ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನಾಗಿ ಅಜಿಂಕ್ಯ ರಹಾನೆ ಅಚ್ಚರಿಯ ಹೆಸರನ್ನು ಆಯ್ಕೆ ಮಾಡಿದ್ದಾರೆ. ಧೋನಿ, ಕೊಹ್ಲಿ ಬದಲು ಸಚಿನ್ ತೆಂಡೂಲ್ಕರ್ ಅವರನ್ನು ಹೆಸರಿಸಿದ್ದು, ಅವರ ಈ ಆಯ್ಕೆಯ ಹಿಂದಿನ ಕಾರಣ ಮತ್ತು ಸಚಿನ್ ಅವರ ನಾಯಕತ್ವದ ದಾಖಲೆಗಳನ್ನು ಇಲ್ಲಿ ವಿವರಿಸಲಾಗಿದೆ.
ಬೆಂಗಳೂರು: ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಎನ್ನುವಂತೆ ವಿದಾಯ ಘೋಷಿಸಿದ್ದರು. ಇದೀಗ 'ಸ್ಟಿಕ್ ಟು ಕ್ರಿಕೆಟ್' ಎಪಿಸೋಡ್‌ನಲ್ಲಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಹಾಗೂ ಶ್ರೇಷ್ಠ ನಾಯಕನನ್ನು ಹೆಸರಿಸಿದ್ದಾರೆ. 2011ರಿಂದ 2023ರವರೆಗೆ ಮೂರೂ ಮಾದರಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ರಹಾನೆ, ಕೇವಲ ಒಬ್ಬ ಶ್ರೇಷ್ಠ ಆಟಗಾರನನ್ನು ಆಯ್ಕೆ ಮಾಡುವುದು ಸುಲಭವಲ್ಲ, ಆದರೂ ಅಚ್ಚರಿ ರೀತಿಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡಿದ್ದಾರೆ.
'ನನ್ನ ಪ್ರಕಾರ ಕೇವಲ ಒಬ್ಬರ ಹೆಸರನ್ನು ಆಯ್ಕೆ ಮಾಡುವುದು ನಿಜಕ್ಕೂ ಕಠಿಣವಾದ ಕೆಲಸ. ಇನ್ನು ಒಬ್ಬರ ಹೆಸರನ್ನು ಆಯ್ಕೆ ಮಾಡಲೇಬೇಕು ಎಂದಾದರೇ ನಾನು ಸಚಿನ್ ತೆಂಡೂಲ್ಕರ್ ಹೆಸರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಟ್ರ್ಯಾಕ್ ರೆಕಾರ್ಡ್:
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತ ಪರ ಬರೋಬ್ಬರಿ 24 ವರ್ಷಗಳ ಕಾಲ 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 1989ರ ನವೆಂಬರ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸಚಿನ್, ನವೆಂಬರ್ 16, 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಈ ಅವಧಿಯಲ್ಲಿ ಸಚಿನ್ 200 ಟೆಸ್ಟ್, 463 ಏಕದಿನ ಹಾಗೂ ಏಕೈಕ ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 15,921, 18,426 ಹಾಗೂ 10 ರನ್ ಸಿಡಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ಭಾರತ ಗೆಲ್ಲುವಲ್ಲಿ ಸಚಿನ್ ತೆಂಡೂಲ್ಕರ್ ಪ್ರಮುಖ ಪಾತ್ರ ವಹಿಸಿದ್ದರು. ಇದಷ್ಟೇ ಅಲ್ಲದೇ ಇಂದಿಗೂ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿದೆ. ಇದರ ಜತೆಗೆ ಅತಿಹೆಚ್ಚು ಏಕದಿನ ಹಾಗೂ ಟೆಸ್ಟ್ ಪಂದ್ಯವನ್ನಾಡಿದ ದಾಖಲೆಯೂ ಸಚಿನ್ ಹೆಸರಿನಲ್ಲಿದೆ.
ನಾಯಕನಾಗಿ ಸಚಿನ್ ತೆಂಡೂಲ್ಕರ್ ಟ್ರ್ಯಾಕ್ ರೆಕಾರ್ಡ್ ಹೇಗಿದೆ?
ಸಚಿನ್ ತೆಂಡೂಲ್ಕರ್ ಓರ್ವ ಬ್ಯಾಟರ್ ಆಗಿ ಗಳಿಸಿದ ಯಶಸ್ಸಿನಷ್ಟು ನಾಯಕನಾಗಿ ಸಿಗಲಿಲ್ಲ. ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಟೀಂ ಇಂಡಿಯಾ 25 ಟೆಸ್ಟ್ ಪಂದ್ಯಗಳನ್ನಾಡಿದ್ದು, ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಇನ್ನು ಒಂಬತ್ತು ಪಂದ್ಯಗಳನ್ನು ಸೋತಿದ್ದರೇ, 12 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ 73 ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದು, 23 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇನ್ನು 43 ಪಂದ್ಯಗಳಲ್ಲಿ ಭಾರತ ಸೋತರೇ, ಒಂದು ಪಂದ್ಯ ಟೈ ಆಗಿತ್ತು. ಇನ್ನು ಆರು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ.
ಅಜಿಂಕ್ಯ ರಹಾನೆ 2011ರ ಆಗಸ್ಟ್ 31ರಂದು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಸಚಿನ್ ಜತೆಯಾಗಿ ರಹಾನೆ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಹೀಗಿದ್ದೂ ರಹಾನೆ ಸಚಿನ್ ಅವರನ್ನೇ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಹಾಗೂ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಇನ್ನು 12 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ರಹಾನೆ ಬಹುಪಾಲು ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದಡಿ ಕ್ರಿಕೆಟ್ ಆಡಿದ್ದಾರೆ. ಈ ಇಬ್ಬರು ಭಾರತದ ಶ್ರೇಷ್ಠ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಸೌರವ್ ಗಂಗೂಲಿ ಕೂಡಾ ಭಾರತದ ಸಾರ್ವಕಾಲಿಕ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಹೀಗಿದ್ದೂ ಗಂಗೂಲಿ, ಧೋನಿ ಹಾಗೂ ಕೊಹ್ಲಿಯನ್ನು ಕೈಬಿಟ್ಟು ಸಚಿನ್ ಅವರನ್ನು ಆಯ್ಕೆ ಮಾಡಿದ್ದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.


