ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಿಂದ ಕೈಬಿಟ್ಟ ನಂತರ, ಬ್ಯಾಟರ್ ಸರ್ಫರಾಜ್ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ರಹಸ್ಯ ಪೋಸ್ಟ್ ಹಂಚಿಕೊಂಡಿದ್ದಾರೆ. ಕಳೆದ ಸರಣಿಯಲ್ಲಿ ಶತಕ ಸಿಡಿಸಿದ್ದರೂ ತಮ್ಮನ್ನು ಕಡೆಗಣಿಸಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಪೋಸ್ಟ್ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಭಾರತ ಮತ್ತು ಲಂಕಾ ನಡುವಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ ಹಂಚಿಕೊಂಡಿರುವ ರಹಸ್ಯ ಸಾಮಾಜಿಕ ಜಾಲತಾಣ ಪೋಸ್ಟ್ (Mystery Post) ಕ್ರಿಕೆಟ್ ಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಟೆಸ್ಟ್ ತಂಡದಿಂದ ಕಡೆಗಣಿಸಲ್ಪಟ್ಟಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವಂತೆ ಕಾಣುತ್ತಿರುವ ಈ ಪೋಸ್ಟ್ ವೈರಲ್ ಆಗಿದೆ.

ಸರ್ಫರಾಜ್ ಖಾನ್ ಕೊನೆಯ ಬಾರಿಗೆ 2024ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದರು. ಆ ಸರಣಿಯಲ್ಲಿ ಭಾರತ ತಾಯ್ನಾಡಿನಲ್ಲೇ 3-0 ಅಂತರದಲ್ಲಿ ಸೋಲುಂಡಿದ್ದರೂ, ಸರ್ಫರಾಜ್ ತಮ್ಮ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಆ ಸರಣಿಯ ಒಂದು ಪಂದ್ಯದಲ್ಲಿ 150 ರನ್‌ಗಳ ಶತಕ ಸಿಡಿಸಿದ್ದರು (ಇದು ಅವರ ಟೆಸ್ಟ್ ವೃತ್ತಿಜೀವನದ ಗರಿಷ್ಠ ಸ್ಕೋರ್). ಒಟ್ಟಾರೆಯಾಗಿ ಆ ಸರಣಿಯಲ್ಲಿ 171 ರನ್ ಗಳಿಸುವ ಮೂಲಕ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದರು. ಶ್ರೀಲಂಕಾ ಪ್ರವಾಸದ 15 ಜನರ ಬಳಗದಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ.

ರಹಸ್ಯ ಪೋಸ್ಟ್‌ನಲ್ಲಿ ಏನಿದೆ?

ತಂಡದಿಂದ ಡ್ರಾಪ್ ಆಗಿರುವ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಭಾವನಾತ್ಮಕ ಫೋಟೋ ಹಂಚಿಕೊಂಡಿರುವ ಸರ್ಫರಾಜ್ ಖಾನ್, ನಾನು ಇದಕ್ಕೆ ಸೂಕ್ತವಾಗಿಲ್ಲದಿರಬಹುದು, ಆದರೆ ಹೋರಾಟ ಮುಂದುವರಿಸುತ್ತೇನೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಅವರ ಈ ಮಾತುಗಳು ಟೀಮ್ ಇಂಡಿಯಾ ಸೆಲೆಕ್ಷನ್ ವಿರುದ್ಧದ ಪರೋಕ್ಷ ಅಸಮಾಧಾನ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ವಸೀಮ್ ಜಾಫರ್ ಪ್ರಶ್ನೆ

ಕಳೆದ ಸರಣಿಯಲ್ಲಿ 150 ರನ್ ಬಾರಿಸಿದರೂ ಸರ್ಫರಾಜ್ ಅವರನ್ನು ಪದೇ ಪದೇ ತಂಡದಿಂದ ಕೈಬಿಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಇತ್ತೀಚೆಗೆ ಹಿರಿಯ ಕ್ರಿಕೆಟಿಗ ವಸೀಮ್ ಜಾಫರ್ ಕೂಡ ಸೆಲೆಕ್ಷನ್ ಬಗ್ಗೆ ಪ್ರಶ್ನೆ ಮಾಡಿ, ಸರ್ಫರಾಜ್ ಖಾನ್, ಅಭಿಮನ್ಯು ಈಶ್ವರನ್ ಮತ್ತು ಮೊಹಮ್ಮದ್ ಶಮಿ ಇನ್ನು ಎಷ್ಟು ದಿನ ಹೊರಗುಳಿಯಬೇಕು? ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ 6 ಪಂದ್ಯಗಳ ಸಣ್ಣ ಟೆಸ್ಟ್ ಕೆರಿಯರ್‌ನಲ್ಲಿ 1 ಶತಕ ಹಾಗೂ 3 ಅರ್ಧಶತಕ ಸೇರಿದಂತೆ 37.10ರ ಸರಾಸರಿಯಲ್ಲಿ 311 ರನ್ ಗಳಿಸಿರುವ ಸರ್ಫರಾಜ್, ರಣಜಿ ಟ್ರೋಫಿ 2025-26ರಲ್ಲೂ 9 ಇನಿಂಗ್ಸ್‌ಗಳಲ್ಲಿ 53.62ರ ಸರಾಸರಿಯಲ್ಲಿ 429 ರನ್ ಬಾರಿಸಿ ಅದ್ಭುತ ಫಾರ್ಮ್‌ನಲ್ಲಿದ್ದರು.

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 15ರಿಂದ ಆರಂಭವಾಗಲಿದೆ. ಕೊಲಂಬೊದಲ್ಲಿ ಶ್ರೀಲಂಕಾ ಇಲೆವೆನ್ ವಿರುದ್ಧ ಭಾರತ ಮೂರು ದಿನಗಳ ಅಭ್ಯಾಸ (ವಾರ್ಮಪ್) ಪಂದ್ಯವನ್ನಾಡುತ್ತಿದ್ದು, ಭಾರತ ಮೊದಲು ಬೌಲಿಂಗ್ ಮಾಡಿದೆ.

ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ತಂಡಕ್ಕೆ ಬಂದಿರುವ ಜಮ್ಮು-ಕಾಶ್ಮೀರದ ವೇಗಿ ಆಕಿಬ್ ನಬಿ, ಸಾರಾಂಶ ಜೈನ್ ಮತ್ತು ಗುರ್ನೂರ್ ಬ್ರಾರ್ ಅವರಂತಹ ಹೊಸ ಮುಖಗಳು ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಕಾಯುತ್ತಿವೆ. ಶುಭದೀಪ್ ಘೋಷ್ ಅವರು ಫೀಲ್ಡಿಂಗ್ ಕೋಚ್ ಆಗಿ ಇದು ಮೊದಲ ಸರಣಿಯಾಗಿದೆ.

Scroll to load tweet…