‘ಕೆಡಿ’ ಚಿತ್ರದ ನಾಯಕಿ ರೀಷ್ಮಾ ನಾಣಯ್ಯ ಅವರಿಗೆ ಶಿಲ್ಪಾ ಶೆಟ್ಟಿ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. ಶೂಟಿಂಗ್‌ ವೇಳೆ ಶಿಲ್ಪಾ ಶೆಟ್ಟಿ ಅವರ ಆತ್ಮವಿಶ್ವಾಸವನ್ನು ಗಮನಿಸುತ್ತಿದ್ದೆ ಎಂದಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ಧ್ರುವ ಸರ್ಜಾ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

‘ಚುರಾ ಕೆ ದಿಲ್‌ ಮೆರಾ ಅನ್ನುತ್ತಲೇ ನನ್ನ ಹೃದಯ ಕದ್ದವರು ಶಿಲ್ಪಾ ಶೆಟ್ಟಿ. ಅವರೇ ನನಗೆ ಸ್ಫೂರ್ತಿ. ಕೆಡಿ ಶೂಟಿಂಗ್‌ನಲ್ಲಿ ಅವರನ್ನೇ ಗಮನಿಸುತ್ತಿದ್ದೆ. ಕ್ಯಾಮರಾ ಎದುರಿಸುವಾಗ ಅವರ ಮುಖದಲ್ಲಿ ಎದ್ದು ಕಾಣುವ ಆತ್ಮವಿಶ್ವಾಸ ನನಗೆ ಪ್ರೇರಣೆಯಾಯಿತು.’

- ಹೀಗೆ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಬಗ್ಗೆ ಮಾತನಾಡಿದ್ದು ‘ಕೆಡಿ’ ಸಿನಿಮಾದ ನಾಯಕಿ ರೀಷ್ಮಾ ನಾಣಯ್ಯ.

ಜೋಗಿ ಪ್ರೇಮ್‌ ನಿರ್ದೇಶನ, ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಟೀಸರ್‌ ಮುಂಬೈಯಲ್ಲಿ ಬಿಡುಗಡೆಯಾಗಿದೆ.

ಸಂಜಯ್‌ ದತ್ ಈ ವೇಳೆ ರೀಷ್ಮಾಗೆ, ‘ನಮ್ಮ ಸಿನಿಮಾದ ಚಿಕ್ಕ ಹುಡುಗಿ ರೀಷ್ಮಾ. ಒಳ್ಳೆ ನಟಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಆಕೆ ಸಿನಿಮಾಕ್ಕೂ ಮೊದಲು ಶಿಕ್ಷಣವನ್ನು ಕಂಪ್ಲೀಟ್‌ ಮಾಡಿದರೆ ನನಗೆ ಹೆಚ್ಚು ಖುಷಿ ಆಗುತ್ತೆ’ ಎಂದರು. ಶಿಲ್ಪಾ ಶೆಟ್ಟಿ ಎಂದಿಗೂ ಬದಲಾಗದೆ, ಕಡೆದಿಟ್ಟ ಶಿಲ್ಪದಂತೆ ಇರುವುದನ್ನು ರೊಮ್ಯಾಂಟಿಕ್‌ ಹಾಡು ಹೇಳಿ ಮೆಚ್ಚಿಕೊಂಡರು.

ಈ ವೇಳೆ ಶಿಲ್ಪಾ ಶೆಟ್ಟಿ, ‘ರೀಷ್ಮಾ ಸೆಟ್‌ಗೆ ಬುಕ್‌ ಹಿಡ್ಕೊಂಡು ಬರುತ್ತಿದ್ದರು. ಆಕೆ ಶೂಟಿಂಗ್‌ ಬ್ರೇಕ್‌ನಲ್ಲೂ ಸಮಯ ವ್ಯರ್ಥ ಮಾಡದೆ ಓದುತ್ತಿದ್ದರು’ ಎಂದು ಮೆಚ್ಚಿಕೊಂಡರು. ‘ಪ್ರೇಮ್‌ ಈ ಸ್ಕ್ರಿಪ್ಟ್‌ ನರೇಶನ್‌ಗೆ ಬಂದಾಗ ಕಾಲು ಫ್ರಾಕ್ಚರ್‌ ಆಗಿತ್ತು. ನಾನು ಮಾಡಲ್ಲ ಅಂದರೆ ಅವರು ಬಿಡಲಿಲ್ಲ. ಆದರೆ ನರೇಶನ್‌ನ ಒಂದು ಹಂತದಲ್ಲಿ ಕಾಲು ಮುರಿದುಕೊಂಡರೂ ಎದ್ದು ನಿಂತು ನಾನು ಸತ್ಯವತಿ ಆಗ್ತೀನಿ ಅಂದೆ’ ಎಂದೂ ಶಿಲ್ಪಾ ಹೇಳಿದರು.

ನಿರ್ದೇಶಕ ಜೋಗಿ ಪ್ರೇಮ್‌, ಶಿಲ್ಪಾ ಶೆಟ್ಟಿಗೆ ಸ್ಟೇಜ್‌ ಮೇಲಿಂದಲೇ ‘ಐ ಲವ್‌ ಯೂ’ ಎಂದರೆ, ನಾಯಕ ಧ್ರುವ ಸರ್ಜಾ, ‘ಕೆಡಿ ಅಂದರೆ ಕಾಳಿದಾಸ. ಅದೇ ನನ್ನ ಪಾತ್ರ’ ಎಂದು ಹೇಳಿ ಮಾತು ಮುಗಿಸಿದರು.