ಬೆಂಗಳೂರು, (ಮಾ.28): ಸಾಮೂಹಿಕ ಅಂತರ ಕಾಯ್ದುಕೊಳ್ಳದಿದ್ದರೆ ಡೇಂಜರ್ ಜೋನ್‌ಗೆ ಭಾರತ ಹೋಗಲಿದ್ದು, ಅಂತರ ಕಾಯ್ದುಕೊಳ್ಳದಿದ್ದರೆ 20 ಕೋಟಿ ಜನರಿಗೆ ಕೊರೋನಾ ವೈರಸ್ ಹರಡುವ ಅಪಾಯವಿದೆ. ಕೇವಲ 60 ದಿನಗಳಲ್ಲಿ 20 ಕೋಟಿ ಜನರಿಗೆ ಸೋಂಕು ಹರಡೋ ಸಾಧ್ಯತೆಯಿದೆ. 

"

ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ರೆ ಭಾರತ ಭಾರೀ ಗಂಡಾಂತರಕ್ಕೆ ಸಿಲುಕಲಿದ್ದು, ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾದ್ರೆ ಮಾತ್ರ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರಲಿದೆ ಎಂದು ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಎಚ್ಚರಿಕೆ ಕೊಟ್ಟಿದೆ.

ಕರ್ನಾಟಕದಲ್ಲಿ ಶನಿವಾರ ಒಂದೇ ದಿನ 12 ಕೊರೋನಾ: ಇಲ್ಲಿದೆ ಜಿಲ್ಲಾವಾರು ಮಾಹಿತಿ..!

ಆದಾಗ್ಯೂ ರಾಷ್ಟ್ರ ರಾಜಧಾನಿ ನವದೆಹಲಿಯ ಆನಂದ್ ವಿಹಾರ್ ಬಸ್ ಟರ್ಮಿನಲ್ ಬಳಿ ಇದ್ದಕ್ಕಿದ್ದಂತೆಯೇ ಜನಸಾಗರವೇ ಹರಿದುಬಂದಿದೆ. ಉತ್ಸವ, ಜಾತ್ರೆಯ ರೀತಿಯಲ್ಲಿ ಜನಸ್ತೋಮವೇ ನೆರೆದಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರು ದೆಹಲಿಗೆ ಕೆಲಸಕ್ಕೆಂದು ಅರಸಿ ಬೇರೆ-ಬೇರೆ ಊರುಗಳಿಂದ ಬಂದಿದ್ದರು. ಇದೀಗ ಅವರು ತವರಿಗೆ ವಾಪಸ್ ಆಗುತ್ತಿದ್ದು, ಪೊಲೀಸ್ ಹದ್ದಿನ ಕಣ್ಣಿನ ನಡುವೆಯೇ ಬಸ್ ಟರ್ಮಿನಲ್‌ನಲ್ಲಿ ಕಿಕ್ಕಿರಿದು ಸೇರಿದ್ದಾರೆ.

ಈ ಸಾಗರವನ್ನು  ಕಂಡು ನೆಟ್ಟಿಗರು ಹೌಹಾರಿದ್ದು, ಇವರಲ್ಲಿ ಒಬ್ಬರಿಗೆ ಸೋಂಕಿತರು ಇದ್ದರೆ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಖಡಕ್ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.