ಸಿಂಗಾಪುರದಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಎರಡು ದರ್ಜೆಯ ಟೆಸ್ಟ್ ಸರಣಿ, ಟಿ20 ವಿಶ್ವಕಪ್ ತಂಡಗಳ ಸಂಖ್ಯೆ ಹೆಚ್ಚಳ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. 2024ರ ಟಿ20 ವಿಶ್ವಕಪ್‌ನ ನಿಧಿ ದುರ್ಬಳಕೆ ತನಿಖೆಯ ಬಗ್ಗೆಯೂ ಪರಿಶೀಲನೆ ನಡೆಯಲಿದೆ.
ಸಿಂಗಾಪುರ: ಭಾರೀ ಚರ್ಚೆ, ಕುತೂಹಲಕ್ಕೆ ಕಾರಣವಾಗಿರುವ ಎರಡು ದರ್ಜೆ ಮಾದರಿಯ ಟೆಸ್ಟ್ ಸರಣಿ, ಐಸಿಸಿ ಟಿ20 ವಿಶ್ವಕಪ್ ತಂಡಗಳ ಸಂಖ್ಯೆ ಹೆಚ್ಚಳ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗುರುವಾರದಿಂದ ಮಹತ್ವದ ಸಭೆ ನಡೆಸಲಿದೆ.
ಐಸಿಸಿ ಮುಖ್ಯಸ್ಥ ಜಯ್ ಶಾ ಹಾಗೂ ನೂತನ ಕಾರ್ಯನಿರ್ವಹಣಾಧಿಕಾರಿ ಸಂಜೋಗ್ ಗುಪ್ತಾ ನೇತೃತ್ವದಲ್ಲಿ ಸಿಂಗಾಪುರದಲ್ಲಿ 4 ದಿನಗಳ ಕಾಲ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ಇದರಲ್ಲಿ ಹಲವು ಅಜೆಂಡಾಗಳ ಬಗ್ಗೆ ಚರ್ಚೆ ನಡೆಯಲಿದ್ದು, ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.
ಏನಿದು 2 ದರ್ಜೆ ಟೆಸ್ಟ್?: ಟೆಸ್ಟ್ ಆಡುವ ತಂಡಗಳನ್ನು ರ್‍ಯಾಂಕಿಂಗ್ ಆಧಾರದಲ್ಲಿ 2 ದರ್ಜೆಗಳನ್ನಾಗಿ ವಿಂಗಡಿಸಿ ಸರಣಿಗಳನ್ನು ನಡೆಸುವುದು ಇದರ ಉದ್ದೇಶ. ಅಂದರೆ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತ ಪ್ರಮುಖ ತಂಡಗಳನ್ನು ಮೊದಲ ದರ್ಜೆ ಎಂದು ಪರಿಗಣಿಸಿ, ಆ ತಂಡಗಳ ನಡುವೆ ಸರಣಿ ನಡೆಸಲಾಗುತ್ತದೆ. ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಸೇರಿದಂತೆ ರ್‍ಯಾಂಕಿಂಗ್‌ನಲ್ಲಿ ಕೆಳಗಿರುವ ತಂಡಗಳನ್ನು ಮತ್ತೊಂದು ದರ್ಜೆಗೆ ಸೇರಿಸಿ ಸರಣಿ ಆಡಿಸಲಾಗುತ್ತದೆ. ಹೀಗಾದರೆ ಭಾರತ ಸೇರಿ ಬಲಿಷ್ಠ ತಂಡಗಳು ರ್‍ಯಾಂಕಿಂಗ್‌ನಲ್ಲಿ ಕೆಳಗಿರುವ ತಂಡಗಳ ಜೊತೆ ಸರಣಿ ಆಡುವುದಿಲ್ಲ. 2025-27ರ ಟೆಸ್ಟ್ ಚಾಂಪಿಯನ್‌ಶಿಪ್ ಈಗಾಗಲೇ ಆರಂಭಗೊಂಡಿರುವುದರಿಂದ 2 ದರ್ಜೆ ಟೆಸ್ಟ್ ಸರಣಿಯನ್ನು 2027ರಿಂದ ನಡೆಸುವ ಬಗ್ಗೆ ಐಸಿಸಿ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಏನೆಲ್ಲಾ ಚರ್ಚೆ?
1. ಎರಡು ದರ್ಜೆ ಮಾದರಿಯಲ್ಲಿ ಟೆಸ್ಟ್ ಸರಣಿ ಆಯೋಜನೆ.
2. ಟಿ20 ವಿಶ್ವಕಪ್ ತಂಡಗಳ ಸಂಖ್ಯೆ ಹೆಚ್ಚಳ ಕುಂಡು ಚರ್ಚೆ.
3. ಏಕದಿನ ವಿಶ್ವಕಪ್ ತಂಡಗಳಲ್ಲಿ ಯಥಾಸ್ಥಿತಿ ಕಾಯುವ ನಿರ್ಧಾರ.
4. ಐಸಿಸಿಗೆ ಹೊಸ ಸದಸ್ಯ ರಾಷ್ಟ್ರಗಳ 4 ಸೇರ್ಪಡೆ ಕುರಿತು ನಿರ್ಧಾರ.
5. 2024ರ ಟಿ20 ವಿಶ್ವಕಪ್‌ನ ನಿಧಿ ದುರ್ಬಳಕೆ ತನಿಖೆ ಬಗ್ಗೆ ಪರಿಶೀಲನೆ.
ಟಿ20 ವಿಶ್ವಕಪ್‌ನ ನಿಧಿ ದುರ್ಬಳಕೆ ಬಗ್ಗೆ ಚರ್ಚೆ
ಐಸಿಸಿ ಸಭೆಯಲ್ಲಿ 2024ರ ಟಿ20 ವಿಶ್ವಕಪ್ ಆಯೋಜನೆ ವೇಳೆ ನಡೆದ ಹಣಕಾಸಿನ ದುರುಪಯೋಗದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ. ಅಮೆರಿಕ, ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟೂರ್ನಿ ವೇಳೆ ಅವ್ಯವಹಾರ ನಡೆದ ಬಗ್ಗೆ ಆರೋಪಗಳು ಕೇಳಿ ಬಂದಿದ್ದರು. ಇದರಿಂದಾಗಿ ಕಳೆದ ಜನವರಿಯಲ್ಲಿ ಐಸಿಸಿ ಸಿಇಒ ಜೆಫ್ ಅಲಾರ್ಡೈಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಇದರ ವಿಚಾರಣೆಯ ಕುರಿತು ಐಸಿಸಿ ಸಭೆಯಲ್ಲಿ ಅಂತಿಮ ಮಾಹಿತಿ ಪಡೆಯುವ ಸಾಧ್ಯತೆಯಿದೆ.
ತಂಡಗಳ ಹೆಚ್ಚಳ: ಟಿ20 ವಿಶ್ವಕಪ್ ತಂಡಗಳ ಸಂಖ್ಯೆ ಹೆಚ್ಚಳ ಬಗ್ಗೆಯೂ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ. ಕಳೆದ ವರ್ಷ 4 ತಂಡಗಳನ್ನು ಹೆಚ್ಚಿಸಿ ಒಟ್ಟು 20 ತಂಡಗಳ ನಡುವೆ ವಿಶ್ವಕಪ್ ಆಡಿಸಲಾಗಿತ್ತು. 2026ರ ವಿಶ್ವಕಪ್‌ನಲ್ಲೂ 20 ತಂಡಗಳನ್ನೇ ಆಡಿಸುವ ಸಾಧ್ಯತೆ ಹೆಚ್ಚು. ಆದರೆ 2028ರಲ್ಲಿ
ಏಂಜಲೀಸ್ ಒಲಿಂಪಿಕ್ ಗಮನದಲ್ಲಿಟ್ಟುಕೊಂಡು 2026ರ ಬಳಿಕ ಟಿ20 ವಿಶ್ವಕಪ್‌ಗೆ ಇನ್ನೂ 4 ತಂಡಗಳನ್ನು ಸೇರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
