ನವದೆಹಲಿ(ಮಾ.31): ಮಾರಕ ಕೊರೋನಾ ಸೋಂಕು ಸೋಮವಾರ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 12 ಜನರನ್ನು ಬಲಿ ಪಡೆದಿದೆ. ಜೊತೆಗೆ ದೇಶಾದ್ಯಂತ 227 ಹೊಸ ಪ್ರಕರಣಗಳು ಕೂಡಾ ಬೆಳಕಿಗೆ ಬಂದಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 39ಕ್ಕೆ ಮತ್ತು ಸೋಂಕಿತರ ಸಂಖ್ಯೆ 1251ಕ್ಕೆ ತಲುಪಿದೆ.

"

ಒಂದೇ ದಿನ ಇಷ್ಟುದೊಡ್ಡ ಪ್ರಮಾಣದಲ್ಲಿ ಹೊಸ ಸೋಂಕು ಮತ್ತು ಸಾವು ಘಟಿಸಿದ್ದು ಇದೇ ಮೊದಲು. ಹೀಗಾಗಿ ಕೊರೋನಾ ಸೋಂಕಿನ ಆತಂಕ ಮತ್ತಷ್ಟುಹೆಚ್ಚಿದೆ. ಆದರೆ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕಠಿಣ ಕ್ರಮಗಳಿಂದಾಗಿ ಹೊಸ ಸೋಂಕಿನ ಪ್ರಮಾಣ ಈ ಮಟ್ಟದಲ್ಲಿದೆ. ಇಲ್ಲದೇ ಹೋಗಿದ್ದಲ್ಲಿ ಆ ಪ್ರಮಾಣ ಇನ್ನೂ ಭಾರೀ ಏರಿಕೆ ಕಾಣುವ ಸಾಧ್ಯತೆ ಇತ್ತು ಎನ್ನಲಾಗಿದೆ. ಇದೆಲ್ಲದರ ನಡುವೆಯೇ ಸೋಂಕಿಗೆ ತುತ್ತಾಗಿದ್ದ 100ಕ್ಕೂ ಹೆಚ್ಚು ಜನರ ಗುಣಮುಖರಾಗಿ ಹೊರಹೊಮ್ಮುವ ಮೂಲಕ, ಸೋಂಕಿನ ಕಪಿಮುಷ್ಠಿಯಿಂದ ಪಾರಾಗಬಹುದು ಎಂಬ ಶುಭ ಸಂದೇಶವನ್ನೂ ನೀಡಿದೆ.

12 ಬಲಿ: ದೆಹಲಿಯ ನಿಜಾಮುದ್ದೀನ್‌ ಪ್ರದೇಶದ ಅಲೇಮಿ ಮರ್ಕಜ್‌ ಬಂಗ್ಲೇವಾಲಿ ಮಸೀದಿಯಲ್ಲಿ ಮಾ.13-15ರವರೆಗೆ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ 10000ಕ್ಕೂ ಹೆಚ್ಚು ಜನ ಸೇರಿದ್ದರು. ಅಲ್ಲಿಗೆ ಹೋಗಿ ಬಂದಿದ್ದ ತೆಲಂಗಾಣದ 6 ಜನ ಸಾವನ್ನಪ್ಪಿದ್ದಾರೆ ಎಂದು ತೆಲಂಗಾಣ ಸರ್ಕಾರ ಸೋವåವಾರ ಘೋಷಿಸಿದೆ.

ಇದರ ಜೊತೆಗೆ ಮಹಾರಾಷ್ಟ್ರ, ಗುಜರಾತ್‌, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಲ್ಲಿ ಕೊರೋನಾಕ್ಕೆ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಇತ್ತೀಚೆಗೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಾವನ್ನಪ್ಪಿದ್ದ ಇಬ್ಬರು ಕೊರೋನಾದಿಂದಾಗಿಯೇ ಸಾವನ್ನಪ್ಪಿದ್ದು ಸೋಮವಾರ ಖಚಿತಪಡುವುದರೊಂದಿಗೆ ಒಟ್ಟು 12 ಸಾವು ದಾಖಲಾದಂತೆ ಆಗಿದೆ.

227 ಹೊಸ ಕೇಸು:

ಈ ನಡುವೆ ಸೋಮವಾರ 227ಕ್ಕೂ ಹೆಚ್ಚು ಹೊಸ ಸೋಂಕಿತರ ಪ್ರಕರಣ ಬೆಳಕಿಗೆ ಬಂದಿದೆ. ಈ ಪೈಕಿ ಅತಿ ಹೆಚ್ಚೆಂದರೆ ಮಹಾರಾಷ್ಟ್ರ 50, ಕೇರಳ 32, ದೆಹಲಿ 25, ಉತ್ತರಪ್ರದೇಶ 24, ತೆಲಂಗಾಣ 11,ಜಮ್ಮು ಮತ್ತು ಕಾಶ್ಮೀರ 11, ಕರ್ನಾಟಕದಲ್ಲಿ 7 ಪ್ರಕರಣ ಬೆಳಕಿಗೆ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಪ್ರಮಾಣ 1251ಕ್ಕೆ ಏರಿದೆ. ಈವರೆಗೆ ಮಹಾರಾಷ್ಟ್ರದಲ್ಲಿ 253, ಕೇರಳದಲ್ಲಿ 213, ದೆಹಲಿ 100 ಕರ್ನಾಟಕ 88, ಉತ್ತರಪ್ರದೇಶದಲ್ಲಿ 90, ಪ್ರಕರಣ ಬೆಳಕಿಗೆ ಬಂದಿದೆ.