ವೆಸ್ಟ್ ಇಂಡೀಸ್ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ನಂತರ ನಿವೃತ್ತಿ ಹೊಂದುವುದಾಗಿ ತಿಳಿಸಿದ್ದಾರೆ. 2012 ಮತ್ತು 2016 ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು.

ಜಮೈಕಾ: ವೆಸ್ಟ್ ಇಂಡೀಸ್ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳ ನಂತರ ನಿವೃತ್ತಿ ಹೊಂದುವುದಾಗಿ 37 ವರ್ಷದ ರಸೆಲ್ ಘೋಷಿಸಿದ್ದಾರೆ. ಐದು ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯಗಳಿಗೆ ರಸೆಲ್ ಅವರನ್ನು ಆಯ್ಕೆದಾರರು ತಂಡದಲ್ಲಿ ಸ್ಥಾನ ಕಲ್ಪಿಸಿದ್ದಾರೆ. ರಸೆಲ್ ಅವರ ತವರು ಮೈದಾನವಾದ ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳು ನಡೆಯಲಿವೆ. ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಆ್ಯಂಡ್ರೆ ರಸೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವುದು ಕೆರಿಬಿಯನ್ ಪಡೆಗೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.

ವೆಸ್ಟ್ ಇಂಡೀಸ್ ಪರ ಆಡಲು ಸಾಧ್ಯವಾದದ್ದು ಹೆಮ್ಮೆಯ ಸಂಗತಿ. ಚಿಕ್ಕವನಿದ್ದಾಗ ವೆಸ್ಟ್ ಇಂಡೀಸ್ ಪರ ಆಡಬಹುದೆಂದು ಊಹಿಸಿಯೂ ಇರಲಿಲ್ಲ. ಯುವ ಆಟಗಾರರಿಗೆ ಸ್ಫೂರ್ತಿಯಾಗಿ ವೆಸ್ಟ್ ಇಂಡೀಸ್ ಜೆರ್ಸಿಯಲ್ಲಿ ನನ್ನನ್ನು ಗುರುತಿಸಿಕೊಳ್ಳಬೇಕೆಂಬುದು ನನ್ನ ಆಸೆ ಎಂದು ರಸೆಲ್ ವಿದಾಯ ಭಾಷಣದಲ್ಲಿ ಹೇಳಿದ್ದಾರೆ. ವೆಸ್ಟ್ ಇಂಡೀಸ್ ಪರ ಆಡುವುದು ತುಂಬಾ ಇಷ್ಟ. ತವರು ನೆಲದಲ್ಲಿ ಕುಟುಂಬದ ಮುಂದೆ ಕೊನೆಯ ಪಂದ್ಯ ಆಡಲು ಸಾಧ್ಯವಾಗುತ್ತಿರುವುದು ಸಂತಸ ತಂದಿದೆ ಎಂದು ರಸೆಲ್ ಹೇಳಿದ್ದಾರೆ.

2019 ರಿಂದ ವೆಸ್ಟ್ ಇಂಡೀಸ್ ಪರ ಟಿ20 ಕ್ರಿಕೆಟ್‌ನಲ್ಲಿ ಮಾತ್ರ ರಸೆಲ್ ಆಡುತ್ತಿದ್ದಾರೆ. ವೆಸ್ಟ್ ಇಂಡೀಸ್ ಪರ 84 ಟಿ20 ಪಂದ್ಯಗಳನ್ನು ಆಡಿರುವ ರಸೆಲ್ 22 ರ ಬ್ಯಾಟಿಂಗ್ ಸರಾಸರಿಯಲ್ಲಿ ಮತ್ತು 163.08 ಸ್ಟ್ರೈಕ್ ರೇಟ್‌ನಲ್ಲಿ 1,078 ರನ್ ಗಳಿಸಿದ್ದಾರೆ. 71 ರನ್‌ಗಳು ಅವರ ವೈಯುಕ್ತಿಕ ಅತ್ಯಧಿಕ ಸ್ಕೋರ್. ವೇಗದ ಬೌಲರ್ ಆಗಿರುವ ರಸೆಲ್ 61 ವಿಕೆಟ್‌ಗಳನ್ನು ಪಡೆದಿದ್ದಾರೆ. ವೃತ್ತಿಜೀವನದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಮಾತ್ರ ರಸೆಲ್ ವೆಸ್ಟ್ ಇಂಡೀಸ್ ಪರ ಆಡಿದ್ದಾರೆ. 56 ಏಕದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಪರ ಆಡಿರುವ ರಸೆಲ್ ನಾಲ್ಕು ಅರ್ಧಶತಕಗಳನ್ನು ಸೇರಿದಂತೆ 130 ಸ್ಟ್ರೈಕ್ ರೇಟ್‌ನಲ್ಲಿ ಮತ್ತು 27.21 ಸರಾಸರಿಯಲ್ಲಿ 1,034 ರನ್ ಗಳಿಸಿದ್ದಾರೆ. 92 ರನ್‌ಗಳು ಏಕದಿನದಲ್ಲಿ ಅವರ ಅತ್ಯಧಿಕ ಸ್ಕೋರ್. ಏಕದಿನ ಪಂದ್ಯಗಳಲ್ಲಿ 70 ವಿಕೆಟ್‌ಗಳನ್ನು ರಸೆಲ್ ಪಡೆದಿದ್ದಾರೆ.

Scroll to load tweet…

2012 ಮತ್ತು 2016 ರಲ್ಲಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಸದಸ್ಯರಾಗಿದ್ದ ರಸೆಲ್ ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುನ್ನ ನಿವೃತ್ತಿ ಘೋಷಿಸಿದ್ದಾರೆ. ವಿಶ್ವದ ವಿವಿಧ ಟಿ20 ಲೀಗ್‌ಗಳಲ್ಲಿ ಸಕ್ರಿಯರಾಗಿರುವ ರಸೆಲ್ 561 ಟಿ20 ಪಂದ್ಯಗಳಲ್ಲಿ 9,316 ರನ್ ಮತ್ತು 485 ವಿಕೆಟ್‌ಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಎರಡನೇ ಸ್ಟಾರ್ ಆಟಗಾರ ರಸೆಲ್. 29 ವರ್ಷದ ನಿಕೋಲಸ್ ಪೂರನ್ ಕೂಡ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಆಘಾತ ನೀಡಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ತಂಡ: 

ಶಾಯ್ ಹೋಪ್ (ನಾಯಕ), ಜುವೆಲ್ ಆಂಡ್ರ್ಯೂ, ಜೆಡಿಯಾ ಬ್ಲೇಡ್ಸ್, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕೆಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಎವಿನ್ ಲೂಯಿಸ್, ಗುಡಕೇಶ್ ಮೋಟಿ, ರೋವ್ಮನ್ ಪೊವೆಲ್, ಆ್ಯಂಡ್ರೆ ರಸೆಲ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೊ ಶೆಫರ್ಡ್.