದರೂ ಇರುವುದರಲ್ಲೇ ಉತ್ತಮ ಬೌಲಿಂಗ್‌ ಪಡೆಯನ್ನು ಆಡಿಸಬೇಕಿದ. ಭಾನುವಾರ ಪಾಕಿಸ್ತಾನ ವಿರುದ್ಧ ಐವರು ಬೌಲರ್‌ಗಳನ್ನು ಆಡಿಸುವ ಪ್ರಯೋಗ ಕೈಹಿಡಿಯಲಿಲ್ಲ. ಭುವನೇಶ್ವರ್‌ ಕುಮಾರ್‌ ಚಚ್ಚಿಸಿಕೊಂಡಿದ್ದು ಭಾರತಕ್ಕೆ ಮುಳುವಾಯಿತು.

ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯದಲ್ಲಿ ಮಿಂಚಿದ್ದ ಹಾರ್ದಿಕ್‌ ಪಾಂಡ್ಯ 2ನೇ ಪಂದ್ಯದಲ್ಲಿ ದುಬಾರಿಯಾದರು. ಇನ್ನು ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಟೂರ್ನಿಯಲ್ಲಿ ಇನ್ನೂ ಲಯ ಕಂಡುಕೊಂಡಿಲ್ಲ. ಐವರು ಬೌಲರ್‌ಗಳ ಯೋಜನೆಯೊಂದಿಗೆ ಕಣಕ್ಕಿಳಿದರೆ ಹಾರ್ದಿಕ್‌ರ 4 ಓವರ್‌ಗಳು ನಿರ್ಣಾಯಕವೆನಿಸಲಿವೆ. ಹೀಗಾಗಿ, ಭಾರತ ತನ್ನ ರಣತಂತ್ರ ಬದಲಿಸಬೇಕಾದ ಒತ್ತಡಕ್ಕೆ ಸಿಲುಕಿದೆ.

ಲಂಕಾ ವಿರುದ್ಧ ಅಕ್ಷರ್‌ ಪಟೇಲ್‌ರನ್ನು ಆಡಿಸಬಹುದು. ಜೊತೆಗೆ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದರೆ ಆವೇಶ್‌ ಖಾನ್‌ ಸಹ ಆಡುವ ಹನ್ನೊಂದಕ್ಕೆ ಮರಳಬಹುದು. ಇನ್ನು ರಿಷಭ್‌ ಪಂತ್‌ರನ್ನು ಆಡಿಸಬೇಕಾ ಅಥವಾ ದಿನೇಶ್‌ ಕಾರ್ತಿಕ್‌ ಸೂಕ್ತ ಆಯ್ಕೆಯೇ ಎನ್ನುವ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಕಂಡುಕೊಳ್ಳಲು ತಂಡಕ್ಕೆ ಸಾಧ್ಯವಾಗಿಲ್ಲ. ಜೊತೆಗೆ ದೀಪಕ್‌ ಹೂಡಾರನ್ನು ಆಡಿಸದೆ ಇರಲು ಸಹ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಯ್ಕೆ ಗೊಂದಲಕ್ಕೆ ಸಿಲುಕಿರುವ ತಂಡದ ಆಡಳಿತ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

Team India ಟೆಸ್ಟ್ ನಾಯಕತ್ವ ಬಿಟ್ಟಾಗ ಧೋನಿ ಬಿಟ್ಟು ಯಾರೂ ಮೆಸೇಜ್‌ ಮಾಡ್ಲಿಲ್ಲ..!

ಒಂದು ಸಮಾಧಾನಕಾರ ಸಂಗತಿ ಎಂದರೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡಲು ಶುರು ಮಾಡಿದ್ದಾರೆ. ಲಂಕಾ ವಿರುದ್ಧವೂ ಮೊದಲ ಎಸೆತದಿಂದಲೇ ರನ್‌ ಗಳಿಕೆಗೆ ವೇಗ ತುಂಬುವ ನಿರೀಕ್ಷೆ ಇದೆ. ಮಧ್ಯಮ ಕ್ರಮಾಂಕವು ಸಮತೋಲನ ಕಂಡುಕೊಂಡರೆ ತಂಡ ಮತ್ತಷ್ಟುಅಪಾಯಕಾರಿಯಾಗಲಿದೆ.

ಆತ್ಮವಿಶ್ವಾಸದಲ್ಲಿ ಲಂಕಾ: ಬಾಂಗ್ಲಾದೇಶ, ಅಷ್ಘಾನಿಸ್ತಾನ ವಿರುದ್ಧ ಗುರಿ ಬೆನ್ನತ್ತಿ ರೋಚಕ ಗೆಲುವು ಸಾಧಿಸಿರುವ ಶ್ರೀಲಂಕಾ ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. 3ನೇ ಕ್ರಮಾಂಕದಲ್ಲಿ ಆಡುವ ಚರಿತ್‌ ಅಸಲಂಕ ಅವರನ್ನು ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಸದ್ದು ಮಾಡಿದ್ದಾರೆ. ಬಾಂಗ್ಲಾ ವಿರುದ್ಧ ಶಾನಕ, ಕುಸಾಲ್‌ ಮೆಂಡಿಸ್‌, ಆಫ್ಘನ್‌ ವಿರುದ್ಧ ಗುಣತಿಲಕ ಮತ್ತು ರಾಜಪ್ಸೆ ಅಬ್ಬರಿಸಿದ್ದರು. ಭಾರತಕ್ಕೆ ಆಘಾತ ನೀಡಿ ಫೈನಲ್‌ಗೇರುವ ಗುರಿಯೊಂದಿಗೆ ಲಂಕಾ ಮೈದಾನಕ್ಕಿಳಿಯಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ ಎಲ್ ರಾಹುಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್‌/ ದಿನೇಶ್ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್/ ಯುಜುವೇಂದ್ರ ಚಹಲ್‌, ರವಿಚಂದ್ರನ್ ಅಶ್ವಿನ್, ಭುವನೇಶ್ವರ್‌ ಕುಮಾರ್, ರವಿ ಬಿಷ್ಣೋಯಿ ಬಿಷ್ಣೋಯ್‌, ಅಶ್‌ರ್‍ದೀಪ್‌ ಸಿಂಗ್.

ಲಂಕಾ: ನಿಸ್ಸಾಂಕ, ಕುಸಾಲ್‌ ಮೆಂಡಿಸ್‌, ಅಸಲಂಕ, ಗುಣತಿಲಕ, ದಸುನ್‌ ಶಾನಕ(ನಾಯಕ), ರಾಜಪಕ್ಸೆ, ಹಸರಂಗ, ಕರುಣರತ್ನೆ, ತೀಕ್ಷಣ, ಫೆರ್ನಾಂಡೋ, ದಿಲ್ಶನ್‌ ಮಧುಶಂಖ.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌