ದಕ್ಷಿಣ ಆಫ್ರಿಕಾ ವಿರುದ್ಧದ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ಸರಣಿ ಗೆಲುವಿನ ಗುರಿ ಹೊಂದಿದೆ. 2-1 ಮುನ್ನಡೆಯಲ್ಲಿದ್ದರೂ, ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಶುಭ್‌ಮನ್‌ ಗಿಲ್‌ ಅವರ ಫಾರ್ಮ್‌ ತಂಡಕ್ಕೆ ಚಿಂತೆಯುಂಟುಮಾಡಿದೆ. ಜಸ್‌ಪ್ರೀತ್ ಬೂಮ್ರಾ ತಂಡಕ್ಕೆ ಮರಳಿರುವುದು ತಂಡದ ಬಲ ಹೆಚ್ಚಿಸಿದೆ.

ಅಹಮದಾಬಾದ್‌: ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಶುಕ್ರವಾರ 5ನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸದ್ಯ ಭಾರತ 2-1 ಮುನ್ನಡೆಯಲ್ಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಸರಣಿ ತನ್ನದಾಗಿಸಿಕೊಳ್ಳಲಿದೆ. ದ.ಆಫ್ರಿಕಾ ತಂಡ ಸರಣಿ ಸಮಬಲಗೊಳಿಸಿ ಭಾರತ ಪ್ರವಾಸ ಕೊನೆಗೊಳಿಸುವ ವಿಶ್ವಾಸದಲ್ಲಿದೆ.

ಟೆಸ್ಟ್‌ನಲ್ಲಿ 0-2 ವೈಟ್‌ವಾಶ್‌ ಮುಖಭಂಗಕ್ಕೆ ಒಳಗಾಗಿದ್ದ ಭಾರತ ಏಕದಿನದಲ್ಲಿ ಪುಟಿದೆದ್ದು ಸರಣಿ ಗೆದ್ದಿತ್ತು. ಈಗ ಟಿ20 ಸರಣಿಯನ್ನೂ ಗೆಲ್ಲುವ ಮೂಲಕ ಟೆಸ್ಟ್‌ ಸೋಲಿಗೆ ಮತ್ತೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಆದರೆ ತಂಡಕ್ಕೆ ಈ ಪಂದ್ಯದ ಗೆಲುವಿಗಿಂತ ಕೆಲ ಆಟಗಾರರ ಲಯದ ಬಗ್ಗೆ ಹೆಚ್ಚಿನ ತಲೆನೋವಿದೆ. ನಾಯಕ ಸೂರ್ಯಕುಮಾರ್‌ ಯಾದವ್‌ ಕಳೆದ 21 ಇನ್ನಿಂಗ್ಸ್‌ಗಳಲ್ಲಿ ಒಂದೂ ಅರ್ಧಶತಕ ಬಾರಿಸಿಲ್ಲ. ಉಪನಾಯಕ ಶುಭ್‌ಮನ್‌ ಗಿಲ್‌ ಕೂಡಾ ರನ್‌ ಗಳಿಸಲು ಪರದಾಡುತ್ತಿದ್ದಾರೆ. ಅವರು 5ನೇ ಪಂದ್ಯಕ್ಕೆ ಫಿಟ್‌ ಇದ್ದಾರೊ ಇಲ್ಲವೊ ಎಂಬುದು ಇನ್ನೂ ಖಚಿತವಾಗಿಲ್ಲ. ಅವರು ಹೊರಗುಳಿದರೆ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗಬಹುದು. ಇನ್ನು, ವೈಯಕ್ತಿಕ ಕಾರಣಗಳಿಂದಾಗಿ 3ನೇ ಪಂದ್ಯಕ್ಕೆ ಗೈರಾಗಿದ್ದ ಜಸ್‌ಪ್ರೀತ್‌ ಬುಮ್ರಾ ಈ ಪಂದ್ಯಕ್ಕೆ ಲಭ್ಯರಿದ್ದಾರೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋಹಾಟ್‌ಸ್ಟಾರ್‌

--

ಭಾರತಕ್ಕೆ 6ನೇ ಸರಣಿ ಜಯ ಗುರಿ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಈವರೆಗೂ 10 ಬಾರಿ ಟಿ20 ಸರಣಿ ನಡೆದಿವೆ. ಇದರಲ್ಲಿ ಭಾರತ 5ರಲ್ಲಿ ಜಯಗಳಿಸಿದ್ದು, ಈ ಬಾರಿ 6ನೇ ಗೆಲುವಿನ ನಿರೀಕ್ಷೆಯಲ್ಲಿದೆ. ದ.ಆಫ್ರಿಕಾ 2 ಬಾರಿ ಸರಣಿ ಗೆದ್ದಿದ್ದರೆ, ಉಳಿದ 3 ಸರಣಿ ಡ್ರಾಗೊಂಡಿವೆ. ದ.ಆಫ್ರಿಕಾ ತಂಡ ಈವರೆಗೆ ಭಾರತದಲ್ಲಿ ಒಮ್ಮೆ ಮಾತ್ರ ಟಿ20 ಸರಣಿ ಗೆದ್ದಿದೆ.

ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:

ಭಾರತ: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಏಯ್ಡನ್ ಮಾರ್ಕ್‌ರಮ್, ಟ್ರಿಸ್ಟಿನ್ ಸ್ಟಬ್ಸ್, ಡೆವಾಲ್ಡ್ ಬ್ರೆವೀಸ್, ಡೇವಿಡ್ ಮಿಲ್ಲರ್, ಡೊನೊವನ್ ಪೆರೇರಾ, ಜಾರ್ಜ್ ಲಿಂಡೆ, ಮಾರ್ಕೊ ಯಾನ್ಸನ್, ಕಾರ್ಬಿನ್ ಬಾಶ್, ಏನ್ರಿಚ್ ನೋಕಿಯ, ಲುಂಗಿ ಎಂಗಿಡಿ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್.