ಅಜಿತ್ ಅಗರ್ಕರ್ ಚೀಫ್ ಸೆಲೆಕ್ಟರ್ ಹುದ್ದೆಯಿಂದ ಕೆಳಗಿಳಿದ ಬೆನ್ನಲ್ಲೇ ಭುವನೇಶ್ವರ್ ಕುಮಾರ್ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಅಗರ್ಕರ್ ಅವರಿಂದ ಕಡೆಗಣಿಸಲ್ಪಟ್ಟಿದ್ದ ಐದು ಪ್ರಮುಖ ಆಟಗಾರರು ಮರಳಿ ಭಾರತ ತಂಡ ಸೇರುವ ನಿರೀಕ್ಷೆಯಲ್ಲಿದ್ದಾರೆ. ಶಮಿ, ಸೂರ್ಯಕುಮಾರ್ ಸೇರಿದಂತೆ ಹಲವು ಅಚ್ಚರಿಯ ಹೆಸರುಗಳು ಈ ಪಟ್ಟಿಯಲ್ಲಿವೆ.
From Mohammed Shami to Suryakumar Yadav: 5 Players Eyeing Team India Comeback | ಅಜಿತ್ ಅಗರ್ಕರ್ ಚೀಫ್ ಸೆಲೆಕ್ಟರ್ ಹುದ್ದೆಯಿಂದ ಕೆಳಗಿಳಿದ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಭಾರತ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಇದೀಗ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದೆರಡು ಐಪಿಎಲ್ ಸೀಸನ್‌ನಲ್ಲಿ ಭುವಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರೂ ಸಹಾ ಭಾರತ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆದರೆ ಬಿಸಿಸಿಐ ಹಂಗಾಮಿ ಚೀಫ್ ಸೆಲೆಕ್ಟರ್ ಪ್ರಗ್ಯಾನ್ ಓಜಾ, ಇದೀಗ ನ್ಯೂಜಿಲೆಂಡ್ ಎದುರಿನ ಟಿ20 ಸರಣಿಗೆ ಭುವಿಗೆ ಮಣೆ ಹಾಕಿದ್ದಾರೆ.
ಭುವನೇಶ್ವರ್ ಕುಮಾರ್ ಕಮ್‌ಬ್ಯಾಕ್ ಮಾಡಿದ್ದು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೇ, ಹಲವು ಕ್ರಿಕೆಟ್ ಪಂಡಿತರು ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಅಜಿತ್ ಅಗರ್ಕರ್ ಅವರಿಂದ ಕಡೆಗಣಿಸಲ್ಪಟ್ಟಿದ್ದ, ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಈ ಐದು ಕ್ರಿಕೆಟಿಗರು ಇದೀಗ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಕೆಲವು ಅಚ್ಚರಿಯ ಹೆಸರುಗಳು ಇವೆ. ಅಷ್ಟಕ್ಕೂ ಯಾರು ಆ ಐದು ಕ್ರಿಕೆಟಿಗರು ಎನ್ನುವುದನ್ನು ನೋಡೋಣ ಬನ್ನಿ.
1. ಮೊಹಮ್ಮದ್ ಶಮಿ:
ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದರೂ, ಇದುವರೆಗೂ ಅವರಿಗೆ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಸಾಧ್ಯವಾಗಿಲ್ಲ. ಅಜಿತ್ ಅಗರ್ಕರ್ ಹಾಗೂ ಶಮಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಇದೀಗ ಅಗರ್ಕರ್ ಚೀಫ್ ಸೆಲೆಕ್ಟರ್ ಹುದ್ದೆಯಿಂದ ಹೊರಬಿದ್ದ ಬೆನ್ನಲ್ಲೇ ಶಮಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
2. ಕೃನಾಲ್ ಪಾಂಡ್ಯ:
ಭುವನೇಶ್ವರ್ ಕುಮಾರ್ ಅವರಂತೆ ಆರ್‌ಸಿಬಿ ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯ ಕೂಡಾ ಸಾಕಷ್ಟು ಸಮಯದಿಂದ ಟೀಂ ಇಂಡಿಯಾ ಬಾಗಿಲು ಬಡಿಯುತ್ತಿದ್ದಾರೆ. ಐಪಿಎಲ್‌ನಲ್ಲಿ ಕಳೆದೆರಡು ಸೀಸನ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಲು ಕೃನಾಲ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದರು. ಒಂದು ಕಡೆ ಜಡೇಜಾ ಏಕದಿನ ಕ್ರಿಕೆಟ್‌ನಲ್ಲಿ ನೀರಸ ಪ್ರದರ್ಶನ ತೋರುತ್ತಿರುವುದರಿಂದ, ಅವರ ಬದಲಿಗೆ ತಮ್ಮ ಐಪಿಎಲ್ ಪ್ರದರ್ಶನದ ಆಧಾರದಲ್ಲಿ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.
3. ಮುಕೇಶ್ ಕುಮಾರ್:
ಮುಕೇಶ್ ಕುಮಾರ್‌ಗೆ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳಲು ಅವಕಾಶವೇ ಸರಿಯಾಗಿ ಸಿಗುತ್ತಿಲ್ಲ. ಇತ್ತೀಚಿಗಿನ ದೇಶಿ ಕ್ರಿಕೆಟ್‌ನಲ್ಲಿ ಮುಕೇಶ್ ಕುಮಾರ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇರಾನಿ ಕಪ್ ಟೂರ್ನಿಯಲ್ಲೂ ಮುಕೇಶ್ ಕುಮಾರ್ ಮಿಂಚಿನ ದಾಳಿ ಸಂಘಟಿಸಿದ್ದರು. ಕೆಲ ಮಾಧ್ಯಮಗಳ ವರದಿಗಳ ಪ್ರಕಾರ, ಆಯ್ಕೆ ಸಮಿತಿಯು ಕಿವೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ ಮುಕೇಶ್ ಕುಮಾರ್ ಅವರನ್ನು ಸೆಲೆಕ್ಟ್ ಮಾಡುವ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ ಎನ್ನಲಾಗಿದೆ.
4. ಸೂರ್ಯಕುಮಾರ್ ಯಾದವ್:
ಈ ಲಿಸ್ಟ್‌ನಲ್ಲಿರುವ ಅಚ್ಚರಿಯ ಹೆಸರು ಎಂದರೆ ಅದು ಸೂರ್ಯಕುಮಾರ್ ಯಾದವ್ ಅವರದ್ದು. ಯಾಕೆಂದರೆ 2026ರ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಭಾರತ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿಯೇ ಜಯಿಸಿತ್ತು. ಆದರೆ ಇದಾದ ಬಳಿಕ ಅವರ ಕಳಪೆ ಫಾರ್ಮ್‌ನಿಂದಾಗಿ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಇದೀಗ ಹೊಸ ಸೆಲೆಕ್ಟರ್ ತಮ್ಮನ್ನು ಆಯ್ಕೆ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್.
5. ಶಹಬಾಜ್ ಅಹಮದ್
ಇನ್ನು ಈ ಲಿಸ್ಟ್‌ನಲ್ಲಿರುವ ಮತ್ತೊಂದು ಅಚ್ಚರಿಯ ಹೆಸರೆಂದರೆ ಅದು ಶಹಬಾಜ್ ಅಹಮದ್. ಕಳೆದ ಕೆಲ ವರ್ಷಗಳಿಂದ ಶಹಬಾಜ್ ಅಹಮದ್ ದೇಶಿ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದರೂ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಈ ಆಲ್ರೌಂಡರ್‌ಗೆ ಸಾಧ್ಯವಾಗುತ್ತಿಲ್ಲ. ಇದೀಗ ಚೀಫ್ ಸೆಲೆಕ್ಟರ್ ಬದಲಾಗಿದ್ದು, ದೇಶಿ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಅತ್ಯುತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಈ ಆಲ್ರೌಂಡರ್ ಕನಸು ಕಾಣುತ್ತಿದ್ದಾರೆ.


