ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!
ಹೊಸ ಕೊರೋನಾ ಪ್ರಕರಣಗಳು 90 ಸಾವಿರ ಗಡಿ ದಾಟಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಉನ್ನತಮಟ್ಟದ ಸಭೆ ನಡೆಸಿದ್ದಾರೆ. ಇದೀಗ ಕೊರೋನಾ ಮೀತಿ ಮೀರಿರುವ 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಎ.05): ಕೊರೋನಾ ವೈರಸ್ ಇದೀಗ ಭಾರತದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಲಸಿಕೆ ಅಭಿಯಾನ ಚುರುಗೊಳ್ಳುತ್ತಿದ್ದಂತೆ, ಮತ್ತೊಂದೆಡೆಯಿಂದ ಕೊರೋನಾ ಅಬ್ಬರ ಕೂಡ ಆರಂಭಗೊಂಡಿದೆ. ಇದೀಗ ಭಾರತದಲ್ಲಿ 90 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿದೆ. ಉನ್ನತ ಮಟ್ಟದ ಸಭೆ ನಡೆಸಿದ ಮೋದಿ, 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ವೀಕೆಂಡ್ ಲಾಕ್‌ಡೌನ್ ಘೋಷಿಸಿದ ಮಹಾರಾಷ್ಟ್ರ ಸಿಎಂ!
ಮಹಾರಾಷ್ಟ್ರ, ಪಂಜಾಬ್ ಹಾಗೂ ಚತ್ತೀಸಘಡ ರಾಜ್ಯಗಳಿಗೆ ತಂಡವನ್ನು ಕಳುಹಿಸಲು ನಿರ್ಧರಿಸಲಾಗಿದೆ. ಈ ಮೂರು ರಾಜ್ಯಗಳಲ್ಲಿ ಕೊರೋನಾ ಅತೀಯಾಗಿ ಹರಡುತ್ತಿದೆ. ಇನ್ನು ಕರ್ನಾಟಕದಲ್ಲೂ ಕೊರೋನಾ ಅಬ್ಬರ ಆರಂಭಗೊಂಡಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ, ಕಟ್ಟು ನಿಟ್ಟಿನ ಕ್ರಮ ಜಾರಿಯಾಗಲಿದೆ.
ಕೇಂದ್ರದ ತಂಡ 3 ರಾಜ್ಯದಲ್ಲಿನ ಪರಿಸ್ಥಿತಿ ಅವಲೋಕಿಸಿ ವರದಿ ನೀಡಲಿದೆ. ಕೊರೋನಾ ನಿಯಂತ್ರಕ್ಕೆ ಸರ್ಕಾರ ತೆಗೆದುಕೊಂಡ ಕ್ರಮಗಳು, ಆಸ್ಪತ್ರೆ, ಬೆಡ್, ಚಿಕಿತ್ಸೆ, ಮಾರ್ಗಸೂಚಿ ಪಾಲನೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಕಲೆಹಾಕಿ ಕೇಂದ್ರಕ್ಕೆ ವರದಿ ನೀಡಲಿದೆ.
ಶೇಕಡಾ 100 ರಷ್ಟು ಮಾಸ್ಕ್ ಬಳಕೆ, ಶುಚಿತ್ವ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಜಾಗೃತಿ ಮೂಡಿಸುವುದು, ಮಾರ್ಗಸೂಚಿಗಳ ಪಾಲನೆಗೆ ಪ್ರಾಶಸ್ತ್ಯ ನೀಡುವುದು ಸೇರಿದಂತೆ ಹಲವು ಸೂಚನೆಗಳನ್ನು ಕೇಂದ್ರ ಸರ್ಕಾರ ನೀಡಿದೆ. ಎಪ್ರಿಲ್ 6 ರಿಂದ 14ರ ವರೆಗೆ ಕೋವಿಡ್ ಜಾಗೃತಿ ಅಭಿಯಾನ ಕೂಡ ಆಯೋಜಿಸಲಾಗುತ್ತಿದೆ.