ರೋಹಿತ್ ಶರ್ಮಾ ಕುರಿತ ನಿರ್ಧಾರದಿಂದಾಗಿ ಬಿಸಿಸಿಐ ಮತ್ತು ಅಜಿತ್ ಅಗರ್ಕರ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಅಕ್ಟೋಬರ್‌ನಲ್ಲಿ ಅಗರ್ಕರ್ ಒಪ್ಪಂದ ಮುಕ್ತಾಯವಾಗಲಿದ್ದು, ಅವರನ್ನು ಕೈಬಿಡುವ ಸಾಧ್ಯತೆ ಇದೆ. ನೂತನ ಆಯ್ಕೆ ಸಮಿತಿ ಮುಖ್ಯಸ್ಥರ ರೇಸ್‌ನಲ್ಲಿ ಪಾರ್ಥಿವ್ ಪಟೇಲ್ ಮತ್ತು ಪ್ರಗ್ಯಾನ್ ಓಜಾ ಹೆಸರು ಮುಂಚೂಣಿಯಲ್ಲಿವೆ.
ಬೆಂಗಳೂರು: ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ಬಿಸಿಸಿಐ ನಡುವಿನ ತಿಕ್ಕಾಟ ಸದ್ಯ ಗುಟ್ಟಾಗಿಯೇನೂ ಉಳಿದಿಲ್ಲ. ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಅಜಿತ್ ಅಗರ್ಕರ್ ಜತೆಗಿನ ಒಪ್ಪಂದವನ್ನು ಮುಂದುವರೆಸದಿರಲು ಬಿಸಿಸಿಐ ತೀರ್ಮಾನಿಸಿದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಬಿಸಿಸಿಐ, ಇದೀಗ ನೂತನ ಚೀಫ್ ಸೆಲೆಕ್ಟರ್ ಆಯ್ಕೆ ಕುರಿತಂತೆ ಪ್ರಕ್ರಿಯೆ ಆರಂಭಿಸಿದೆ. 2023ರ ಜುಲೈನಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಅಜಿತ್ ಅಗರ್ಕರ್ ಅವರ ಕಾಂಟ್ರ್ಯಾಕ್ಟ್ ಮುಂಬರುವ ಅಕ್ಟೋಬರ್ 04ಕ್ಕೆ ಕೊನೆಯಾಗಲಿದೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್, 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯವರೆಗೂ ಬಿಸಿಸಿಐ ಚೀಫ್ ಸೆಲೆಕ್ಟರ್ ಆಗಿ ಮುಂದುವರೆಯಲು ಒಲವು ತೋರಿದ್ದಾರೆ ಎನ್ನಲಾಗಿದೆ. ಆದರೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರೋಹಿತ್ ಶರ್ಮಾ ಅವರ ಕುರಿತಂತೆ ಅಗರ್ಕರ್ ಅವರು ತೆಗೆದುಕೊಳ್ಳಲು ಮುಂದಾಗಿದ್ದ ತೀರ್ಮಾನದ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿತ್ತು ಎನ್ನಲಾಗಿದೆ.
ಚೀಫ್ ಸೆಲೆಕ್ಟರ್ ರೇಸ್‌ಗೆ ಬಂದ ಆರ್‌ಸಿಬಿ ಮಾಜಿ ಕ್ರಿಕೆಟಿಗ:
ಇನ್ನು ಒಂದು ವೇಳೆ ಅಜಿತ್ ಅಗರ್ಕರ್ ತಮ್ಮ ಚೀಫ್ ಸೆಲೆಕ್ಟರ್ ಹುದ್ದೆಯಿಂದ ಕೆಳಗಿಳಿದರೇ, ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಆ ಸ್ಥಾನಕ್ಕೆ ಬಿಸಿಸಿಐ ನೇಮಕ ಮಾಡುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಇದೀಗ ಹೊಸ ಬೆಳವಣಿಗೆಯೊಂದರಲ್ಲಿ, ಟೀಂ ಇಂಡಿಯಾ ಹಾಗೂ ಆರ್‌ಸಿಬಿ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಹಾಗೂ ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಇದೀಗ ಬಿಸಿಸಿಐ ಚೀಫ್ ಸೆಲೆಕ್ಟರ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಈ ಇಬ್ಬರ ಹೆಸರು ಶಾರ್ಟ್‌ಲಿಸ್ಟ್ ಆಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ರೋಹಿತ್ ಶರ್ಮಾ ವಿಚಾರವಾಗಿ ಕೈ ಸುಟ್ಟುಕೊಂಡ್ರಾ ಅಜಿತ್ ಅಗರ್ಕರ್?
ವಿವಿಧ ಮಾಧ್ಯಮಗಳ ವರದಿಗಳ ಪ್ರಕಾರ, ಇಂಗ್ಲೆಂಡ್ ಎದುರಿನ ಏಕದಿನ ಸರಣಿಗೂ ಮುನ್ನ ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್, ರೋಹಿತ್ ಅವರಿಗೆ ನಿಮ್ಮನ್ನು 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಪರಿಗಣಿಸುತ್ತಿಲ್ಲ. ಮುಂದಿನ ಏಕದಿನ ವಿಶ್ವಕಪ್‌ಗೆ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಯುವ ಆಟಗಾರನಿಗೆ ಅವಕಾಶ ನೀಡಲಾಗುವುದು ಎಂದು ಬಿಸಿಸಿಐ ಚೀಫ್ ಸೆಲೆಕ್ಟರ್ ಹೇಳಿದ್ದರಂತೆ. ಆದರೆ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ, ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಇನ್ನು ಬಿಸಿಸಿಐ ಕಾರ್ಯದರ್ಶಿ ಬಹಿರಂಗವಾಗಿಯೇ ರೋಹಿತ್ ಶರ್ಮಾಗೆ ಬೆಂಬಲ ಸೂಚಿಸಿದ್ದರು. ಇದು ಅಜಿತ್ ಅಗರ್ಕರ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಐಸಿಸಿ ಟ್ರೋಫಿ ಬರ ನೀಗಿಸಿದ ಬಿಸಿಸಿಐ ಚೀಫ್ ಸೆಲೆಕ್ಟರ್:
ಅಂದಹಾಗೆ ಭಾರತ ತಂಡವು 2013ರ ಬಳಿಕ ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಾ ಬಂದಿತ್ತು. ಇನ್ನು ಅಜಿತ್ ಅಗರ್ಕರ್ ಬಿಸಿಸಿಐ ಚೀಫ್ ಸೆಲೆಕ್ಟರ್ ಆದ ಬಳಿಕ ಭಾರತ ತಂಡವು 2024ರಲ್ಲಿ ಐಸಿಸಿ ಟಿ20 ವಿಶ್ವಕಪ್ ಜಯಿಸುವ ಮೂಲಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿತ್ತು. ಇದಾದ ಬಳಿಕ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2026ರ ಟಿ20 ವಿಶ್ವಕಪ್ ಗೆದ್ದು ಬೀಗಿದೆ.


