ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಸ್ನಿಕೋ ಮೀಟರ್ ತಂತ್ರಜ್ಞಾನವು ವಿವಾದಕ್ಕೆ ಕಾರಣವಾಗಿದೆ. ಅಡಿಲೇಡ್ ಟೆಸ್ಟ್‌ನಲ್ಲಿ 3 ಬಾರಿ ತಪ್ಪಾದ ತೀರ್ಪು ನೀಡಿದ್ದು, ಆಸೀಸ್ ವೇಗಿ ಸ್ಟಾರ್ಕ್ ಸೇರಿದಂತೆ ಹಲವು ಆಟಗಾರರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಡಿಲೇಡ್: ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಮತ್ತೆ ಸ್ನಿಕೋ ಮೀಟರ್ ವಿವಾದ ಭುಗಿಲೆದ್ದಿದೆ. ಅಡಿಲೇಡ್‌ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್‌ನ ಮೊದಲೆರಡು ದಿನಗಳಲ್ಲಿ 3 ಬಾರಿ ಸ್ನಿಕೋ ಮೀಟರ್ ತಪ್ಪಾದ ತೀರ್ಪು ನೀಡಿದ್ದು, ಆಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಬುಧವಾರ ಆಸ್ಟ್ರೇಲಿಯಾದ ಅಲೆಕ್ಸ್ ಕೇರಿ ಔಟ್‌ಗಾಗಿ ಇಂಗ್ಲೆಂಡ್ ಮನವಿ ಮಾಡಿತ್ತು. ಡಿಆರ್‌ಎಸ್ ಮೊರೆ ಹೋದಾಗ, ಕೇರಿ ಬ್ಯಾಟ್‌ಗೆ ಚೆಂಡು ತಾಗಿದ್ದು ಕಂಡುಬಂತು. ಆದರೆ ಆ ಶಬ್ಧ ಬ್ಯಾಟ್‌ಗೆ ತಾಗುವ ಮುನ್ನವೇ ಬಂದಿದೆ ಎಂದು ತೀರ್ಮಾನಿಸಿ ಕೇರಿ ನಾಟೌಟ್ ಎಂಬ ಟಿವಿ ಅಂಪೈರ್ ತೀರ್ಪು ನೀಡಿದರು. ಬಳಿಕ ಕೇರಿ ಶತಕ ಪೂರ್ಣಗೊಳಿಸಿದರು.
2ನೇ ದಿನ 44ನೇ ಓವರ್‌ನಲ್ಲಿ ಇಂಗ್ಲೆಂಡ್‌ನ ಜೆಮೀ ಸ್ಮಿತ್ ಗ್ಲೌಸ್‌ಗೆ ಚೆಂಡು ತಗುಲಿದ್ದು ಕಂಡುಬಂದರೂ, ಸ್ನಿಕೋ ಮೀಟರ್‌ನಲ್ಲಿ ಯಾವುದೇ ಶಬ್ಧದ ಸೂಚನೆ ದಾಖಲಾಗಿರಲಿಲ್ಲ. ಹೀಗಾಗಿ ಅಂಪೈರ್ ನಾಟೌಟ್ ಎಂದರು. ಬಳಿಕ 46ನೇ ಓವರ್‌ನಲ್ಲಿ ಕಮಿನ್ಸ್ ಬೌಲಿಂಗ್‌ನಲ್ಲಿ ಸ್ಮಿತ್ ಫುಲ್‌ಶಾಟ್ ಆಡಲು ಯತ್ನಿಸಿದಾಗ, ಚೆಂಡು ವಿಕೆಟ್ ಕೀಪರ್ ಕೈಸೇರಿತು. ಆಸೀಸ್ ಔಟ್‌ಗಾಗಿ ಮನವಿ ಮಾಡಿತು. ಡಿಆರ್‌ಎಸ್‌ನಲ್ಲಿ ಬ್ಯಾಟ್‌ನಿಂದ ಚೆಂಡು ದೂರದಲ್ಲಿ ಸಾಗಿದ್ದು ಕಂಡುಬಂದರೂ, ಸ್ನಿಕೋ ಮೀಟರ್‌ನಲ್ಲಿ ಚೆಂಡು ತಗುಲಿದ ಶಬ್ಧ ಕೇಳಿಸಿದ್ದು ಸೂಚಿಸಿತು. ಹೀಗಾಗಿ ಅಂಪೈರ್ ಔಟ್ ತೀರ್ಪು ನೀಡಿದರು. ಈ 3 ಘಟನೆಯಲ್ಲೂ ಸ್ನಿಕೋ ಮೀಟರ್ ತಪ್ಪು ತೀರ್ಪು ನೀಡಿದೆ ಎಂದು ಹಲವು ಹಲವು ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದಾರೆ.
ಏನಿದು ಸ್ನಿಕೋ ಟೆಕ್ನಾಲಜಿ?
ಕ್ರಿಕೆಟ್‌ನಲ್ಲಿ ಔಟ್ ಸೇರಿ ಯಾವುದೇ ತೀರ್ಪಿನ ಬಗ್ಗೆ ಅನುಮಾನ ಇದ್ದಾಗ ಡಿಆರ್‌ಎಸ್ ಮೊರೆ ಹೋಗಲಾಗುತ್ತದೆ. ಡಿಆರ್‌ಎಸ್‌ನಲ್ಲಿ ಸ್ನಿಕೋ ಮೀಟರ್, ಹಾಕ್‌ಐ, ಅಲ್ಟ್ರಾ ಎಡ್ಜ್ ಸೇರಿದಂತೆ ಕೆಲ ತಂತ್ರಜ್ಞಾನಗಳ ಮೂಲಕ ಚೆಂಡು ಬ್ಯಾಟ್, ಪ್ಯಾಟ್‌ಗೆ ತಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಈ ಪೈಕಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಹೆಚ್ಚಾಗಿ ಬಳಸಲಾಗುವ ಸ್ನಿಕೋ ಮೀಟರ್‌ನಲ್ಲಿ ಬ್ಯಾಟ್‌ಗೆ ಚೆಂಡು ತಗುಲಿದೆಯೇ ಇಲ್ಲವೇ ಎಂಬುದರ ಬಗ್ಗೆ ಶಬ್ಧದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ವಿಕೆಟ್‌ಗಳ ನಡುವೆ ಅತಿ ಸೂಕ್ಷ್ಮ ಮೈಕ್ರೋಫೋನ್ ಇರಲಿದ್ದು, ಚೆಂಡು ಬ್ಯಾಟ್‌ಗೆ ತಾಗಿದಾಗ ಟಿವಿ ಪರದೆಯಲ್ಲಿ ರೇಖೆಗಳು ಮೂಡುತ್ತವೆ.
ಕೆಟ್ಟ ತಂತ್ರಜ್ಞಾನ: ಮೈದಾನದಲ್ಲೇ ಸ್ಟಾರ್ಕ್ ಆಕ್ರೋಶ
ಸ್ನಿಕೋ ಮೀಟರ್ ಬಗ್ಗೆ ಆಸೀಸ್ ವೇಗಿ ಸ್ಟಾರ್ಕ್ ಮೈದಾನದಲ್ಲೇ ಕಿಡಿಕಾರಿದ್ದು, ‘ಸ್ನಿಕೋ ಈವರೆಗಿನ ಅತ್ಯಂತ ಕೆಟ್ಟ ತಂತ್ರಜ್ಞಾನ. ಅದನ್ನು ನಿಷೇಧಿಸಬೇಕು’ ಎಂದಿದ್ದಾರೆ. ಜೆಮೀ ಸ್ಮಿತ್ ನಾಟೌಟ್ ತೀರ್ಪಿನ ವೇಳೆ ಸ್ಟಾರ್ಕ್ ಮಾತನಾಡಿದ್ದು ಸ್ಟಂಪ್ ಮೈಕ್‌ನಲ್ಲಿ ಕೇಳಿಸಿದೆ. ‘ಮೊದಲ ದಿನವೂ ಸ್ನಿಕೋ ನಿರ್ಧಾರದಲ್ಲಿ ತಪ್ಪಾಗಿತ್ತು. ಈಗ ಮತ್ತೊಮ್ಮೆ ತಪ್ಪಾಗಿದೆ ಎಂದಿದ್ದಾರೆ. ಇಂಗ್ಲೆಂಡ್, ಆಸೀಸ್ ಆಟಗಾರರು ಮಾತ್ರವಲ್ಲದೆ ಹಲವು ಮಾಜಿ ಕ್ರಿಕೆಟಿಗರು ಕೂಡಾ ಸ್ನಿಕೋ ಮೀಟರ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆ್ಯಶಸ್: ಆಸೀಸ್ 371ಕ್ಕೆ ಆಲೌಟ್, ಇಂಗ್ಲೆಂಡ್ 213/8
ಅಡಿಲೇಡ್: 3ನೇ ಆ್ಯಶಸ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 371 ರನ್‌ಗೆ ಆಲೌಟಾಯಿತು. ಮಿಚೆಲ್ ಸ್ಟಾರ್ಕ್ 54 ರನ್ ಗಳಿಸಿದರು. ಆರ್ಚರ್ 5 ವಿಕೆಟ್ ಕಿತ್ತರು. ಬಳಿಕ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 2ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 213 ರನ್ ಗಳಿಸಿದ್ದು, ಇನ್ನೂ 158 ರನ್ ಹಿನ್ನಡೆಯಲ್ಲಿದೆ. ಹ್ಯಾರಿ ಬ್ರೂಕ್ 45, ಬೆನ್ ಸ್ಟೋಕ್ಸ್ ಔಟಾಗದೆ 45 ರನ್ ಗಳಿಸಿದ್ದಾರೆ.


