ಮುಂಬರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಈ ನಾಲ್ವರು ಆಟಗಾರರನ್ನು ಖರೀದಿಸಲು ಬಹುತೇಕ ಹಣ ಮೀಸಲಿಡಿ ಎಂದು ಎಬಿಡಿ ಸಲಹೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ಬಹುನಿರೀಕ್ಷಿತ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ಇದೇ ನವೆಂಬರ್ 24 ಹಾಗೂ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್ ಆಟಗಾರರ ಮೆಗಾ ಹರಾಜು ನಡೆಯಲಿದೆ. ಈಗಾಗಲೇ ಎಲ್ಲಾ 10 ಫ್ರಾಂಚೈಸಿಗಳು ಸಾಕಷ್ಟು ಆಲೋಚಿಸಿಯೇ ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿವೆ. ಅದೇ ರೀತಿ ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಹಾಗೂ ಯಶ್ ದಯಾಳ್ ಅವರನ್ನು ರೀಟೈನ್ ಮಾಡಿಕೊಂಡಿದೆ.

ಇನ್ನು 11 ಐಪಿಎಲ್‌ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಎಬಿ ಡಿವಿಲಿಯರ್ಸ್‌, ಇದೀಗ ಮುಂಬರುವ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ತಪ್ಪದೇ ಈ ನಾಲ್ವರು ಆಟಗಾರರನ್ನು ಖರೀದಿಸಬೇಕು ಎಂದು ಸಲಹೆ ನೀಡಿದ್ದಾರೆ. ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ಪರ್ಸ್‌ನಲ್ಲಿ ಎರಡನೇ ಗರಿಷ್ಠ ಮೊತ್ತ(83 ಕೋಟಿ) ಹಣ ಇರುವುದರಿಂದ ಬೆಂಗಳೂರು ಫ್ರಾಂಚೈಸಿಗೆ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಉತ್ತಮ ಅವಕಾಶ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಬಲಿಷ್ಠ ಸಂಭಾವ್ಯ ತಂಡ ಪ್ರಕಟ! ಯಾರಿಗೆಲ್ಲಾ ಸ್ಥಾನ?

ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ವಿಶ್ವದರ್ಜೆಯ ಲೆಗ್‌ಸ್ಪಿನ್ನರ್‌ಗಳಾದ ಯುಜುವೇಂದ್ರ ಚಹಲ್, ರವಿಚಂದ್ರನ್ ಅಶ್ವಿನ್, ಕಗಿಸೋ ರಬಾಡ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಲಿ ಎಂದು ಅರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಸಲಹೆ ನೀಡಿದ್ದಾರೆ.

"ನನ್ನ ಪ್ರಕಾರ ಆರ್‌ಸಿಬಿ ತಂಡಕ್ಕೆ ವಿಶ್ವದರ್ಜೆಯ ಸ್ಪಿನ್ನರ್‌ ಅಗತ್ಯವಿದೆ. ಹೀಗಾಗಿ ಯುಜುವೇಂದ್ರ ಚಹಲ್ ಅವರನ್ನು ಮತ್ತೆ ಕರೆತನ್ನಿ. ಇನ್ನು ಅಶ್ವಿನ್ ಅವರ ಬಳಿ ಸಾಕಷ್ಟು ಅನುಭವವಿದೆ. ಅವರು ಬೌಲಿಂಗ್ ಹಾಗೂ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವು ತಂದುಕೊಡಬಲ್ಲರು. ರಾಜಸ್ಥಾನ ತಂಡದಲ್ಲಿದ್ದ ಈ ಇಬ್ಬರು ಸ್ಪಿನ್ ಜೋಡಿ ಆರ್‌ಸಿಬಿ ತಂಡದಲ್ಲಿದ್ದರೇ ಎಷ್ಟು ಅಪಾಯಕಾರಿಯಾಗಬಲ್ಲರು ಎನ್ನುವುದನ್ನು ನೀವೇ ಯೋಚಿಸಿ" ಎಂದು ಎಬಿಡಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಸ್ಮೃತಿ, ಪೆರ್ರಿ, ಶ್ರೇಯಾಂಕ ಸೇರಿ 14 ಮಂದಿಯನ್ನು ಹಾಲಿ ಚಾಂಪಿಯನ್ ಆರ್‌ಸಿಬಿಗೆ ರಿಟೈನ್‌

ಇನ್ನು ಅಶ್ವಿನ್ ಹಾಗೂ ಚಹಲ್ ಬಳಿಕ ವೇಗಿ ಕಗಿಸೋ ರಬಾಡ ಅವರನ್ನು ಖರೀದಿಸಿ. ರಬಾಡ ಕೂಡಾ ಟೂರ್ನಮೆಂಟ್‌ನಲ್ಲಿ ತಂಡವನ್ನು ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಆಟಗಾರ. "ಹರಾಜಿನಲ್ಲಿ ಆರ್‌ಸಿಬಿ ಖರೀದಿಸಬೇಕಿರುವ ನನ್ನ ಆದ್ಯತೆಯ ಬೌಲರ್‌ಗಳೆಂದರೆ ಅದರು ಅದು ಚಹಲ್, ಅಶ್ವಿನ್, ರಬಾಡ ಹಾಗೂ ಭುವನೇಶ್ವರ್ ಕುಮಾರ್. ಈ ನಾಲ್ವರಿಗಾಗಿ ನಿಮ್ಮ ಪರ್ಸ್‌ನ ಬಹುತೇಕ ಹಣವನ್ನು ಮೀಸಲಿಡಿ. ಒಂದು ವೇಳೆ ರಬಾಡ ಸಿಕ್ಕಿಲ್ಲ ಎಂದಾದರೇ ಮೊಹಮ್ಮದ್ ಶಮಿ ಇಲ್ಲವೇ ಆರ್ಶದೀಪ್ ಸಿಂಗ್ ಅವರನ್ನು ಖರೀದಿಸಿ" ಎಂದು ಆರ್‌ಸಿಬಿ ಫ್ರಾಂಚೈಸಿಗೆ ಎಬಿಡಿ ಕಿವಿ ಮಾತು ಹೇಳಿದ್ದಾರೆ.