ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್, ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನದ ದಂತಕಥೆ ವಾಸೀಂ ಅಕ್ರಂ ಅವರನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಎಡಗೈ ವೇಗಿ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.
ಬ್ರಿಸ್ಬೇನ್: ಆಸ್ಟ್ರೇಲಿಯಾದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್, ಆ್ಯಷಸ್ ಟೆಸ್ಟ್ ಸರಣಿಯ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮತ್ತೊಮ್ಮೆ ಮಾರಕ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಮಿಚೆಲ್ ಸ್ಟಾರ್ಕ್ ಕ್ರಿಕೆಟ್ ಇತಿಹಾಸದಲ್ಲೇ ಅತಿಹೆಚ್ಚು ವಿಕೆಟ್ ಕಬಳಿಸಿದ ಎಡಗೈ ವೇಗಿ ಎನ್ನುವ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.
ಗಾಬಾ ಟೆಸ್ಟ್ ಪಂದ್ಯಕ್ಕೂ ಮುನ್ನ ಮಿಚೆಲ್ ಸ್ಟಾರ್ಕ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು. ಇದೀಗ ಪಾಕಿಸ್ತಾನದ ಕ್ರಿಕೆಟ್ ದಂತಕಥೆ ವಾಸೀಂ ಅಕ್ರಂ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಗಾಬಾ ಟೆಸ್ಟ್‌ನಲ್ಲಿ ಸ್ಟಾರ್ಕ್ ಮೂರು ವಿಕೆಟ್ ಕಬಳಿಸುತ್ತಿದ್ದಂತೆಯೇ ಈ ಸಾಧನೆ ಮಾಡಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ವಾಸೀಂ ಅಕ್ರಂ 104 ಟೆಸ್ಟ್ ಪಂದ್ಯಗಳನ್ನಾಡಿ 414 ವಿಕೆಟ್ ಕಬಳಿಸಿದ್ದರು. ಇದೀಗ ಆಸ್ಟ್ರೇಲಿಯಾದ ಮಾರಕ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಕೇವಲ 102ನೇ ಟೆಸ್ಟ್ ಪಂದ್ಯದಲ್ಲಿ 418* ವಿಕೆಟ್ ಕಬಳಿಸುವ ಮೂಲಕ ಅಕ್ರಂ ದಾಖಲೆ ಅಳಿಸಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಟಾಪ್-5 ಎಡಗೈ ವೇಗಿಗಳಿವರು
1. ಮಿಚೆಲ್ ಸ್ಟಾರ್ಕ್(ಆಸ್ಟ್ರೇಲಿಯಾ): 418* ವಿಕೆಟ್‌ಗಳು- 102 ಟೆಸ್ಟ್
2. ವಾಸೀಂ ಅಕ್ರಂ(ಪಾಕಿಸ್ತಾನ): 414 ವಿಕೆಟ್‌ಗಳು - 104 ಟೆಸ್ಟ್
3. ಚಮಿಂಡಾ ವಾಸ್(ಶ್ರೀಲಂಕಾ): 355 ವಿಕೆಟ್‌ಗಳು - 111 ಟೆಸ್ಟ್'
4. ಟ್ರೆಂಟ್ ಬೌಲ್ಟ್(ನ್ಯೂಜಿಲೆಂಡ್): 317 ವಿಕೆಟ್‌ಗಳು - 78 ಟೆಸ್ಟ್
5. ಮಿಚೆಲ್ ಜಾನ್ಸನ್(ಆಸ್ಟ್ರೇಲಿಯಾ): 313 ವಿಕೆಟ್‌ಗಳು - 73 ಟೆಸ್ಟ್
ಆರು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡ ಮಿಚೆಲ್ ಸ್ಟಾರ್ಕ್:
ರೆಡ್ ಬಾಲ್ ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ವೇಗಿ ಎಂದೇ ಗುರುತಿಸಿಕೊಂಡಿರುವ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್, ಮತ್ತೊಮ್ಮೆ ತಾವೆಸೆದ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಬೆನ್ ಡಕೆಟ್ ಖಾತೆ ತೆರೆಯುವ ಮುನ್ನವೇ ಮಾರ್ನಸ್ ಲಬುಶೇನ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಓಲಿ ಪೋಪ್ ಕೂಡಾ ಖಾತೆ ತೆರೆಯುವ ಮುನ್ನವೇ ಮಿಚೆಲ್ ಸ್ಟಾರ್ಕ್‌ಗೆ ಎರಡನೇ ಬಲಿಯಾದರು.
ಇನ್ನು ಹ್ಯಾರಿ ಬ್ರೂಕ್(31) ವಿಕೆಟ್ ಕಬಳಿಸುವ ಮೂಲಕ ವಾಸೀಂ ಅಕ್ರಂ ದಾಖಲೆ ಬ್ರೇಕ್ ಮಾಡಿದ ಸ್ಟಾರ್ಕ್, ಆ ಬಳಿಕ ವಿಲ್ ಜ್ಯಾಕ್ಸ್(19), ಗಸ್ ಅಟ್ಕಿನ್‌ಸನ್(4) ಹಾಗೂ ಬ್ರೈಡನ್ ಕಾರ್ಸ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನು ಆಸ್ಟ್ರೇಲಿಯಾ ನೆಲದಲ್ಲಿ ಜೋ ರೂಟ್ ಸಿಡಿಸಿದ ಚೊಚ್ಚಲ ಟೆಸ್ಟ್ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ಮೊದಲ ದಿನದಾಟದಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 325 ರನ್ ಬಾರಿಸಿದೆ. ಜೋ ರೂಟ್ ಅಜೇಯ 135 ರನ್ ಬಾರಿಸಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 6 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದು, ಮಿಚೆಲ್ ನೀಸರ್ ಹಾಗೂ ಸ್ಕಾಟ್ ಬೊಲೆಂಡ್ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.


