ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಪ್ರಶ್ನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸತತ ಸೋಲುಗಳ ಬಗ್ಗೆ ಪ್ರಶ್ನೆ ಮಾಡಿರುವ ಅವರು, ಸೋಲು ಎಲ್ಲಿಂದ ಆಯಿತು ಅನ್ನೋದನ್ನು ವಿವರಿಸಿದ್ದಾರೆ. ಕುಂಬ್ಳೆ ಏನು ಹೇಳಿದರು ಅನ್ನೋದ್ರ ವಿವರ ಇಲ್ಲಿದೆ..
ಬೆಂಗಳೂರು: ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸತತ ಎರಡು ಸೋಲು ಕಂಡು ಮುಖಭಂಗ ಅನುಭವಿಸಿದೆ. ಎರಡನೇ ಪಂದ್ಯದಲ್ಲಿ ಕೇವಲ 76 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ ತಂಡ ಪಂದ್ಯವನ್ನು ಇಂಗ್ಲೆಂಡ್‌ಗೆ ಹಸ್ತಾಂತರಿಸಿತು. ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ತಂಡವೊಂದು ಈ ರೀತಿ ಅಕ್ಷರಶಃ ಕೈಚೆಲ್ಲಿರುವುದು ದಂತಕತೆ ಅನಿಲ್ ಕುಂಬ್ಳೆ ಅವರನ್ನು ಕೆರಳಿಸಿದೆ.
ಇದು ಹೀನಾಯ ಶರಣಾಗತಿ
ಪಂದ್ಯದ ನಂತರ ಜಿಯೋ ಹಾಟ್‌ಸ್ಟಾರ್‌ನಲ್ಲಿ ಮಾತನಾಡಿರುವ ಅನಿಲ್ ಕುಂಬ್ಳೆ, ಇದೊಂದು ಹೀನಾಯ ಶರಣಾಗತಿ (Abject Surrender). ವಿಶ್ವ ಚಾಂಪಿಯನ್ ಪಟ್ಟದಲ್ಲಿರುವ ತಂಡವೊಂದು ಈ ರೀತಿ ಮಕಾಡೆ ಮಲಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇಂಗ್ಲೆಂಡ್ ವೇಗಿಗಳಾದ ಜೋಫ್ರಾ ಆರ್ಚರ್ ಮತ್ತು ಜೋಶ್ ಟಂಗ್ ಅವರ ವೇಗವನ್ನು ಎದುರಿಸಲು ಭಾರತದ ಬ್ಯಾಟರ್‌ಗಳ ಬಳಿ ಯಾವುದೇ ಪ್ಲಾನ್ ಇರಲಿಲ್ಲ.
ಬ್ಯಾಟರ್‌ಗಳು ತಾಳ್ಮೆ ತೋರಬೇಕಿತ್ತು. ಕ್ರೀಸ್‌ನಲ್ಲಿ ನಿಂತು ಒತ್ತಡ ನಿಭಾಯಿಸುವ ಬದಲು ಪ್ರತಿಯೊಬ್ಬರೂ ಅಟ್ಯಾಕ್ ಮಾಡಲು ಹೋಗಿ ವಿಕೆಟ್ ಒಪ್ಪಿಸಿದರು. ಅನಿವಾರ್ಯ ರನ್ ರೇಟ್ 10 ಕ್ಕಿಂತ ಹೆಚ್ಚಿದ್ದರೂ ಸಹ ಯಾರಾದರೂ ಒಬ್ಬರು ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿ ಇನಿಂಗ್ಸ್ ಕಟ್ಟಬೇಕಿತ್ತು. ಆದರೆ ಎಲ್ಲರೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಕುಸಿತ ಕಂಡರು.
ಟಿ20 ಕ್ರಿಕೆಟ್‌ನಲ್ಲಿ ನಿಮ್ಮ ಅತ್ಯುತ್ತಮ ಬ್ಯಾಟರ್‌ಗಳನ್ನು ಮುಂಚಿತವಾಗಿ ಕಳುಹಿಸಬೇಕು. ಈ ಪಂದ್ಯದಲ್ಲಿ ಅನುಭವವಿರುವ ಶಿವಂ ದುಬೆಗಿಂತ ಮೊದಲು ಹರ್ಷಿತ್ ರಾಣಾ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿದ್ದು ತಪ್ಪು ನಿರ್ಧಾರ. 8ನೇ ಕ್ರಮಾಂಕದ ಬ್ಯಾಟರ್ ಬಂದು ಪಂದ್ಯ ಗೆಲ್ಲಿಸುತ್ತಾರೆ ಎಂದು ನಿರೀಕ್ಷಿಸುವುದು ಸರಿಯಲ್ಲ.
ತಂಡದಲ್ಲಿ ತುಂಬಾ ಬದಲಾವಣೆಗಳನ್ನು ಮಾಡುತ್ತಿರುವುದು ಸರಿಯಲ್ಲ. ಐರ್ಲೆಂಡ್ ವಿರುದ್ಧದ ಒಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ಪ್ರಸಿದ್ಧ್ ಕೃಷ್ಣ ಅವರನ್ನು ಕೈಬಿಡಲಾಯಿತು. ಪ್ರಿನ್ಸ್ ಯಾದವ್ ಬಂದು ವಿಕೆಟ್ ಪಡೆದರೂ ತಂಡ ಸೋತಿತು. ಹೊಸ ನಾಯಕ ಐವರು ಸ್ಥಿರ ಬೌಲರ್‌ಗಳ ಮೇಲೆ ನಂಬಿಕೆ ಇಡಬೇಕು. ಬ್ಯಾಟರ್‌ಗಳು ರನ್ ಗಳಿಸಬಹುದು, ಆದರೆ ಬೌಲರ್‌ಗಳು ಪಂದ್ಯವನ್ನು ಗೆಲ್ಲಿಸುತ್ತಾರೆ.
-ಅನಿಲ್ ಕುಂಬ್ಳೆ,ಮಾಜಿ ಕ್ರಿಕೆಟಿಗ
ಸತತ ಸೋಲುಗಳಿಂದ ಕಂಗೆಟ್ಟಿರುವ ಭಾರತ ತಂಡಕ್ಕೆ ಕುಂಬ್ಳೆ ಅವರ ಈ ಮಾತುಗಳು ಎಚ್ಚರಿಕೆಯ ಗಂಟೆಯಾಗಿದ್ದು, ಮುಂದಿನ ಎರಡು ಪಂದ್ಯಗಳಲ್ಲಾದರೂ ಸರಣಿ ಸಮಬಲ ಮಾಡಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.


