ರೈಲು ಬೋಗಿಯಲ್ಲೇ ಕೊರೋನಾ ಆಸ್ಪತ್ರೆ: ಮೋದಿ ಐಡಿಯಾ!
ರೈಲ್ವೆ ಬೋಗಿಗಳನ್ನೇ ಕೊರೋನಾ ಆಸ್ಪತ್ರೆ ಮಾಡಿದ್ದು ಮೋದಿ ಐಡಿಯಾ!| ಲಾಕ್‌ಡೌನ್ ನಂತರ ವಲಸೆ ತಪ್ಪಿಸಲು ಸಾಧ್ಯವಿಲ್ಲ ಎಂದು ಪ್ರಧಾನಿಗೆ ಗೊತ್ತಿತ್ತು| ಹೀಗಾಗಿ ಹಳ್ಳಿಗಳ ಸಮೀಪದಲ್ಲೇ ‘ಆಸ್ಪತ್ರೆ’ ಇರಬೇಕೆಂದು ಯೋಚಿಸಿದ್ದರು
ನವದೆಹಲಿ(ಏ.05): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮಿತಿ ಮೀರಿದರೆ ಅವರಿಗೆ ಚಿಕಿತ್ಸೆ ನೀಡಲೆಂದು ರೈಲ್ವೆ ಗಾಡಿಗಳನ್ನೇ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿದೆ. ಈ ಐಡಿಯಾ ಹೊಳೆದಿದ್ದು ಯಾರಿಗೆ ಎಂಬ ಪ್ರಶ್ನೆಗೀಗ ಉತ್ತರ ದೊರೆತಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರದೇ ಐಡಿಯಾ.
ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸುವುದಕ್ಕೂ ಎರಡು ದಿನ ಮುಂಚೆ ಮಾ.22ರಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಜೊತೆ ಮೋದಿ ಮಾತನಾಡಿದ್ದರು. ಆಗಲೇ ರೈಲ್ವೆ ಬೋಗಿಗಳನ್ನು ತಾತ್ಕಾಲಿಕ ಆಸ್ಪತ್ರೆಯನ್ನಾಗಿ ಪರಿವರ್ತಿಸಿದರೆ ರೈಲ್ವೆ ಹಳಿ ಇರುವಲ್ಲೆಲ್ಲಾ ಸುಲಭವಾಗಿ ಅವುಗಳನ್ನು ಕೊಂಡೊಯ್ದು ಜನರಿಗೆ ಅವರೂರಿನ ಸಮೀಪದಲ್ಲೇ ಚಿಕಿತ್ಸೆ ನೀಡಬಹುದಲ್ಲ ಎಂಬ ಸಲಹೆ ನೀಡಿದ್ದರು.
ಅದನ್ನು ತಕ್ಷಣ ಜಾರಿಗೊಳಿಸಿದ ರೈಲ್ವೆ ಇಲಾಖೆ, ಮೊದಲ ಹಂತದಲ್ಲಿ 5000 ರೈಲ್ವೆ ಬೋಗಿಗಳನ್ನು ಪರಿವರ್ತಿಸಿ 80,000 ಹಾಸಿಗೆಗಳನ್ನು ಸಿದ್ಧಪಡಿಸುವ ಯೋಜನೆಗೆ ಚಾಲನೆ ನೀಡಿತು. ನಂತರ ಅಗತ್ಯಬಿದ್ದರೆ 20,000 ಬೋಗಿಗಳನ್ನು ಪರಿವರ್ತಿಸಿ 3.2 ಲಕ್ಷ ಬೆಡ್ ಸಿದ್ಧಪಡಿಸುವುದಕ್ಕೂ ತಯಾರಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಿತ್ರಗಳು: ಕೊರೋನಾ ಸೋಂಕಿತರಿಗೆ ರೈಲು ಬೋಗಿಯಲ್ಲಿ ರೆಡಿಯಾಯ್ತು ಐಸೋಲೇಶನ್ ವಾರ್ಡ್
ಲಾಕ್‌ಡೌನ್ ಎಷ್ಟೇ ಬಿಗಿಯಾಗಿ ಜಾರಿಗೊಳಿಸಿದರೂ ನಗರಗಳಿಂದ ಹಳ್ಳಿಗೆ ವಲಸೆ ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಹಳ್ಳಿಗಳಿಗೆ ಕೊರೋನಾ ಹರಡುವ ಅಪಾಯವಿದ್ದೇ ಇದೆ. ಹಳ್ಳಿಗಳಲ್ಲಿ ಆಸ್ಪತ್ರೆಗಳ ಸೌಕರ್ಯ ಇಲ್ಲದಿರುವುದರಿಂದ ಏನಾದರೂ ಪರಿಹಾರ ಹುಡುಕಲೇಬೇಕು. ದೇಶದ 17 ರೈಲ್ವೆ ವಲಯದಲ್ಲಿ 7300 ನಿಲ್ದಾಣಗಳಿವೆ. 700ಕ್ಕೂ ಹೆಚ್ಚು ಜಿಲ್ಲೆಗಳಿಗೆ ರೈಲ್ವೆ ಸಂಪರ್ಕವಿದೆ.
ಅಂದರೆ, ಸಾಮಾನ್ಯವಾಗಿ ದೇಶದ ಯಾವುದೇ ಊರಿಗೆ ಜಿಲ್ಲಾಸ್ಪತ್ರೆಗಿಂತ ಸಮೀಪದಲ್ಲಿ ರೈಲ್ವೆ ನಿಲ್ದಾಣ ಸಿಗುತ್ತದೆ. ಅಲ್ಲಿ ಆಸ್ಪತ್ರೆಯಾಗಿ ಪರಿವರ್ತಿಸಲಾದ ರೈಲ್ವೆ ಗಾಡಿಯನ್ನು ತಂದು ನಿಲ್ಲಿಸಿದರೆ ಅಥವಾ ರೋಗಿಗಳ ಸಂಖ್ಯೆ ತೀರಾ ಹೆಚ್ಚಿರುವ ಹಳ್ಳಿಯ ಸಮೀಪ ರೈಲ್ವೆ ಹಳಿಯಿದ್ದರೆ ಅಲ್ಲಿಗೇ ರೈಲ್ವೆಯನ್ನು ತೆಗೆದುಕೊಂಡು ಹೋದರೆ ಐಸೋಲೇಶನ್, ಕ್ವಾರಂಟೈನ್ ಹಾಗೂ ಚಿಕಿತ್ಸೆ ಸುಲಭವಾಗುತ್ತದೆ. ಬೋಗಿಯಲ್ಲಿ ಕೆಲ ಸಣ್ಣಪುಟ್ಟಬದಲಾವಣೆ ಮಾಡಿಕೊಂಡು ಫಟಾಫಟ್ ಆಸ್ಪತ್ರೆಗಳನ್ನು ನಿರ್ಮಿಸಬಹುದು ಎಂದು ಪ್ರಧಾನಿ ಯೋಚಿಸಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.
"