ರಾಮಾಯಣ ಎಫೆಕ್ಟ್: ದೂರದರ್ಶನ ಈಗ ನಂ.1 ಚಾನಲ್
ಖಾಸಗಿ ಚಾನೆಲ್‌ಗಳ ಭರಾಟೆಯಲ್ಲಿ ಹಿಂದೆ ಸರಿದಿದ್ದ ಸರ್ಕಾರಿ ಸ್ವಾಮ್ಯದ ದೂರದರ್ಶನ ಇದೀಗ ದೇಶದ ನಂ.1 ಚಾನೆಲ್! ‘ರಾಮಾಯಣ’, ‘ಮಹಾಭಾರತ’ದಂತಹ ಹಳೆಯ ಜನಪ್ರಿಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ವೀಕ್ಷಿಸುತ್ತಿರುವುದು ದೂರದರ್ಶನವನ್ನು ಏ.3ಕ್ಕೆ ಮುಕ್ತಾಯಗೊಂಡ ವಾರದಲ್ಲಿ ದೇಶದ ನಂ.1 ಚಾನೆಲ್ ಆಗಿ ಮಾಡಿದೆ.
ಮುಂಬೈ(ಏ.10): ಖಾಸಗಿ ಚಾನೆಲ್‌ಗಳ ಭರಾಟೆಯಲ್ಲಿ ಹಿಂದೆ ಸರಿದಿದ್ದ ಸರ್ಕಾರಿ ಸ್ವಾಮ್ಯದ ದೂರದರ್ಶನ ಇದೀಗ ದೇಶದ ನಂ.1 ಚಾನೆಲ್! ಲಾಕ್‌ಡೌನ್ ಅವಧಿಯಲ್ಲಿ ಜನರು ಬೇಸರ ಕಳೆಯಲೆಂದು ದೂರದರ್ಶನ ಮರುಪ್ರಸಾರ ಮಾಡುತ್ತಿರುವ ‘ರಾಮಾಯಣ’, ‘ಮಹಾಭಾರತ’ದಂತಹ ಹಳೆಯ ಜನಪ್ರಿಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ವೀಕ್ಷಿಸುತ್ತಿರುವುದು ದೂರದರ್ಶನವನ್ನು ಏ.3ಕ್ಕೆ ಮುಕ್ತಾಯಗೊಂಡ ವಾರದಲ್ಲಿ ದೇಶದ ನಂ.1 ಚಾನೆಲ್ ಆಗಿ ಮಾಡಿದೆ.
ರಾಮಾಯಣ, ಮಹಾಭಾರತ, ಬುನಿಯಾದ್, ಶಕ್ತಿಮಾನ್ ಸೇರಿದಂತೆ ಹಳೆಯ ಧಾರಾವಾಹಿಗಳನ್ನು ಜನ ಮತ್ತೆ ನೋಡಿದ ಪರಿಣಾಮ, ಒಂದೇ ವಾರದಲ್ಲಿ ಮುಂಜಾನೆ ಮತ್ತು ಸಂಜೆಯ ಅವಧಿಯಲ್ಲಿ ದೂರದರ್ಶನ ವೀಕ್ಷಕರ ಪ್ರಮಾಣದಲ್ಲಿ ಶೇ.40000ದಷ್ಟುಏರಿಕೆಯಾಗಿದೆ ಎಂದು ಟೀವಿ ಚಾನೆಲ್‌ಗಳ ರೇಟಿಂಗ್ ಸಂಸ್ಥೆಯಾದ ಬಾರ್ಕ್ ತನ್ನ ವರದಿಯಲ್ಲಿ ತಿಳಿಸಿದೆ. ಇದೇ ಅವಧಿಯಲ್ಲಿ ಖಾಸಗಿ ಚಾನೆಲ್‌ಗಳ ವೀಕ್ಷಣೆ ಅವಧಿ ಹೆಚ್ಚಳವಾಗಿದ್ದರೂ, ದೂರದರ್ಶನ ಕಂಡುಕೇಳರಿಯದ ಪ್ರಮಾಣದ ಪ್ರಗತಿ ದಾಖಲಿಸಿದೆ.
ಫ್ಯಾಮಿಲಿ ಜೊತೆ ಸೀರಿಯಲ್ ನೋಡಿದ 'ರಾಮಾಯಣ'ದ ರಾಮ..!
ಇದೇ ವೇಳೆ, ಏ.5ರ ಭಾನುವಾರ ರಾತ್ರಿ 9ಕ್ಕೆ ಲೈಟ್ ಆರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದ ಕಾರಣ, ಆ ಅವಧಿಯಲ್ಲಿ 2015ರ ಬಳಿಕದ ಅತ್ಯಂತ ಕಡಿಮೆ ರೇಟಿಂಗ್ಸ್ ಬಂದಿದೆ. ಲಾಕ್‌ಡೌನ್‌ಗೆ ಕರೆ ನೀಡಿದ್ದ ಮೋದಿ ಭಾಷಣವನ್ನು 19.7 ಕೋಟಿ ಜನ ವೀಕ್ಷಿಸಿದ್ದರೆ, ದೀಪ ಆರಿಸಲು ನೀಡಿದ್ದ ಕರೆ ಕೊಟ್ಟಭಾಷಣವನ್ನು 11.9 ಕೋಟಿ ಜನ ವೀಕ್ಷಿಸಿದ್ದರು.
ಇನ್ನೊಂದು ವಿಶೇಷವೆಂದರೆ ಕೊರೋನಾ ಪರಿಣಾಮ ವಿಶ್ವದ ಯಾವುದೇ ಭಾಗದಲ್ಲಿ ಯಾವುದೇ ಕ್ರೀಡಾ ಚಟುವಟಿಕೆ ನಡೆಯದೇ ಇದ್ದರೂ, ಕ್ರೀಡಾ ಚಾನೆಲ್‌ಗಳ ವೀಕ್ಷಣೆ ಪ್ರಮಾಣವೂ ಶೇ.21ರಷ್ಟುಏರಿಕೆ ಕಂಡಿದೆ. ಚಾನೆಲ್‌ಗಳು ಹಳೆಯ ಕ್ಲಾಸಿಕ್ ಪಂದ್ಯಗಳ ಮರುಪ್ರಸಾರ ಮಾಡಿದ್ದು ಫಲ ಕೊಟ್ಟಿದೆ. ಇನ್ನು ಬಹುತೇಕ ಎಲ್ಲಾ ಮನರಂಜನಾ ಕಾರ್ಯಕ್ರಮ ಪ್ರಸಾರ ಮಾಡುವ ಚಾನೆಲ್‌ಗಳು ಹಳೆಯ ಕಾರ್ಯಕ್ರಮಗಳನ್ನೇ ಆಯ್ದು ಪ್ರಸಾರ ಮಾಡಿದ್ದು, ಭರ್ಜರಿ ಫಲಕೊಟ್ಟಿದೆ.
ರಾಮ-ಸೀತೆ ಪಾತ್ರಧಾರಿಗೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಆಫರ್!
ಏ.3ಕ್ಕೆ ಮುಕ್ತಾಯವಾದ ವಾರದಲ್ಲಿ ಒಟ್ಟಾರೆ ಟೀವಿ ವೀಕ್ಷಣೆ ಪ್ರಮಾಣವು, ಹಿಂದಿನ ವಾರಕ್ಕಿಂತ ಶೇ.4 ಮತ್ತು ಕೊರೋನಾ ಸಂಕಷ್ಟಕಾಡುವ ಅವಧಿಗೂ ಮುನ್ನಾ ಅವಧಿಗಿಂತ ಶೇ.43ರಷ್ಟುಏರಿಕೆ ದಾಖಲಿಸಿದೆ. ಸುದ್ದಿ ವಾಹಿನಿಗಳು ಮತ್ತು ಚಲನಚಿತ್ರ ಪ್ರಸಾರ ಮಾಡುವ ಚಾನೆಲ್‌ಗಳ ವೀಕ್ಷಣೆ ಪ್ರಮಾಣವೂ ಸಾರ್ವಕಾಲಿಕ ಏರಿಕೆ ಕಂಡಿವೆ. ಮನರಂಜನಾ (ಜಿಇಸಿ) ಚಾನೆಲ್‌ಗಳಿಗಿಂತ ಚಲನಚಿತ್ರ ಪ್ರಸಾರ ಮಾಡುವ ಚಾನೆಲ್‌ಗಳು ಹೆಚ್ಚು ವೀಕ್ಷಣೆಗೊಂಡಿವೆ.
"