ವೈದ್ಯರ ಚೀಟಿ ಇದ್ರೆ ಮದ್ಯ ವಿತರಿಸುವ ನಿರ್ಧಾರ: ಕೇರಳ ಸರ್ಕಾರಕ್ಕೆ ಛೀಮಾರಿ!
ಕೊರೋನಾ ವೈರಸ್ ಹಿನ್ನೆಲೆ ದೇಶದಾದ್ಯಂತ ಲಾಕ್‌ಡೌನ್| ಲಾಕ್‌ಡೌನ್‌ನಿಂದ ಮದ್ಯ ಬಂದ್, ಎಣ್ಣೆ ಪ್ರಿಯರ ಆತ್ಮಹತ್ಯೆ| ವೈದ್ಯರ ಚೀಟಿ ಇದ್ರೆ ಮದ್ಯ ಕಡ್ತೀವಿ ಎಂದ ಕೇರಳ ಸರ್ಕಾರ| ಕೇರಳ ಸರ್ಕಾರದ ನಿರ್ಧಾರಕ್ಕೆ ಛೀಮಾರಿ
ತಿರುವನಂತಪುರಂ(ಏ. 02): ವಿತ್‌ಡ್ರಾಯಲ್ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರಿಂದ ಚೀಟಿ ಬರೆಸಿಕೊಂಡು ಬಂದರೆ, ಅವರು ಸೂಚಿಸಿದಷ್ಟುಪ್ರಮಾಣದ ಮದ್ಯವನ್ನು ಸರ್ಕಾರಿ ಮದ್ಯದಂಗಡಿ ಮೂಲಕ ವಿತರಿಸುವುದಾಗಿ ಹೇಳಿದ್ದ ಕೇರಳ ಸರ್ಕಾರ ನಿರ್ಧಾರವನ್ನು ಭಾರತೀಯ ವೈದ್ಯಕೀಯ ಸಂಘ ಕಟುವಾಗಿ ಟೀಕಿಸಿದೆ.
ಹೌದು ಕೊರೋನಾ ವೈರಸ್ ಸಂಬಂಧ ದೇಶದಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗ ಮದ್ಯದಂಗಡಿಗಳೂ ಬಂದ್ ಆಗಿವೆ. ಇದರಿಂದ ಮದ್ಯ ವ್ಯಸನಿಗಳು ಖಿನ್ನತೆಗೊಳಗಾಗಿ ಆತ್ಮಹತ್ಯಗೆ ಶರಣಾಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಹೀಗಿರುವಾಗ ಕೇರಳ ಸರ್ಕಾರ ವೈದ್ಯರಿಂದ ಚೀಟಿ ಬರೆಸಿಕೊಂಡು ಬಂದರೆ ಅವರಿಗೆ ಮದ್ಯ ವಿತರಿಸುವ ವ್ಯವಸ್ಥೆ ಮಾಡಬಹುದೆಂದು ಹೇಳಿತ್ತು.
ಲಾಕ್‌ಡೌನ್ ಎಫೆಕ್ಸ್: ರಾಜ್ಯದಲ್ಲಿ ಮದ್ಯ ಸಿಗದೆ 17 ಮಂದಿ ಆತ್ಮಹತ್ಯೆ!
ಆದರೀಗ ಕೇರಳ ಸರ್ಕಾರದ ಈ ನಿರ್ಧಾರವನ್ನಿ ಟೀಕಿಸಿರುವ ಭಾರತೀಯ ವೈದ್ಯಕೀಯ ಸಂಘ ವಿತ್‌ಡ್ರಾಯಲ್ ಸಮಸ್ಯೆಗೆ ತುತ್ತಾಗುವ ಮದ್ಯ ವ್ಯಸನಿಗಳಿಗೆ ವೈಜ್ಞಾನಿಕವಾಗಿ ಮನೆ ಅಥವಾ ಆಸ್ಪತ್ರೆಗಳಲ್ಲಿ ಔಷಧಿ ನೀಡಿ ಚಿಕಿತ್ಸೆ ನೀಡಬೇಕು. ಅದನ್ನು ಹೊರತುಪಡಿಸಿ ಮದ್ಯ ನೀಡುವುದು ಸರಿಯಲ್ಲ ಎಂದಿದೆ. ಅಲ್ಲದೇ ಸರ್ಕಾರದ ಈ ನಿರ್ಧಾರದ ಬಗ್ಗೆ ಸಿಎಂ ಪಿಣರಾಯಿ ವಿಜಯನ್ ಜೊತೆ ಮಾತನಾಡುತ್ತೇವೆ. ಮದ್ಯ ಸೇವಿಸುವಂತೆ ಪ್ರಸ್ಕ್ರಿಪ್ಶನ್ ಬರೆದು ಕೊಡುವುದು ಚಿಕಿತ್ಸೆ ನೀಡುವ ಹಕ್ಕು ಕಸಿದುಕೊಂಡಂತೆ ಎಂದು ತಿಳಿಸಿದೆ.
ಮದ್ಯಪ್ರಿಯರಿಗೆ ವೈದ್ಯರು ಚೀಟಿ ಬರೆದುಕೊಟ್ಟರೆ ಮದ್ಯ ಸಿಗುತ್ತಾ?
ಏನಿದು ವಿತ್‌ಡ್ರಾಯಲ್ ಸಮಸ್ಯೆ?
ಪ್ರತಿದಿನ ಮದ್ಯ ಸೇವಿಸುವವರಿಗೆ ಇದ್ದಕ್ಕಿದ್ದಂತೆ ಮದ್ಯ ಸಿಗುವುದು ನಿಂತುಹೋದರೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಾಗುತ್ತವೆ. ಇದನ್ನು ವಿತ್‌ಡ್ರಾಯಲ್ ಸಮಸ್ಯೆ ಅಥವಾ ಕುಡಿತದ ಹಿಂತೆಗೆತ ಎನ್ನುತ್ತಾರೆ. ಅಂತಹ ವ್ಯಕ್ತಿಗೆ ಮದ್ಯ ಸಿಗದ ಮೊದಲ 8ರಿಂದ 12 ತಾಸುಗಳಲ್ಲಿ ನಡುಕ, ಚಡಪಡಿಕೆ, ಸಿಟ್ಟು, ಅತಿಯಾಗಿ ಬೆವರುವುದು, ತಲೆನೋವು ಇತ್ಯಾದಿ ಸಮಸ್ಯೆಗಳು ಶುರುವಾಗುತ್ತವೆ. 48ರಿಂದ 72 ಗಂಟೆಗಳಲ್ಲಿ ಭ್ರಮೆ, ಖಿನ್ನತೆ, ತಲೆ ಕೆಟ್ಟುಹೋದಂತಾಗುವುದು, ಜ್ವರ, ಮೂರ್ಛೆ ಹಾಗೂ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಂತರ ವ್ಯಕ್ತಿ ತನಗೆ ತಾನೇ ಹಾನಿ ಮಾಡಿಕೊಳ್ಳುವುದು, ಆತ್ಮಹತ್ಯೆಯಂತಹ ಯತ್ನಕ್ಕೆ ಕೈಹಾಕುವುದನ್ನು ಮಾಡಬಹುದು. ಇದಕ್ಕೂ ಮುನ್ನವೇ ಅವರನ್ನು ಡಿ-ಅಡಿಕ್ಷನ್ ಸೆಂಟರ್ ಅಥವಾ ಆಸ್ಪತ್ರೆಗೆ ಸೇರಿಸಿದರೆ ಪ್ರಾಣಾಪಾಯದಿಂದ ರಕ್ಷಿಸಬಹುದು.
ಏಪ್ರಿಲ್ 02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ