ಹಾಲಿವುಡ್ ನಟ ಜಾಕಿ ಚಾನ್ (Jackie Chan) ಮತ್ತು ಅವರ ಇಬ್ಬರು ಮಕ್ಕಳಾದ ಜೇಸಿ ಮತ್ತು ಎಟ್ಟಾ ಜೊತೆ ಸಂಬಂಧ ಆತ್ಮೀಯವಾಗಿಲ್ಲ. ಈ ಕಾರಣದಿಂದ, ತಮ್ಮ ಕೋಟ್ಯಂತರ ಆಸ್ತಿಯನ್ನು ದಾನ ಮಾಡಲು ನಿರ್ಧರಿಸಿದ್ದಾರೆ ಎಂದು ಸುದ್ದಿಯಾಗಿದೆ. ನಿಜವಾ? ಏನು ಕಾರಣ? 

ಪ್ರಸಿದ್ಧ ಹಾಲಿವುಡ್ ನಟ ಜಾಕಿ ಚಾನ್‌ (Jackie Chan) ಅವರಿಗೆ ಇಬ್ಬರು ಮಕ್ಕಳು. ಒಬ್ಬ ಮಗ, ಒಬ್ಬಳು ಮಗಳು. ಆದರೆ ಇಬ್ಬರೂ ಈಗ ಜಾಕಿ ಹತ್ತಿರದಲ್ಲಿ ಇಲ್ಲ. ತಾವು ಗಳಿಸಿದ ಕೋಟ್ಯಂತರ ಹಣವನ್ನು ಈ ಇಬ್ಬರಲ್ಲಿ ಯಾರಿಗೂ ಪೂರ್ತಿಯಾಗಿ ಕೊಡುವ ಮೂಡ್‌ನಲ್ಲೂ ಅವರು ಇಲ್ಲ. ಆಸ್ತಿಯಲ್ಲಿ ಬಹುಭಾಗವನ್ನು ದಾನ- ದತ್ತಿಯಾಗಿ ಕೊಟ್ಟುಬಿಡ್ತೀನಿ ಅಂತ ಜಾಕಿ ಹೇಳ್ತಿದಾರೆ. ಹಾಗಾದ್ರೆ ಅವರು ತಮ್ಮ ಮಕ್ಕಳನ್ನು ಅನಾಥರನ್ನಾಗಿ ಮಾಡ್ತಿದಾರಾ? ಈ ಬೆಳವಣಿಗೆಗೆ ಕಾರಣ ಏನು?

ಜಾಕಿ ಮಕ್ಕಳಿಗೆ ಯಾವುದೇ ಆಸ್ತಿ ನೀಡೊಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಷಯ ಭಾಗಶಃ ಸತ್ಯ. ಜಾಕಿ ಚಾನ್ ಅವರಿಗೆ ಇಬ್ಬರು ಮಕ್ಕಳು. ಪುತ್ರ ಜೇಸಿ ಚಾನ್‌ ಮತ್ತು ಪುತ್ರಿ ಎಟ್ಟಾ ಚೋಕ್‌ ಚಾನ್.‌ ಇವರಲ್ಲಿ ಇಬ್ಬರೊಂದಿಗೂ ಜಾಕಿಗೆ ಸಂಬಂಧ ಹಳಸಿದೆ. ಹೀಗಾಗಿ ತಮ್ಮ ಸಂಪತ್ತಿನ ಬಹುಪಾಲನ್ನು ಮಕ್ಕಳಿಗೆ ನೀಡುವುದಕ್ಕಿಂತ ದಾನ ಕಾರ್ಯಗಳಿಗೆ ನೀಡುವ ಯೋಜನೆ ಹೊಂದಿದ್ದಾರೆ. ಇವರ ಸಂಬಂಧ ಕೆಟ್ಟದ್ದು ಹೇಗೆ ಅಂತ ನೋಡೋಣ.

ಜಾಕಿ ಚಾನ್ ಮತ್ತು ಅವರ ಪತ್ನಿ ಜಾನ್‌ ಲಿನ್‌ ವಿವಾಹವಾಗಿದ್ದು 1982ರಲ್ಲಿ. ಅದೇ ವರ್ಷ ಅವರಿಗೆ ಪುತ್ರ ಜೇಸಿ ಚಾನ್‌ ಜನಿಸಿದರು. ಕೆಲಸದ ಒತ್ತಡದಿಂದ ಜಾಕಿ ತಮ್ಮ ಮಗನೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ ಎಂಬುದನ್ನು ಅವರು ತಮ್ಮ ಆತ್ಮಕಥೆ ʼನೆವರ್‌ ಗ್ರೋ ಅಪ್‌ʼ ಇದರಲ್ಲಿ ಒಪ್ಪಿಕೊಂಡಿದ್ದಾರೆ. “ನಾನು ಒಳ್ಳೆಯ ತಂದೆ ಆಗಿರಲಿಲ್ಲ” ಎಂಬ ಮಾತು ಅವರಿಂದಲೇ ಬಂದಿದೆ.

ಮಾದಕ ವ್ಯಸನಿಯಾದ ಜೇಸಿ ಚಾನ್

ಜೇಸಿಯ ಬೆಳವಣಿಗೆಯಲ್ಲಿ ತಾಯಿ ಮುಖ್ಯ ಪಾತ್ರ ವಹಿಸಿದ್ದಳು. ನಂತರ ಆತ ಹಾಂಗ್‌ಕಾಂಗ್‌ನಲ್ಲಿ ನಟ ಮತ್ತು ಗಾಯಕನಾಗಿ ತನ್ನದೇ ಗುರುತು ಮೂಡಿಸಲು ಪ್ರಯತ್ನಿಸಿದ. ಆದರೆ ಮಾದಕ ವಸ್ತುಗಳಿಗೆ ದಾಸನಾದ. 2014ರಲ್ಲಿ ಮಾದಕ ವಸ್ತು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ. ಈ ಘಟನೆ ಜಾಕಿಯ ಕುಟುಂಬಕ್ಕೆ ದೊಡ್ಡ ಹೊಡೆತ ನೀಡಿತು. ಸ್ವಲ್ಪ ಕಾಲ ಜಾಕಿ ಮಗನ ಮುಖ ನೋಡಲು ಹೋಗಲಿಲ್ಲ. ನಂತರ ತಂದೆ-ಮಗ ಸಂಬಂಧದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತು. ʼಅವನು ನನ್ನ ಮಗ. ಆದರೆ ಅವನು ನನ್ನ ಫ್ಯಾಮಿಲಿಯ ಮೌಲ್ಯಗಳಿಗೆ ತಕ್ಕ ಹಾಗೆ ಇಲ್ಲದೆ ಹೋದಾಗ ನನಗೆ ಸಿಟ್ಟು ಬಂದಿತ್ತು. ಜೈಲು ಶಿಕ್ಷೆಯ ಬಳಿಕ ಅವನು ಸುಧಾರಣೆ ಆಗಿದ್ದಾನೆʼ ಎಂದಿದ್ದಾರೆ ಜಾಕಿ. ಅದರರ್ಥ ತಾನು ಮಗನಿಗೆ ಆಸ್ತಿ ಕೊಡೋದೇ ಇಲ್ಲ ಎಂದು ಹೇಳಿಲ್ಲ.

ಇನ್ನೊಂದೆಡೆ, ಜಾಕಿ ಚಾನ್ ಅವರ ವೈಯಕ್ತಿಕ ಜೀವನದಲ್ಲಿ ದೊಡ್ಡ ವಿವಾದವಾಗಿದ್ದ ವಿಷಯವೆಂದರೆ ಮಾಜಿ ಸೌಂದರ್ಯ ರಾಣಿ ಎಲೈನ್‌ ಎನ್‌ ಯಿ ಲೀ ಅವರೊಂದಿಗೆ ಹೊಂದಿದ್ದ ಸಂಬಂಧ. ಈ ಸಂಬಂಧದಿಂದ 1999ರಲ್ಲಿ ಅವರಿಗೆ ಮಗಳು ಎಟ್ಟಾ ಜನಿಸಿದಳು. ಆದರೆ, ಎಟ್ಟಾ ಮತ್ತು ಜಾಕಿ ನಡುವೆ ಯಾವುದೇ ನಿಕಟ ಸಂಬಂಧ ಇಲ್ಲ. ಯಾಕೆಂದರೆ ಆಕೆಯ ತಾಯಿ ಜಾಕಿಯಿಂದ ದೂರವೇ ಇದ್ದಳು. ಎಟ್ಟಾ ಸ್ವತಃ “ಅವರು ನನ್ನ ತಂದೆಯಲ್ಲ, ಕೇವಲ ಬಯಾಲಾಜಿಕಲ್‌ ತಂದೆ ಮಾತ್ರ” ಎಂದು ಹೇಳಿಕೊಂಡಿದ್ದಾಳೆ. ಈ ಹೇಳಿಕೆ ಅವರಿಬ್ಬರ ನಡುವಿನ ದೂರವನ್ನು ಸ್ಪಷ್ಟಪಡಿಸುತ್ತದೆ.

ಜಾಕಿ ಚಾನ್ ಅವರು ತಮ್ಮ ಆಸ್ತಿಯನ್ನು ಮಕ್ಕಳಿಗೆ ನೀಡದೇ ದಾನ ಕಾರ್ಯಗಳಿಗೆ ಬಳಸುವ ಯೋಚನೆ ಹೊಂದಿದ್ದಾರೆ ಎಂಬುದು ಹಿಂದಿನಿಂದಲೂ ಕೇಳಿಬರುತ್ತಿರುವ ವಿಷಯ. ಅವರು “ಮಗನಿಗೆ ಸಾಮರ್ಥ್ಯ ಇದ್ದರೆ ಆತ ತನ್ನದೇ ಹಣ ಸಂಪಾದಿಸಬೇಕು” ಎಂದು ಹೇಳಿರುವುದು ಇದಕ್ಕೆ ಕಾರಣ. ಇನ್ನು ಪುತ್ರಿಗೆ ತಂದೆಯ ಆಸ್ತಿ ಬೇಕಿಲ್ಲ. ಹೀಗಾಗಿ ಜಾಕಿ ಆಕೆಗೆ ಅದನ್ನು ನೀಡುವುದು ಅನುಮಾನವೇ. ಆದರೆ ಜಾಕಿ ಚಾನ್ ತಮ್ಮ ಮಕ್ಕಳನ್ನು ಸಂಪೂರ್ಣವಾಗಿ ಆಚೆ ಹಾಕಿದ್ದಾರೆ ಎಂಬುದು ತಪ್ಪು ಅಥವಾ ಅತಿರಂಜಿತ.