ನವದೆಹಲಿ(ಏ.03): ಮಾರಕ ಕೊರೋನಾ ವೈರಸ್‌ ನಿಗ್ರಹಕ್ಕಾಗಿ ಲಾಕ್‌ಡೌನ್‌ ಘೋಷಣೆ ಮಾಡಿರುವುದರಿಂದ ದೇಶ ಪ್ರತಿನಿತ್ಯ ಬರೋಬ್ಬರಿ 35 ಸಾವಿರ ಕೋಟಿ ರು. ನಷ್ಟಅನುಭವಿಸುತ್ತಿದೆ ಎಂದು ರೇಟಿಂಗ್‌ ಸಂಸ್ಥೆಯೊಂದು ಅಂದಾಜಿಸಿದೆ.

ಉದ್ದಿಮೆಗಳು, ವಿಮಾನ ಸಂಚಾರ ಹಾಗೂ ರಸ್ತೆ, ರೈಲಿನಂತಹ ಎಲ್ಲ ಬಗೆಯ ಸಂಚಾರ ವ್ಯವಸ್ಥೆ ಸ್ತಬ್ಧವಾಗಿರುವುದರಿಂದ ಒಟ್ಟಾರೆ 21 ದಿನಗಳ ಅವಧಿಯಲ್ಲಿ ದೇಶದ ಆರ್ಥಿಕತೆ 7.35 ಲಕ್ಷ ಕೋಟಿ ರುಪಾಯಿನಷ್ಟು ನಷ್ಟಕ್ಕೆ ತುತ್ತಾಗಲಿದೆ ಎಂದು ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿಯಾಗಿರುವ ಅಕ್ಯುಯಿಟ್‌ ರೇಟಿಂಗ್ಸ್‌ ಅಂಡ್‌ ರಿಸಚ್‌ರ್‍ ಸಂಸ್ಥೆ ತನ್ನ ವರದಿಯಲ್ಲಿ ಗುರುವಾರ ತಿಳಿಸಿದೆ.

ಇಎಂಐ ಪಾವತಿ 3 ತಿಂಗಳು ಮುಂದೂಡಿಕೆ; ಈ ಅವಧಿಗೂ ಬಡ್ಡಿ ಉಂಟು!

ಏ.15ರಿಂದ ಲಾಕ್‌ಡೌನ್‌ ತೆರವುಗೊಳ್ಳಲಿದೆಯಾದರೂ, ಕೈಗಾರಿಕೆಗಳಿಗೆ ಅಗತ್ಯವಿರುವ ವಸ್ತುಗಳ ಪೂರೈಕೆ ಸಹಜಸ್ಥಿತಿಗೆ ಮರಳಲು ಕನಿಷ್ಠ 2ರಿಂದ 3 ತಿಂಗಳುಗಳೇ ಬೇಕಾಗಬಹುದು. ಅದೂ ಅಲ್ಲದೆ ಕೊರೋನಾ ಅಬ್ಬರ ನೋಡಿಕೊಂಡು ದೇಶದ ಕೆಲವು ಭಾಗಗಳಲ್ಲಿ ಸ್ಥಳೀಯವಾಗಿ ಲಾಕ್‌ಡೌನ್‌ ಹೇರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿ ಮುಂದುವರಿಯಲಿದೆ ಎಂದು ತಿಳಿಸಿದೆ.

2020ರ ಏಪ್ರಿಲ್‌ನಿಂದ 2021ರ ಮಾರ್ಚ್ ವರೆಗಿನ ಹಣಕಾಸು ವರ್ಷದಲ್ಲಿ ದೇಶ ಶೇ.2ರಿಂದ ಶೇ.3ರಷ್ಟುಬೆಳವಣಿಗೆ ದರ (ಜಿಡಿಪಿ) ದಾಖಲಿಸಬಹುದು. ಮೊದಲ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ.5ರಿಂದ 6ರಷ್ಟುಕುಸಿಯಬಹುದು. ಎರಡನೇ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕತೆಯಲ್ಲಿ ಚೇತರಿಕೆ ಕಾಣಬಹುದು ಎಂದು ತಿಳಿಸಿದೆ.