ಜೈಪುರ(ಏ.11): ಟೆಕ್ಸ್‌ಟೈಲ್ ಸಿಟಿ ಎಂದೇ ಕರೆಯಲ್ಪಡುವ ರಾಜಸ್ಥಾನದ ಭಿಲ್ವಾರದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡದಂತೆ ನಿಯಂತ್ರಿಸಲಾಗಿದೆ. ಇದರ ಶ್ರೇಯಸ್ಸನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಮಗ ರಾಹುಲ್ ಗಾಂಧಿಗೆ ನೀಡಿದ್ದರು. ಆದರೀಗ ಭಿಲ್ವಾರ ಜಿಲ್ಲೆಯ ದೇವ್ರಿಯಾ ಹಳ್ಳಿಯ ಸರ್‌ಪಂಚ್ ಸೋನಿಯಾ ಗಾಂಧಿಯ ಮೇಲೆ ಕಿಡಿಕಾರಿದೆ.

ಕೊರೋನಾ ತಡೆಯುವಲ್ಲಿ ದೇಶಕ್ಕೇ ಮಾದರಿ ಭಿಲ್ವಾರ ಡಿಸಿ ಟೀನಾ ಡಾಬೀ

ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕೊರೋನಾ ನಿಯಂತ್ರಿಸುವ ಮೂಲಕ ಭಿಲ್ವಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಸೋನಿಯಾ ಗಾಂಧಿ ತಮ್ಮ ಮಗ ರಾಹುಲ್ ಗಾಂಧಿ ಸಕಾಲದಲ್ಲಿ ಎಚ್ಚರಿಕೆ ನೀಡಿದ್ದರು. ಬಳಿಕ ರಾಹುಲ್ ಗಾಂಧಿಯ ಸಲಹೆಯಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಕೊರೋನಾವನ್ನು ಹತೋಟಿಗೆ ತಂದಿತು ಎಂದು ಸೋನಿಯಾ ಗಾಂಧಿ ಹೇಳಿದ್ದರು. 

ಇದೀಗ ದೇವ್ರಿಯಾ ಹಳ್ಳಿಯ ಸರ್‌ಪಂಚ್ ಕಿಸ್ಮತ್ ಗುರ್ಜಾರ್ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಕೊರೋನಾ ನಿಯಂತ್ರಿಸಿದ ಶ್ರೇಯ ಭಿಲ್ವಾರ್ ಜಿಲ್ಲೆಯ ಜನತೆಗೆ ಸಲ್ಲಬೇಕೆ ಹೊರತು ರಾಹುಲ್‌ಗೆ ಅಥವಾ ರಾಜ್ಯ ಸರ್ಕಾರಕ್ಕೆ ಅಲ್ಲ ಎಂದು ಹೇಳಿದ್ದಾರೆ. ನಾನೀಗ ನಿರಾಸೆಗೊಂಡಿದ್ದೇನೆ. ಇಲ್ಲಿನ ರೈತರ, ಮಹಿಳೆಯರ ಕಠಿಣ ಪರಿಶ್ರಮದಿಂದಾಗಿ ಭಿಲ್ವಾರ ಮಾದರಿ ಸಾಧ್ಯವಾಗಿದ್ದು. ಇಲ್ಲಿನ ಸ್ಥಳೀಯಾಡಳಿತದ ಮುನ್ನೆಚ್ಚರಿಕಾ ಕ್ರಮದಿಂದಾಗಿ ಇಷ್ಟೆಲ್ಲಾ ಸಾಧ್ಯವಾಗಿದ್ದು ಎಂದು ಕಿಸ್ಮತ್ ಹೇಳಿದ್ದಾರೆ.

ಕೊರೋನಾ ವಿರುದ್ಧ ಹೆಗಲಿಗೆ ಹೆಗಲು ಕೊಟ್ಟು ಹೋರಾಡೋಣ: ಪ್ರಧಾನಿ ಮೋದಿ

ರಾಜಸ್ಥಾನದ ಜಯಪುರದಿಂದ 250 ಕಿಲೋ ಮೀಟರ್ ದೂರದಲ್ಲಿರುವ ಭಿಲ್ವಾರ ಕೊರೋನಾ ವೈರಸ್ ಹಾಟ್‌ಸ್ಪಾಟ್ ಆಗಿತ್ತು. ಆದರೆ ಜಿಲ್ಲಾಧಿಕಾರಿ ಟೀನಾ ಡಾಬಿ ಅವರ ದಿಟ್ಟ ನಡೆಯಿಂದಾಗಿ ಕೊರೋನಾ ಹತೋಟಿಗೆ ಬಂದಿದೆ. ಮಾರ್ಚ್ 19ರಂದು ಭಿಲ್ವಾರದಲ್ಲಿ ಮೊದಲ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಭಾರತ ಲಾಕ್‌ಡೌನ್ ಮುನ್ನವೇ ಟೀನಾ ಡಾಬಿ ಭಿಲ್ವಾರವನ್ನು ಸೀಲ್ಡ್‌ಡೌನ್ ಮಾಡಿದ್ದರು.