ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮುಗಿಸಿ ಕುಟುಂಬಕ್ಕೆ ಆಧಾರವಾಗಬೇಕಿದ್ದ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿ ಪ್ರಸನ್ನ ಅಟ್ಲೂರಿ, ನ್ಯೂಯಾರ್ಕ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರೈತ ಕುಟುಂಬದ ಮಗಳಾಗಿದ್ದ ಅವರ ಕನಸು ನುಚ್ಚುನೂರಾಗಿದ್ದು, ಮೃತದೇಹವನ್ನು ತಾಯ್ನಾಡಿಗೆ ತರಲು ಕುಟುಂಬ ಆರ್ಥಿಕ ನೆರವಿಗಾಗಿ ಮನವಿ ಮಾಡಿದೆ.

ವಿದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮುಗಿಸಿ ಕುಟುಂಬಕ್ಕೆ ಆಸರೆಯಾಗಬೇಕೆಂಬ ಹಂಬಲದಲ್ಲಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಅಮೆರಿಕದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ಮೂಲಪಾಡು ಗ್ರಾಮದ ಪ್ರಸನ್ನ ಅಟ್ಲೂರಿ (25) ದುರ್ಮರಣಕ್ಕೀಡಾದ ದುರ್ದೈವಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟ್ರಾಫಿಕ್ ಸಿಗ್ನಲ್‌ನಲ್ಲಿ ಸಂಭವಿಸಿದ ದುರಂತ

ಜುಲೈ 5ರಂದು ಪ್ರಸನ್ನ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ನ್ಯೂಯಾರ್ಕ್‌ನ ಅಪ್‌ಸ್ಟೇಟ್ ಭಾಗದಲ್ಲಿ ಇವರ ಕಾರು ಟ್ರಾಫಿಕ್ ಸಿಗ್ನಲ್‌ಗಾಗಿ ಕಾಯುತ್ತಾ ನಿಂತಿದ್ದಾಗ, ಅತೀ ವೇಗವಾಗಿ ಬಂದ ಮತ್ತೊಂದು ಕಾರು ಪ್ರಸನ್ನ ಅವರ ಕಾರಿಗೆ ಹಿಂದಿನಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಈ ಭೀಕರ ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಪ್ರಸನ್ನ ಮತ್ತು ಮತ್ತೊಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಟುಂಬದ ಆಧಾರಸ್ತಂಭವಾಗಿದ್ದ ರೈತನ ಮಗಳು

ಪ್ರಸನ್ನ ಅವರ ತಂದೆ ವಸಂತ ರಾವ್ ಒಬ್ಬ ಸಾಮಾನ್ಯ ರೈತ. ತಾಯಿ ಸಣ್ಣದೊಂದು ಬ್ಯಾಗ್ ತಯಾರಿಕಾ ಘಟಕ ನಡೆಸುತ್ತಿದ್ದಾರೆ. ಮಗಳನ್ನು ಕಷ್ಟಪಟ್ಟು ಅಮೆರಿಕಕ್ಕೆ ಓದಲು ಕಳುಹಿಸಿದ್ದರು. ನ್ಯೂಯಾರ್ಕ್‌ನ ಪೇಸ್ ವಿಶ್ವವಿದ್ಯಾಲಯದಲ್ಲಿ ಬಿಸಿನೆಸ್ ಮ್ಯಾನೇಜ್‌ಮೆಂಟ್ ಪದವಿ ಮುಗಿಸಿದ್ದ ಪ್ರಸನ್ನ, ಇತ್ತೀಚೆಗಷ್ಟೇ ಪದವಿ ಪಡೆದು ಕೆಲಸದ ಹುಡುಕಾಟದಲ್ಲಿದ್ದರು. ಶಿಕ್ಷಣಕ್ಕಾಗಿ ಮಾಡಿದ್ದ ಸಾಲವನ್ನು ತೀರಿಸಿ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಅವರ ಕನಸು ಈ ಅಪಘಾತದಲ್ಲಿ ನುಚ್ಚುನೂರಾಗಿದೆ.

ಮೃತದೇಹ ತರಲು ಆರ್ಥಿಕ ನೆರವಿಗೆ ಮೊರೆ

ಮಗಳ ಸಾವಿನ ಸುದ್ದಿಯಿಂದ ಕಂಗೆಟ್ಟಿರುವ ಕುಟುಂಬಕ್ಕೆ ಈಗ ಮೃತದೇಹವನ್ನು ಭಾರತಕ್ಕೆ ತರುವುದೇ ದೊಡ್ಡ ಸವಾಲಾಗಿದೆ. ಪ್ರಸನ್ನ ಅವರ ಮೃತದೇಹವನ್ನು ತಾಯ್ನಾಡಿಗೆ ತರಲು, ಅಂತ್ಯಕ್ರಿಯೆಯ ವೆಚ್ಚ ಭರಿಸಲು ಮತ್ತು ಅವರ ಶಿಕ್ಷಣ ಸಾಲವನ್ನು ತೀರಿಸಲು ಪ್ರಸನ್ನ ಅವರ ಸೋದರಸಂಬಂಧಿ ರವಿಕುಮಾರ್ ಆನ್‌ಲೈನ್‌ನಲ್ಲಿ ಫಂಡ್ ರೈಸಿಂಗ್ (Fundraising) ಅಭಿಯಾನ ಆರಂಭಿಸಿದ್ದಾರೆ.

75,000 ಡಾಲರ್ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 40,000 ಡಾಲರ್‌ಗೂ ಹೆಚ್ಚು ಹಣ ಸಂಗ್ರಹವಾಗಿದೆ. ಪ್ರಸನ್ನ ನಮ್ಮ ಕುಟುಂಬದ ಬಲವಾದ ಸ್ತಂಭವಾಗಿದ್ದರು. ಎಲ್ಲರಿಗೂ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಬೆನ್ನೆಲುಬಾಗಿದ್ದರು. ಅವರು ಇಂದು ನಮ್ಮೊಂದಿಗಿಲ್ಲ ಎಂಬುದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೃತದೇಹವನ್ನು ಆದಷ್ಟು ಬೇಗ ಆಂಧ್ರಪ್ರದೇಶದ ಮೂಲಪಾಡು ಗ್ರಾಮಕ್ಕೆ ತಲುಪಿಸಲು ಭಾರತೀಯ ರಾಯಭಾರ ಕಚೇರಿ ಮತ್ತು ಅಧಿಕಾರಿಗಳು ನೆರವಾಗಬೇಕೆಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.