ಮಂಗಳೂರು(ಮಾ.31): ನಗ​ರದ ನಿವಾ​ಸಿ​ಗ​ಳಿಗೆ ದಿನಬಳಕೆ ಸಾಮಗ್ರಿ ಪೂರೈಕೆ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಸಕಲ ಸಿದ್ಧತೆ ನಡೆಸಿದ್ದು, ಮಾರ್ಚ್ 31ರಿಂದಲೇ ಈ ಸೇವೆ ಆರಂಭವಾಗಲಿದೆ.

ಕಾರ್ಪೊರೇಟರ್‌ಗಳ ನೇತೃತ್ವದಲ್ಲಿ ದಿನಬಳಕೆಯ ಸಾಮಗ್ರಿಗಳ ಪೂರೈಕೆಗೆ ಈಗಾಗಲೇ ಯೋಜನೆ ರೂಪಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ದಿನಸಿ ಅಂಗಡಿಗಳನ್ನು ಗುರುತಿಸಲಾಗಿದೆ. ವಾರ್ಡ್‌ವಾರು ಅಂಗಡಿಗಳ ಹೆಸರು, ಮೊಬೈಲ್‌ ನಂಬರ್‌ ಪ್ರಕಟಿಸಲಾಗಿದೆ. ಕಾರ್ಪೊರೇಟರ್‌ಗಳಿಗೆ ಅವರ ವಾರ್ಡ್‌ನ ಪಟ್ಟಿಒದಗಿಸಲಾಗಿದೆ. ಬೇಡಿಕೆಯ ಮೇರೆಗೆ ಅವರು ದಿನಸಿ ವಸ್ತುಗಳನ್ನು ಪೂರೈಸಲು ಕ್ರಮ ವಹಿಸಲಿದ್ದಾರೆ ಎಂದು ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ ತಿಳಿಸಿದ್ದಾರೆ.

5000 ಕಿಚ್‌:

ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಮೂಡಾ ಆಯುಕ್ತರಿಗೆ ರೇಶನ್‌ ಕಿಟ್‌ಗಳನ್ನು ಸಿದ್ಧಗೊಳಿಸಲು ತಿಳಿಸಲಾಗಿದೆ. ಅದರಂತೆ, ಅಕ್ಕಿ, ಬೇಳೆ, ಸಕ್ಕರೆ, ಚಹಾ ಪುಡಿ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ 5,000 ಕಿಟ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಯಾವ ರೀತಿಯಲ್ಲಿ ವಿತರಣೆ ಮಾಡಬೇಕೆಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಪಾಲಿಕೆ ಆಯುಕ್ತ ತಿಳಿಸಿದ್ದಾರೆ.

ಕೊರೋನಾ ಅಟ್ಟಹಾಸ: ನಿನ್ನೆ 12 ಸಾವು: 227 ಜನಕ್ಕೆ ವೈರಸ್‌!

ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ ಅಂಗಡಿಗಳಿಗೆ ಹೋಂ ಡೆಲಿವರಿ ಮಾಡಲು ಪಾಸ್‌ಗಳನ್ನು ನೀಡಲಾಗಿದೆ. ಜನರು ತಮಗೆ ಬೇಕಾದ ಅಂಗಡಿಗಳಿಂದ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಹೋಂ ಡೆಲಿವರಿ ಪಡೆಯಬಹುದು. ಮಾ.31ರಂದು ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಅಂಗಡಿಗಳಲ್ಲಿ ದಿನ ಬಳಕೆಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶವಿದೆ. ಹಾಗಾಗಿ ಅಂದು ಹೋಂ ಡೆಲಿವರಿ ಅಗತ್ಯ ಬೀಳದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.