ದೇಶದ ಜನರಿಗೆ ಕೊರೋ​ನಾ ಭಯ ಮಾತ್ರ ಇದ್ದರೆ, ಕೇಂದ್ರದ ಮಂತ್ರಿಗಳಿಗೆ ಕೊರೋನಾದಷ್ಟೇ ಮೋದಿ ಭಯವೂ ಇದೆ. ಸಂಸತ್‌ ಅಧಿವೇಶನ ಮುಗಿದ ದಿನ ಸೋಮವಾರ ಬಹುತೇಕ ಕೇಂದ್ರ ಸಚಿವರು ಮೋದಿ ಮತ್ತು ಅಮಿತ್‌ ಶಾ ಹತ್ತಿರ ಹೋಗಿ, ‘ಕೊರೋ​ನಾ​ಗೆ ಕುಟುಂಬದವರು ಹೆದರಿಕೊಂಡಿದ್ದಾರೆ, ಊರಿಗೆ ಹೋಗುತ್ತೇವೆ’ ಎಂದಾಗ ಇಬ್ಬರೂ ‘ಬೇಡ, ಬುಧವಾರ ಕ್ಯಾಬಿನೆಟ್‌ ಸಭೆ ಇದೆ. ಅಲ್ಲಿಯವರೆಗೆ ಇಲ್ಲೇ ಇರಿ, ಮುಂದೆ ನೋಡೋಣ’ ಎಂದಿದ್ದಾರೆ.

ನಂತರ ಮಂತ್ರಿಗಳು ಕ್ಯಾಬಿನೆಟ್‌ಗೆ ಹೋದರೆ ಎಲ್ಲರಿಗೂ ಕೊರೋನಾ ಮೇಲುಸ್ತುವಾರಿ ಕೆಲಸ ಕೊಟ್ಟು 21 ದಿಲ್ಲಿಯಲ್ಲಿಯೇ ಇರಿ ಎಂದು ಖಡಕ್‌ ಆಗಿ ಹೇಳಿ ಕಳುಹಿಸಿದ್ದಾರೆ. ಸಮಸ್ಯೆ ಎಂದರೆ ಯಾವುದೇ ದೇಶೀಯ ವಿಮಾನಗಳೂ ಈಗ ಹಾರಾಡುತ್ತಿಲ್ಲ. ಹೀಗಾಗಿ ಕೇಂದ್ರ ಸಚಿವರು ಮನೆಗೆ ಹೋಗಬೇಕೆಂದರೂ ವಿಶೇಷ ವಿಮಾನದ ವ್ಯವಸ್ಥೆ ಬೇಕು. ಆದರೆ ಇದು ಹಾರಲಿಕ್ಕೆ ಪ್ರಧಾನಿ ಕಾರ್ಯಾಲಯದ ಅನುಮತಿ ಬೇಕೇ ಬೇಕು. ಆದರೆ ಇಂಥ ಸ್ಥಿತಿಯಲ್ಲಿ ಪ್ರಧಾನಿ ಬಳಿ ಹೋಗಲು ಪಕ್ಕಾ ಕಾರಣದ ಜೊತೆ ಧೈರ್ಯವೂ ಬೇಕು. ಇದು ಆಗೋದಲ್ಲ, ಹೋಗೋದಲ್ಲ. ಸುಮ್ಮನೆ ದಿಲ್ಲಿಯಲ್ಲಿ ಇರೋಣ ಎಂದು ಬಹುತೇಕ ಕೇಂದ್ರ ಸಚಿವರು ನಿರ್ಧರಿಸಿದ್ದಾರೆ!

21 ದಿನ ಸಹಕರಿಸಿ, ಕೊರೋನಾ ವಿರುದ್ಧ ಯುದ್ಧ ಗೆಲ್ಲೋಣ: ಮೋದಿ ಪಣ

ಗಡ್ಕರಿಗೆ ಪತ್ನಿಯಿಂದ ಗೃಹ ಬಂಧನ

ಸಂಸತ್‌ ಅಧಿವೇಶನ ಮುಗಿಯುವವರೆಗೆ ದೆಹಲಿಯಲ್ಲಿದ್ದ ನಿತಿನ್‌ ಗಡ್ಕರಿ, ಮನೆಯವರು ಎಷ್ಟುಹೇಳಿದರೂ ಕೇಳದೆ ಕಚೇರಿಯಲ್ಲಿ ಹಾಗೂ ಮನೆಯಲ್ಲಿ ಜನರನ್ನು ಭೇಟಿ ಆಗುತ್ತಲೇ ಇದ್ದರಂತೆ. ಆದರೆ ಅಧಿವೇಶನದ ಕೊನೆಯ ದಿನ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ಒಬ್ಬರು ಕಚೇರಿಗೆ ಬಂದಾಗ ಸಿಬ್ಬಂದಿಯಲ್ಲಿ ಅಲ್ಲೋಲ ಕಲ್ಲೋಲ. ಗಡ್ಕರಿ ಎಷ್ಟೇ ಕರೆದರೂ ಟೀ ಕೊಡುವವನೂ ಅಧಿಕಾರಿ ಹತ್ತಿರ ಬರಲು ತಯಾರಿರಲಿಲ್ಲ.

ಕೊನೆಗೆ ವಿಚಾರಿಸಿದಾಗ ಆ ಹಿರಿಯ ಅಧಿಕಾರಿ 24 ಗಂಟೆ ಹಿಂದಷ್ಟೇ ಅಮೆರಿಕದಿಂದ ಬಂದಿದ್ದು, ಏಕಾಂತದಲ್ಲಿರದೆ ಕಚೇರಿಗೆ ಬಂದಿದ್ದರಂತೆ. ಕೊರೋನಾ ಹೆದರಿಕೆ ಪ್ರಜೆಗಳಿಂದ ರಾಜರವರೆಗೆ ಎಲ್ಲರಿಗೂ ಇದ್ದದ್ದೇ. ಕೊನೆಗೆ ನಿತಿನ್‌ ಗಡ್ಕರಿ ಹೆಂಡತಿ ಬಲವಂತ ಮಾಡಿ ಸಾಹೇಬರನ್ನು ನಾಗಪುರಕ್ಕೆ ಕರೆಸಿಕೊಂಡಿದ್ದು, ನಿಮಗೆ ಶುಗರ್‌ ಇದೆ, ಎಲ್ಲಾದರು ಸೋಂಕು ತಗುಲಿದರೆ ಪರಿಸ್ಥಿತಿ ವಿಪರೀತ ಆಗುತ್ತದೆ ಎಂದು ಹೇಳಿ ದಿಲ್ಲಿಗೆ ಹೋಗೋದು ಬೇಡ ಎಂದು ಅಲ್ಲಿಯೇ ಉಳಿಸಿಕೊಂಡಿದ್ದಾರೆ. ಹೀಗಾಗಿಯೇ ಗಡ್ಕರಿ ನಿನ್ನೆ ಕ್ಯಾಬಿನೆಟ್‌ ಸಭೆಗೂ ಬಂದಿಲ್ಲ.

ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರಿ ನೌಕರರಿಂದ 200 ಕೋಟಿ

ರಾಜಕಾರಣಿಗಳಿಗೆ ಬೋರೋ ಬೋರು

ರಾಜಕಾರಣಿಗಳಿಗೆ ಜನರು ಮನೆಗೆ, ಕಚೇರಿಗೆ ಬರಲಿಲ್ಲ ಎಂದರೆ ಹುಚ್ಚೇ ಹಿಡಿದಂತಾಗುತ್ತದೆ. ಇದಕ್ಕೇ ಅಲ್ಲವೆ ಎಚ್‌.ಡಿ.ಕುಮಾರಸ್ವಾಮಿ 2008ರಲ್ಲಿ ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟುಕೊಡಬೇಕಾದಾಗ, ‘ಅಯ್ಯೋ ನಾನು ಅಧಿಕಾರ ಬಿಟ್ಟರೆ ನಾಳೆಯಿಂದ ನನ್ನ ಮನೆಗೆ ಯಾರೂ ಬರೋದಿಲ್ಲ​’ ಎಂದು ಆಪ್ತರ ಬಳಿ ಬೇಸರ ತೋಡಿಕೊಂಡಿದ್ದರಂತೆ. ಆದರೆ ಈಗ ಕೊರೋನಾ ಎಫೆಕ್ಟ್ ನೋಡಿ, ಜನರೂ ರಾಜಕಾರಣಿಗಳ ಮನೆಗೆ ಹೋಗುವುದಿಲ್ಲ.

ಒಂದು ವೇಳೆ ಹೋದರೂ ಮಂತ್ರಿಗಳು, ಸಂಸದರು ಜನರನ್ನು ಮನೆಯ ಗೇಟ್‌ನಿಂದಲೇ ಆಚೆಗೆ ಕಳುಹಿಸುತ್ತಿದ್ದಾರೆ. ಬಹ​ಳ ತುರ್ತು ಇದ್ದರೆ ಗೇಟ್‌ನಿಂದಲೇ ಫೋನ್‌ ಮೂಲಕ ಮಾತನಾಡಿಸುತ್ತಿದ್ದಾರೆ. ರಾಜಕಾರಣಿಗಳಿಗಂತೂ ಸಿಕ್ಕಾಪಟ್ಟೆಬೋ​ರ್‌ ಹೊಡೆಯುತ್ತಿದೆ. ಆದರೆ ಕೊರೋನಾ ಬಂದರೆಂಬ ಭಯವೂ ಇದೆ.

 ವರ್ಷಗಳ ಹಿಂದೆ ಎಸ್‌.ಎಂ ಕೃಷ್ಣ ಯಾರೇ ಕೈ ಮುಟ್ಟಿದರೂ ವಾ​ಷ್‌ ಬೇಸಿ​ನ್‌ಗೆ ಹೋಗಿ ಕೈ ತೊಳೆದುಕೊಳ್ಳುತ್ತಾರೆ ಎಂದು ರಾಜಕಾರಣಿಗಳೇ ಟೀಕಿಸುತ್ತಿದ್ದರು. ಆದರೆ ಈಗ ನೋಡಿ, ಜನ ಬರದೇ ಹೋದ​ರೂ ಪ್ರತಿಯೊಬ್ಬರೂ 20 ನಿಮಿಷಕ್ಕೆ ಒಮ್ಮೆ ಕೈ ತೊಳೆದುಕೊಳ್ಳುತ್ತಿದ್ದಾರೆ. ಕಾಲಾಯ ತಸ್ಮೈ ನಮಃ!

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್ (ದೆಹಲಿಯಿಂದ ಕಂಡ ರಾಜಕಾರಣ)