ಎಕ್ಕ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಟ ಯುವ ರಾಜಕುಮಾರ್ ಬಾಗಲಕೋಟೆಗೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು. ಚಿತ್ರದ ಯಶಸ್ಸು ಮತ್ತು ಯುವರ ನಟನೆಯನ್ನು ಅಭಿಮಾನಿಗಳು ಮೆಚ್ಚಿಕೊಂಡರು. ಚಿತ್ರಮಂದಿರದಲ್ಲಿ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿತ್ತು.

ಬಾಗಲಕೋಟೆ (ಜುಲೈ.26): ‘ಎಕ್ಕ’ ಚಿತ್ರ ಯಶಸ್ವಿ ಪ್ರದರ್ಶನಗೊಳ್ಳುತ್ತಿರುವ ಹಿನ್ನೆಲೆ ನಟ ಯುವ ರಾಜಕುಮಾರ ಬಾಗಲಕೋಟೆಗೆ ಭೇಟಿ ನೀಡಿದರು. ಶಕ್ತಿ ಟಾಕೀಸ್‌ನಲ್ಲಿ ಅಭಿಮಾನಿಗಳಿಂದ ಭರ್ಜರಿಯಾಗಿ ಸ್ವಾಗತಿಸಲಾಯಿತು.

'ಎಕ್ಕ' ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಯುವ ಭೇಟಿ ನೀಡಿದ ಸಂದರ್ಭದಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ ಬಳಗವು ಯುವರಿಗೆ ಹೂವಿನ ಮಳೆಗರೆದು, ಕೇಕ್ ಕತ್ತರಿಸುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡರು. ಯುವ ರಾಜ್‌ಕುಮಾರ್ ಅನ್ನು ನೋಡಲು ಟಾಕಿಸ್ ಬಳಿ ಜನಸಾಗರವೇ ಹರಿದುಬಂತು. ಕಾರಿನಿಂದ ಇಳಿಯುತ್ತಲೇ ಯುವರನ್ನ ಸಮೀಪಿಸಲು, ಕೈಕುಲಕಲು ನೂಕುನುಗ್ಗಲಾಯ್ತು. ಸಮಾಧಾನದಿಂದ ಎಲ್ಲ ಅಭಿಮಾನಿಗಳಿಗೆ ಕೈ ಕುಲುಕಿದರು. ಫ್ಯಾನ್ ಫುಲ್ ಖುಷಿಪಟ್ಟು ಸಂಭ್ರಮಿಸಿದರು.

‘ಎಕ್ಕ’ ಚಿತ್ರವು ಯುವ ರಾಜ್‌ಕುಮಾರ್‌ ಅವರ ಎರಡನೇ ಸಿನಿಮಾವಾಗಿದ್ದು, ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿಬಂದಿದೆ. ಈ ಚಿತ್ರ ಅಭಿಮಾನಿಗಳ ಮನಗೆದ್ದಿದ್ದು, ಯುವ ಅವರ ಚುರುಕಾದ ನಟನೆ ಮತ್ತು ಆಕ್ಷನ್ ದೃಶ್ಯಗಳು ವಿಶೇಷ ಮೆಚ್ಚುಗೆ ಪಡೆದಿವೆ. ಚಿತ್ರದ ‘ಬ್ಯಾಂಗಲ್ ಬಂಗಾರಿ’ ಹಾಡು ಅಂತೂ ಗುನುಗುವಂತೆ ಮೋಡಿ ಮಾಡಿದೆ. ಅಷ್ಟೇ ಅಲ್ಲ, ಸಿನಿಮಾಕ್ಕೆ ಹೆಚ್ಚಿನ ಆಕರ್ಷಣೆ ತಂದಿದೆ. ಮೊದಲ ವೀಕೆಂಡ್‌ನಲ್ಲಿ ಚಿತ್ರವು 5.60 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

ಶಕ್ತಿ ಟಾಕೀಸ್‌ನಲ್ಲಿ ಯುವ ರಾಜ್‌ಕುಮಾರ್‌ ಭೇಟಿಯ ಸಂದರ್ಭದಲ್ಲಿ ಅಭಿಮಾನಿಗಳ ಉತ್ಸಾಹ ಇಮ್ಮಡಿಗೊಳಿಸಿತ್ತು. ಯುವರ ನಟನೆ ಮತ್ತು ಚಿತ್ರದ ಕಥೆಯು ಎಲ್ಲರನ್ನೂ ಆಕರ್ಷಿಸಿದೆ. ಇದು ಕನ್ನಡ ಚಿತ್ರರಂಗಕ್ಕೆ ಹೊಸತನ, ಭರವಸೆ ತಂದಿದೆ ಎಂದು ಅಭಿಮಾನಿಗಳು ಹೇಳಿದರು. ಚಿತ್ರದ ಯಶಸ್ಸಿಗೆ ಯುವರ ಶಕ್ತಿಯುತ ಪಾತ್ರ ಮತ್ತು ರೋಹಿತ್ ಅವರ ನಿರ್ದೇಶನ ಕಾರಣವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.