ಸಿನಿಮಾ ನೋಡಿ ಸಿಟ್ಟಿಗೆದ್ದ ಮಹಿಳೆಯಿಂದ ಥಿಯೇಟರ್‌ನಲ್ಲೇ ನಟ ಎನ್‌.ಟಿ. ರಾಮಸ್ವಾಮಿ ಮೇಲೆ ಹಲ್ಲೆ!

ಲವ್ ರೆಡ್ಡಿ ಸಿನಿಮಾದ ವಿಶೇಷ ಪ್ರದರ್ಶನದ ವೇಳೆ, ಖಳನಾಯಕನ ಪಾತ್ರಧಾರಿಯ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದಾರೆ. 

woman slapped Love Reddy movie villain actor N.T.Ram Ramaswamy in theatre video viral

ತೆಲುಗಿನ ಲವ್ ರೆಡ್ಡಿ ಸಿನಿಮಾದ ವಿಶೇಷ ಸ್ಕ್ರೀನಿಂಗ್ ವೇಳೆ ಮಹಿಳೆಯೊಬ್ಬರು ಸಿಟ್ಟಿಗೆದ್ದು ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ ನಟ ಎನ್‌ ಟಿ. ರಾಮಸ್ವಾಮಿ ಅವರಿಗೆ ಥಳಿಸಿದ ಘಟನೆ ನಡೆದಿದೆ. ಸಿನಿಮಾದಲ್ಲಿ ಲೀಡಿಂಗ್  ರೋಲ್‌ನಲ್ಲಿದ್ದ ಪ್ರೇಮಿಗಳನ್ನು ಪರಸ್ಪರ ದೂರ ಮಾಡಿದಕ್ಕೆ ಸಿಟ್ಟಿಗೆದ್ದ ಮಹಿಳೆ ವಿಲನ್ ಪಾತ್ರ ಮಾಡಿದ್ದ ಎನ್‌. ಟಿ. ರಾಮಸ್ವಾಮಿ ಅವರ ಮೇಲೆ ಥಿಯೇಟರ್‌ನಲ್ಲೇ ಮುಗಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಹಠಾತ್ ಆಗಿ ನಡೆದ ಈ ಘಟನೆಯಿಂದ ನಟ ರಾಮಸ್ವಾಮಿ ಮಾತ್ರವಲ್ಲದೇ ಥಿಯೇಟರ್‌ನಲ್ಲಿದ್ದ ಚಿತ್ರತಂಡದ ಇತರ ಸದಸ್ಯರು ಹಾಗೂ ಪ್ರೇಕ್ಷಕರು ಆತಂಕಕ್ಕೆ ಒಳಗಾಗಿದ್ದಾರೆ. 

ಹೈದರಾಬಾದ್‌ನ ಥಿಯೇಟರ್‌ನಲ್ಲಿ ಅಂಜನ್ ರಾಮಚೆಂದ್ರ ಅವರ ಹೊಸ ಸಿನಿಮಾ ಲವ್ ರೆಡ್ಡಿಯ ವಿಶೇಷ ಸ್ಕ್ರೀನಿಂಗ್ ಮಾಡಲಾಗಿತ್ತು. ಆಕ್ಟೋಬರ್ 18 ರಂದೇ ಈ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಎನ್‌. ಟಿ. ರಾಮಸ್ವಾಮಿ ಖಳನಾಯಕನ ಪಾತ್ರ ಮಾಡಿದ್ದಾರೆ. ಥಿಯೇಟರ್‌ನ ಸ್ಟೇಜ್ ಮೇಲೆ ಅವರು ಹಾಗೂ ಚಿತ್ರತಂಡದ ಇತರರು ನಿಂತಿದ್ದಾಗ ಸಡನ್ ಆಗಿ ಪ್ರೇಕ್ಷಕರ ಗ್ಯಾಲರಿಯಿಂದ ಬಂದ ಮಹಿಳೆಯೊಬ್ಬರು ಎನ್‌. ಟಿ. ರಾಮಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಅಲ್ಲಿದ್ದವರು ಆ ಮಹಿಳೆಯನ್ನು ತಡೆದಿದ್ದಾರೆ. ಆದರೂ ಕೊಸರಾಡಿಕೊಂಡು ಮಹಿಳೆ ಮತ್ತೆ ರಾಮಸ್ವಾಮಿ ಮೇಲೆ ಮುಗಿಬೀಳಲು ಮುಂದಾಗಿ ಅವರ ಶರ್ಟ್ ಕಾಲರ್ ಹಿಡಿದಿದ್ದಾಳೆ. ಇದರಿಂದ ನಟ ಎನ್‌.ಟಿ. ರಾಮಸ್ವಾಮಿ ತೀವ್ರ ಆತಂಕಕ್ಕೆ ಒಳಗಾದಂತೆ ಕಂಡು ಬಂತು. ಈ ವೇಳೆ ಏಕೆ ಹೀಗೆ ಹಲ್ಲೆ ಮಾಡಲು ಮುಂದಾಗಿದ್ದೀರಿ ಎಂದು ಮಹಿಳೆಯನ್ನು ಕೇಳಿದಾಗ ಆಕೆ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದ ಪ್ರೇಮಿಗಳನ್ನು ದೂರ ಮಾಡಿದ್ದಾರೆ ಈ ಕಾರಣಕ್ಕೆ ಅವರ ಮೇಲೆ ಹಲ್ಲೆ ಮಾಡಿದ್ದಾಗಿ ಮಹಿಳೆ ಹೇಳಿದ್ದಾಳೆ ಎಂದು ವರದಿಯಾಗಿದೆ.

ಈ ಘಟನೆ ಕ್ಯಾಮರಾದಲ್ಲಿ ಸೆರೆ ಆಗಿದ್ದು, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಸಿನಿಮಾದಲ್ಲಿ ಅಂಜನ್ ರಾಮಚಂದ್ರ ಹಾಗೂ ಶ್ರಾವಣಿ ಕೃಷ್ಣವೇಣಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಇಬ್ಬರನ್ನು ದೂರ ಮಾಡುವ ಖಳನಾಯಕನ ನಿರ್ಧಾರದ ಬಗ್ಗೆ ಮಹಿಳೆ ಥಿಯೇಟರ್‌ನಲ್ಲಿ ನಟ ಎನ್‌.ಟಿ. ರಾಮಸ್ವಾಮಿ ಅವರ ಬಳಿ ಏರುಧ್ವನಿಯಲ್ಲಿ ಪ್ರಶ್ನಿಸಿದ್ದಾಳೆ ಎಂದು ವರದಿಯಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಇದು ನಿಜ ಘಟನೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವರು ಇದು ಸಿನಿಮಾದ ಪ್ರಮೋಷನ್‌ಗಾಗಿ ಮಾಡಿರುವ ಗಿಮಿಕ್ ಎಂದು ಹೇಳಿದ್ದರೆ ಮತ್ತೆ ಕೆಲವರು ಇದನ್ನು ಸ್ಕ್ರಿಪ್ಟೆಡ್ ಎಂದು ಟೀಕೆ ಮಾಡಿದ್ದಾರೆ, ಉಚಿತ ಪ್ರಮೋಷನ್‌ಗಾಗಿ ಮಾಡಿದ್ದಾರೆ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಇದೊಂದು ಪಬ್ಲಿಸಿಟಿ ಗಿಮಿಕ್ ಎಂದು ಮತ್ತೊಬ್ಬರು ಟೀಕಿಸಿದ್ದಾರೆ. 

ಅದೇನೆ ಇರಲಿ ಸಿನಿಮಾ ಜನರ ಮೇಲೆ ತೀವ್ರವಾದ ಪ್ರಭಾವವನ್ನು ಬೀರುವ ಮಾಧ್ಯಮ, ಆದರೆ ಸಿನಿಮಾವೇ ನಿಜವಲ್ಲ, ಆದರೆ ಸಿನಿಮಾ ನೋಡಿ ಖಳನಾಯಕನ ಮೇಲೆ ಮುಗಿಬಿದ್ದ ಈ ಮಹಿಳೆಯನ್ನು ಮುಗ್ಧೆ ಅನ್ನಬೇಕೆ ಅಥವಾ ಮಂಕೇ ಅನ್ನಬೇಕೆ ಜನರೇ ಹೇಳಬೇಕು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ತಿಳಿಸಿ.


 

Latest Videos
Follow Us:
Download App:
  • android
  • ios