Asianet Suvarna News Asianet Suvarna News

Team India ಟೆಸ್ಟ್ ನಾಯಕತ್ವ ಬಿಟ್ಟಾಗ ಧೋನಿ ಬಿಟ್ಟು ಯಾರೂ ಮೆಸೇಜ್‌ ಮಾಡ್ಲಿಲ್ಲ..!

ಏಷ್ಯಾಕಪ್ ಕ್ರಿಕೆಟ್‌ ಟೂರ್ನಿ ಬಳಿಕ ಭರ್ಜರಿಯಾಗಿ ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ
ಪಾಕಿಸ್ತಾನ ವಿರುದ್ದ ಆಕರ್ಷಕ ಅರ್ಧಶತಕ ಚಚ್ಚಿದ ವಿರಾಟ್ ಕೊಹ್ಲಿ 
ತಮ್ಮ ಹಾಗೂ ಧೋನಿ ನಡುವಿನ ಒಡನಾಟವನ್ನು ಮತ್ತೊಮ್ಮೆ ಅನಾವರಣ ಮಾಡಿದ ಕಿಂಗ್ ಕೊಹ್ಲಿ

Only MS Dhoni Messaged Me When I Left Test Captaincy No One Else Says Virat Kohli kvn
Author
First Published Sep 6, 2022, 9:06 AM IST

ದುಬೈ(ಸೆ.06): ‘ನಾನು ಟೆಸ್ಟ್‌ ನಾಯಕತ್ವ ತ್ಯಜಿಸಿದಾಗ ಎಂ.ಎಸ್‌.ಧೋನಿ ಒಬ್ಬರೇ ನನಗೆ ಸಂದೇಶ ಕಳುಹಿಸಿ ಬೆಂಬಲಿಸಿದ್ದು’. ಇದು ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಪಾಕಿಸ್ತಾನ ವಿರುದ್ಧದ ಸೂಪರ್‌-4 ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿದ ಮಾತು. ಕಳೆದ 12 ತಿಂಗಳಲ್ಲಿ ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ ಕೊಹ್ಲಿ ತಮ್ಮ ಅನುಭವಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು.

‘ಅನೇಕರ ಬಳಿ ನನ್ನ ಮೊಬೈಲ್‌ ನಂಬರ್‌ ಇದೆ. ಆದರೆ ಸಂದೇಶ ಕಳುಹಿಸಿದ್ದು ಧೋನಿ ಮಾತ್ರ. ಇನ್ನೂ ಅನೇಕರು ಟೀವಿಯಲ್ಲಿ ಸಲಹೆಗಳನ್ನು ನೀಡಿದರು’ ಎಂದು ಕೊಹ್ಲಿ ಹೇಳಿದರು. ‘ಧೋನಿ ಜೊತೆ ನನಗೆ ವಿಶೇಷ ಬಾಂಧವ್ಯವಿದೆ. ನಾವಿಬ್ಬರು ಪರಸ್ಪರ ಗೌರವಿಸುತ್ತೇವೆ. ಇದು ನನಗೆ ಬಹಳ ಮುಖ್ಯ’ ಎಂದರು.

ಇದೇ ವೇಳೆ ಟೀವಿಯಲ್ಲಿ ಸಲಹೆ ನೀಡಿದವರ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, ‘ಯಾರಿಗಾದರೂ ಏನಾದರೂ ಹೇಳಬೇಕು ಎಂದರೆ ವೈಯಕ್ತಿಕವಾಗಿ ಸಂಪರ್ಕಿಸಿ ಹೇಳಬಹುದು. ಸಹಾಯ ಮಾಡಬೇಕು ಎನ್ನುವ ಉದ್ದೇಶವಿದ್ದಾಗ ಅದನ್ನು ಜಗತ್ತಿನ ಮುಂದೆ ಹೇಳಿಕೊಳ್ಳುವ ಅಗತ್ಯವಿಲ್ಲ. ಅಂತಹವನ್ನು ನಾನು ಗೌರವಿಸುವುದಿಲ್ಲ’ ಎಂದರು. ಸುನಿಲ್‌ ಗವಾಸ್ಕರ್‌ ಮಾಧ್ಯಮವೊಂದಕ್ಕೆ ಮಾತನಾಡಿ ‘ಕೊಹ್ಲಿ ನನಗೆ 20 ನಿಮಿಷ ಸಮಯ ಕೊಟ್ಟರೆ ಅವರ ಸಮಸ್ಯೆ ಪರಿಹರಿಸುತ್ತೇನೆ’ ಎಂದಿದ್ದರು. ಇನ್ನೂ ಅನೇಕ ಮಾಜಿ ಕ್ರಿಕೆಟಿಗರು ಕೊಹ್ಲಿಯ ಲಯದ ಸಮಸ್ಯೆ ಹಾಗೂ ಅದಕ್ಕೆ ಪರಿಹಾರ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಿದ್ದರು.

ಉತ್ಸುಕತೆ ಮರಳಿದೆ, ಆಟ ಇನ್ನೂ ಮುಗಿದಿಲ್ಲ!

ವಿರಾಟ್‌ ತಾವು ಲಯ ಕಂಡುಕೊಳ್ಳುತ್ತಿರುವ ಬಗ್ಗೆ ಮಾತನಾಡಿದ್ದು, ನಿವೃತ್ತಿಯ ಮಾತು ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಕ್ರಿಕೆಟ್‌ನಿಂದ ಒಂದು ತಿಂಗಳು ದೂರ ಉಳಿದಿದ್ದು ಸಹಕಾರಿಯಾಗಿದೆ. ನನ್ನಲ್ಲಿ ಆಟದ ಬಗ್ಗೆ ಉತ್ಸುಕತೆ ಮರಳಿದೆ. ತಂಡದಲ್ಲಿನ ವಾತಾವರಣ ಉತ್ತಮವಾಗಿದ್ದು, ಆಟವನ್ನು ಮತ್ತೆ ಆನಂದಿಸಲು ಶುರು ಮಾಡಿದ್ದೇನೆ. ಇನ್ನಷ್ಟುಸಮಯ ಆಟದಲ್ಲಿ ಮುಂದುವರಿಯಬಹುದು ಎನ್ನುವ ವಿಶ್ವಾಸ ಮೂಡಿದೆ’ ಎಂದು ಕೊಹ್ಲಿ ಹೇಳಿದ್ದಾರೆ.

ಏಷ್ಯಾಕಪ್ ಟೂರ್ನಿಗೂ ಮುನ್ನ ವಿರಾಟ್ ಕೊಹ್ಲಿ, ವೆಸ್ಟ್‌ ಇಂಡೀಸ್ ಹಾಗೂ ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದಿದ್ದರು. ಸತತ ಫಾರ್ಮ್‌ ಸಮಸ್ಯೆ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಬರೋಬ್ಬರಿ ಆರು ವಾರಗಳ ಬಳಿಕ ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿದ್ದರು. ಏಷ್ಯಾಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ 35 ರನ್‌ ಬಾರಿಸಿದ್ದ ಕೊಹ್ಲಿ, ಇದಾದ ಬಳಿಕ ಹಾಂಕಾಂಗ್ ಹಾಗೂ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಎದುರು ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದರು.

Asia Cup 2022 ಟಿ20 ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ಬರೆದ ರೋಹಿತ್‌-ರಾಹುಲ್‌ ಜೋಡಿ!

ವಿರಾಟ್ ಕೊಹ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಲು ವಿಫಲವಾಗುತ್ತಲೇ ಬಂದಿದ್ದಾರೆ. 2019ರಲ್ಲಿ ಬಾಂಗ್ಲಾದೇಶ ವಿರುದ್ದ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಮೂರಂಕಿ ಮೊತ್ತ ದಾಖಲಿಸಿದ್ದರು.

ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16ರಿಂದ ಆರಂಭವಾಗಲಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಗೆಲ್ಲಲು ಸಕಲ ರಣತಂತ್ರ ಹೆಣೆಯುತ್ತಿದೆ.

Follow Us:
Download App:
  • android
  • ios