ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 2-0 ಹಿನ್ನಡೆ ಅನುಭವಿಸಿರುವ ಭಾರತ, ಸರಣಿ ಉಳಿಸಿಕೊಳ್ಳಲು ನಾಲ್ಕನೇ ಪಂದ್ಯ ಗೆಲ್ಲಲೇಬೇಕಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲಲು ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್, ತಂಡದ ಬ್ಯಾಟಿಂಗ್ ಸಮತೋಲನಕ್ಕಾಗಿ ಶಿವಂ ದುಬೆ ಬದಲು ಬಲಗೈ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಮೂರು ಪಂದ್ಯಗಳು ಮುಕ್ತಾಯವಾಗಿದ್ದು, ಆತಿಥೇಯ ಇಂಗ್ಲೆಂಡ್ ತಂಡವು ಸದ್ಯ 2-0 ಮುನ್ನಡೆಯಲ್ಲಿದೆ. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ ಸರಣಿ ಸಮಬಲದ ಕನಸು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ, ಇಂದು ನಡೆಯಲಿರುವ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇದೆಲ್ಲದರ ನಡುವೆ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ಗೆಲ್ಲಬೇಕಿದ್ದರೇ ಆಡುವ ಹನ್ನೊಂದರ ಬಳಗದಲ್ಲಿ ಒಂದು ಮಹತ್ವದ ಬದಲಾವಣೆ ಮಾಡಿ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಸಲಹೆ ನೀಡಿದ್ದಾರೆ.
ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 202 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 76 ರನ್‌ಗಳ ಸರ್ವಪತನ ಕಾಣುವ ಮೂಲಕ ಮುಖಭಂಗ ಅನುಭವಿಸಿತ್ತು. ಹೀಗಾಗಿ ನಾಲ್ಕನೇ ಪಂದ್ಯವನ್ನು ಗೆಲ್ಲಲು ಹಿರಿಯ ಅನುಭವಿ ಬ್ಯಾಟರ್‌ಗೆ ಮಣೆಹಾಕಲು ಟೀಮ್ ಮ್ಯಾನೇಜ್‌ಮೆಂಟ್‌ಗೆ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಪಾರ್ಥಿವ್ ಪಟೇಲ್ ಸಲಹೆ ನೀಡಿದ್ದಾರೆ.
ಎಡಗೈ-ಬಲಗೈ ಕಾಂಬಿನೇಷನ್‌ಗಾಗಿ ಸಂಜುಗೆ ಅವಕಾಶ ಕೊಡಿ ಎಂದ ಪಾರ್ಥಿವ್ ಪಟೇಲ್:
ಇಂಗ್ಲೆಂಡ್ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ 125 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಇಂಗ್ಲೆಂಡ್ ಮಾರಕ ವೇಗಿಗಳ ದಾಳಿಯ ಎದುರು ಭಾರತೀಯ ಅಗ್ರಕ್ರಮಾಂಕದ ಎಡಗೈ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದ್ದರು. ಈ ಕುರಿತಂತೆ ಜಿಯೋಹಾಟ್‌ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪಾರ್ಥಿವ್ ಪಟೇಲ್, ಭಾರತದ ಅಗ್ರಕ್ರಮಾಂಕದಲ್ಲಿ ಸಾಕಷ್ಟು ಎಡಗೈ ಬ್ಯಾಟರ್‌ಗಳಿರುವುದರಿಂದಾಗಿ ತಂಡದ ಸಮತೋಲನ ತಪ್ಪಿದೆ. ಈ ರೀತಿಯ ಬ್ಯಾಟಿಂಗ್ ಕ್ರಮಾಂಕ ಹೊಂದಿರುವುದರಿಂದ ಎದುರಾಳಿ ಇಂಗ್ಲೆಂಡ್ ಬೌಲರ್‌ಗಳು ಒಂದೇ ರೀತಿಯ ಪ್ಲಾನ್ ಮಾಡಿಕೊಂಡು ಭಾರತಕ್ಕೆ ಕಾಟ ಕೊಡಲಾರಂಭಿಸಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ತಂಡದೊಳಗಿದ್ದರೇ, ಎದುರಾಳಿ ಪಡೆಗೆ ಕಷ್ಟವಾಗಲಿದೆ ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
'ನನ್ನ ಪ್ರಕಾರ, ಸಂಜು ಸ್ಯಾಮ್ಸನ್ ಆಡುವ ಹನ್ನೊಂದರ ಬಳಗದಲ್ಲಿ ಇರಲೇಬೇಕು. ಯಾಕೆಂದರೆ ನಾನು ಮೊದಲ ಮ್ಯಾಚ್‌ನಿಂದಲೂ ಹೇಳುತ್ತಲೇ ಬಂದಿದ್ದೇನೆ, ಟಾಪ್ 7 ಬ್ಯಾಟಿಂಗ್‌ನಲ್ಲಿ ಆರು ಎಡಗೈ ಬ್ಯಾಟರ್‌ಗಳು ಇರಲೇಬಾರದು ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.
ಸಂಜು ಸ್ಯಾಮ್ಸನ್‌ಗಾಗಿ ಶಿವಂ ದುಬೆಯನ್ನು ಕೈಬಿಡಿ:
ಒಂದು ವೇಳೆ ನಾನೇ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದು, ತಂಡವನ್ನು ಆಯ್ಕೆ ಮಾಡುವ ಅವಕಾಶವಿದ್ದರೇ, ನನ್ನ ಗಮನ ತಿಲಕ್ ವರ್ಮಾ ಮೇಲಿರುತ್ತದೆ. ಯಾಕೆಂದರೆ ತಿಲಕ್ ವರ್ಮಾ ತಂಡದ ಉಪನಾಯಕರಾಗಿದ್ದಾರೆ. ಹೀಗಾಗಿ ನಾನು ಸಂಜು ಸ್ಯಾಮ್ಸನ್ ಆಡಿಸಲು, ಶಿವಂ ದುಬೆಯವರನ್ನು ಕೈಬಿಡುವ ತೀರ್ಮಾನ ತೆಗೆದುಕೊಳ್ಳುತ್ತಿದ್ದೆ. ಆಗ ನಮಗೆ ಆರನೇ ಬೌಲರ್ ಅವಕಾಶ ಇಲ್ಲದೇ ಹೋಗಬಹುದು, ಆದರೆ ಐವರು ಪ್ರಮುಖ ಬೌಲರ್‌ಗಳು ತಮ್ಮ ಕೋಟಾ ಮುಗಿಸಲು ಅವಕಾಶ ಮಾಡಿಕೊಡುತ್ತಿದ್ದೆ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.
ಇನ್ನು ಸಂಜು ಸ್ಯಾಮ್ಸನ್ ತಂಡದೊಳಗೆ ಬಂದರೆ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಬದಲು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಸಲಹೆ ನೀಡಿದ್ದಾರೆ. ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿದರೆ, ಮೂರನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್, ನಾಲ್ಕನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಹಾಗೂ ಐದನೇ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಕಣಕ್ಕಿಳಿದರೆ ತಂಡ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
ಬ್ರಿಸ್ಟೊಲ್‌ನಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯಕ್ಕೆ ಪಾರ್ಥಿವ್ ಪಟೇಲ್ ಆಯ್ಕೆ ಮಾಡಿದ ಭಾರತ ತಂಡ ಹೀಗಿದೆ:
ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ.


