ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ, ಹೆಡ್ ಕೋಚ್ ಗೌತಮ್ ಗಂಭೀರ್ ಟೀಂ ಇಂಡಿಯಾಗೆ ಕಠಿಣ ಅಭ್ಯಾಸ ನಡೆಸಲು ಸೂಚಿಸಿದ್ದಾರೆ. ಸ್ಪಿನ್ ಬೌಲಿಂಗ್ ಎದುರಿಸಲು ವಿಶೇಷ ತರಬೇತಿ ನಡೆಯುತ್ತಿದ್ದು, ಕೊಲಂಬೊದಲ್ಲಿ ಆರಂಭವಾದ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಇಲೆವನ್ ಉತ್ತಮ ಆರಂಭ ಪಡೆದಿದೆ.
ಕೊಲಂಬೊ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಹೆಡ್ ಕೋಚ್ ಗೌತಮ್ ಗಂಭೀರ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಆಗಸ್ಟ್ 15ರಂದು ಗಾಲೆಯಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ಅಭ್ಯಾಸದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಮತ್ತು ಸವಾಲುಗಳಿಗೆ ಸಂಪೂರ್ಣ ಸಿದ್ಧರಾಗಿರಬೇಕು ಎಂದು ಗಂಭೀರ್ ಆಟಗಾರರಿಗೆ ಸೂಚಿಸಿದ್ದಾರೆ. ಶುಕ್ರವಾರದಿಂದ ಕೊಲಂಬೊದಲ್ಲಿ ಆರಂಭವಾದ ಮೂರು ದಿನಗಳ ಅಭ್ಯಾಸ ಪಂದ್ಯಕ್ಕೂ ಮುನ್ನ ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ಗಂಭೀರ್ ಈ ಮಾತುಗಳನ್ನಾಡಿದ್ದಾರೆ.
ಗೌತಮ್ ಗಂಭೀರ್ ಖಡಕ್ ವಾರ್ನಿಂಗ್
"ನಮ್ಮ ಮುಂದಿರೋ ಗುರಿ ಸ್ಪಷ್ಟವಾಗಿದೆ. ಬ್ಯಾಟಿಂಗ್ ಇರಲಿ, ಬೌಲಿಂಗ್ ಇರಲಿ, ಆಗಸ್ಟ್ 15ರಂದು ಮೈದಾನಕ್ಕಿಳಿದಾಗ ಎದುರಾಳಿಗಳು ಕೇಳುವ ಪ್ರತಿಯೊಂದು ಪ್ರಶ್ನೆಗೂ ನಮ್ಮ ಬಳಿ ಉತ್ತರ ಸಿದ್ಧವಿರಬೇಕು. ನಮ್ಮ ಸಾಮರ್ಥ್ಯದ ಎಲ್ಲೆ ಮೀರಿ ಅಭ್ಯಾಸ ಮಾಡಲು ಇದೊಂದು ಉತ್ತಮ ಅವಕಾಶ," ಎಂದು ಗಂಭೀರ್ ಆಟಗಾರರಿಗೆ ತಿಳಿಸಿದ್ದಾರೆ.
ಕಳೆದ ಕೆಲವು ಟೆಸ್ಟ್ ಸರಣಿಗಳಲ್ಲಿ ಭಾರತದ ಬ್ಯಾಟರ್‌ಗಳು ಸ್ಪಿನ್ ಎದುರಿಸಲು ಕಷ್ಟಪಟ್ಟಿದ್ದರು. ಹೀಗಾಗಿ, ಶ್ರೀಲಂಕಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಈ ಅಭ್ಯಾಸ ಪಂದ್ಯ ಬಹಳ ಮುಖ್ಯವಾಗಿದೆ. ನಾಯಕ ಶುಭಮನ್ ಗಿಲ್, ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಸ್ಪಿನ್ ಬೌಲಿಂಗ್ ವಿರುದ್ಧ ವಿಶೇಷ ತರಬೇತಿ ನಡೆಸುತ್ತಿದ್ದಾರೆ. 2017ರ ನಂತರ ಭಾರತ ಇದೇ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡುತ್ತಿದೆ. ಸದ್ಯದ ತಂಡದಲ್ಲಿ ಕೆ.ಎಲ್. ರಾಹುಲ್, ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಅವರಿಗೆ ಮಾತ್ರ ಈ ಹಿಂದೆ ಲಂಕಾ ನೆಲದಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡಿದ ಅನುಭವವಿದೆ.
ಪೇಸರ್ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಮಾನವ್ ಸುತಾರ್ ಮತ್ತು ಸಾರಾನ್ಶ್ ಜೈನ್ ಅವರಂತಹ ಯುವ ಆಟಗಾರರಿಗೆ ಈ ಅಭ್ಯಾಸ ಪಂದ್ಯ ದೊಡ್ಡ ಪರೀಕ್ಷೆಯಾಗಲಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದರೂ, ಸಿಕ್ಕ ಸಮಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಟೀಂ ಇಂಡಿಯಾ ನಿರ್ಧರಿಸಿದೆ.
ಉತ್ತಮ ಆರಂಭ ಪಡೆದ ಶ್ರೀಲಂಕಾ ಇಲೆವನ್:
ಇನ್ನು ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ಇಲೆವನ್ ತಂಡವು ಉತ್ತಮ ಆರಂಭವನ್ನು ಪಡೆದಿದೆ. ಶ್ರೀಲಂಕಾ ಇಲೆವನ್ ಪರ ನಿಶಾನ್ ಮಧುಶಕಾ ಹಾಗೂ ರವಿಂದು ರಸಾಂತ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 110 ರನ್‌ಗಳ ಜತೆಯಾಟವಾಡಿತು. ನಿಶಾನ್ ಮಧುಶಕಾ 66 ರನ್ ಬಾರಿಸಿ ರನೌಟ್ ಆದರೆ, ರವಿಂದು 66 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ಪಸಿಂದು ಸೂರ್ಯಬಂಡಾರ 35 ರನ್ ಗಳಿಸಿ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಸದ್ಯ ಶ್ರೀಲಂಕಾ ಇಲೆವನ್ ತಂಡವು 45 ಓವರ್ ಅಂತ್ಯದ ವೇಳೆಗೆ ಎರಡು ವಿಕೆಟ್ ಕಳೆದುಕೊಂಡು 187 ರನ್ ಗಳಿಸಿದೆ.


