ಬಾಲಿವುಡ್‌ನ ಬ್ಯಾಡ್‌ಬಾಯ್‌, ಸಲ್ಲುದಾದಾ ಅಲಿಯಾಸ್‌ ಸಲ್ಮಾನ್‌ ಭಾಯ್‌ ಅಲಿಯಾಸ್‌ ಸಲ್ಮಾನ್‌ ಖಾನ್‌ಗೆ ನೂರೆಂಟು ಪ್ರೇಯಸಿಯರು ಎಂಬುದು ನಿಮಗೆ ಗೊತ್ತೇ ಇದೆ. ಐಶ್ವರ್ಯ ರೈಯಿಂದ ಆರಂಭಿಸಿ ಕತ್ರಿನಾ ಕೈಫ್‌ ವರೆಗೂ, ಆತ ನಟಿಸಿದ ಪ್ರತಿಯೊಬ್ಬ ನಟಿಯ ಜತೆಗೂ ಮೀಡಿಯಾಗಳು ಕತೆ ಕಟ್ಟುತ್ತ ಬಂದಿವೆ. ಇದರಲ್ಲಿ ಎಷ್ಟು ನಿಜವೋ ಎಷ್ಟು ಸುಳ್ಳೋ. ಆದರೆ ಐಶ್ವರ್ಯ ರೈ ಸುದ್ದಿ ಬಂದಾಗ ಮಾತ್ರ ಸಲ್ಮಾನ್‌ ಭಾವುಕ ಆಗುವುದನ್ನು ಕಂಡವರು ಇದ್ದಾರೆ. ಇತ್ತೀಚೆಗೆ ಬಿಗ್‌ ಬಾಸ್‌ ವೇದಿಕೆಯಲ್ಲಿ ಆತ ಐಶ್ವರ್ಯ ರೈ ಮತ್ತು ತನ್ನ ಅಭಿನಯದ ಹಮ್ ದಿಲ್‌ ದೇ ಚುಕೇ ಸನಂ ಚಿತ್ರದ ಹಾಡು ಕೇಳಿ ಅತ್ತದ್ದು ಸುದ್ದಿಯಾಗಿತ್ತು.

ಅದೇ ಹಳೇ ಕತೆ. ಸಲ್ಮಾನ್‌ನ ಲೇಟೆಸ್ಟ್ ಪ್ರೇಯಸಿ ಎಂದು ಸುದ್ದಿಯಾಗಿರುವುದು ಲುಲಿಯಾ ವಂಟೂರ್‌ ಎಂಬಾಕೆಯ ಬಗ್ಗೆ. ವಂಟೂರ್ ಎನ್ನುವಾಗ ನಮ್ಮ ಆಂಧ್ರದ ಗುಂಟೂರು ಥರ ಕೇಳಿಸಬಹುದು; ಆದರೆ ಈಕೆ ರೊಮೇನಿಯಾ ದೇಶದವಳು. ಅಲ್ಲಿನ ಕಿರುತೆರೆ ನಟಿ, ಆಂಕರ್‌ ಮತ್ತು ಹಾಡುಗಾರ್ತಿ. ಈಕೆಯನ್ನು ಬಾಲಿವುಡ್‌ಗೆ ಹಾಡುಗಾರ್ತಿಯನ್ನಾಗಿ ಕರೆದು ತಂದವನು ಸ್ವತಃ ಸಲ್ಮಾನ್‌ನೇ. ರೇಸ್‌-೩ ಚಿತ್ರಕ್ಕೆ ಈಕೆಯಿಂದ ಈತ ಹಾಡಿಸಿದ. ಈಕೆಯ ಧ್ವನಿಯೇನೂ ನಮ್ಮ ಬಾಲಿವುಡ್‌ ರಸಿಕರ ನಡುವೆ ಪಾಪ್ಯುಲರ್‌ ಆಗಲಿಲ್ಲ; ಬಹಳ ಬೇಡಿಕೆಯೇನೂ ಹುಟ್ಟಲಿಲ್ಲ.

 

ಸಲ್ಮಾನ್ ಖಾನ್ ಪ್ರೇಯಸಿಯಿಂದ ಪ್ರೇಮಿಗಳಿಗೆ ಪಾಠ...

 

ಹೀಗಾಗಿ ಲುಲಿಯಾ ಬೇರೆ ಕಡೆ ಅವಕಾಶಗಳಿಗಾಗಿ ಹೋಗುವುದು ಅನಿವಾರ್ಯವಾಯಿತು. ರೊಮೇನಿಯಾದ ಫಿಲಂಗಳು, ಸೀರಿಯಲ್‌ಗಳಲ್ಲಿ ಈಕೆ ನಟಿಸುತ್ತಾಳೆ. ಇದರ ನಡುವೆ ಸಲ್ಮಾನ್‌ ಜೊತೆಗಿನ ಫ್ಲರ್ಟಿಂಗ್‌ಗೆ ಏನೂ ತೊಂದರೆಯಾಗಲಿಲ್ಲ. ಆತನ ಜೊತೆಗೆ ಹಲವಾರು ಪಾರ್ಟಿಗಳಲ್ಲಿ ಕಳೆದ ವರ್ಷ ಜೊತೆಯಾಗಿ ಕಾಣಿಸಿಕೊಂಡಳು. ಜೊತೆಯಾಗಿ ಓಡಾಡಿ ಮೀಡಿಯಾಗಳ ಕಣ್ಣಿಗೆ ಬಿದ್ದರು. ಇನ್ನೇನು ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಲೆವೆಲ್ಲಿಗೆ ಸುದ್ದಿಗಳು ಬರತೊಡಗಿದವು. ಇದಾಗಿ ಇತ್ತೀಚೆಗೆ ತನ್ನ ಬರ್ತ್‌ಡೇಯನ್ನೂ ಆಚರಿಸಿಕೊಂಡಳು. ಆದರೆ ಆ ಬರ್ತ್‌ಡೇಗೆ ಸಲ್ಮಾನ್‌ ಹೋಗಲಿಲ್ಲ. ಹಾಗಿದ್ರೆ ಇಬ್ರಿಗೂ ಬ್ರೇಕಪ್‌ ಆಯ್ತಾ? ಹಾಗೂ ಆಗಲಿಲ್ಲ. ಆಕೆಗೊಂದು ಡೈಮಂಡ್‌ ರಿಂಗ್‌ ಕಳಿಸಿಕೊಟ್ಟ ಅನ್ನುವ ಸುದ್ದಿಗಳು ಬಂದವು. ಅದು ಸಲ್ಮಾನ್‌ನ ಅಮ್ಮನ ಮೂಲಕವೇ ಹೋಗಿದ್ದಂತೆ. ಈಕೆಯನ್ನಾದರೂ ಮದುವೆ ಮಾಡಿಕೋ ಮಹಾರಾಯ ಅಂತ ಅಮ್ಮ ಮಗನ ಬೆನ್ನು ಬಿದ್ದಿದ್ದಾಳೆ ಅಂತ ಸುದ್ದಿ. ನಮ್ಮ ಬ್ಯಾಡ್‌ ಬಾಯ್‌ಗೆ ಗರ್ಲ್‌ ಫ್ರೆಂಡ್‌ಗಳು ಬೇಕು, ಆದರೆ ಮದುವೆ ಅಂದರೆ ಏನೋ ಒಂತರಾ ಭಯ. ಬಹುಶಃ ಐಶ್ವರ್ಯ ರೈ ಕೊಟ್ಟ ಭೇದಿ ಮಾತ್ರ ಇನ್ನೂ ಪರಿಣಾಮ ಬೀರುತ್ತಿರುವಂತೆ ಕಾಣಿಸುತ್ತೆ.

 

ಸಲ್ಮಾನ್‌‌ಗೆ ಸಾಲ ಭೀತಿ: ಕಾಕಾ ಕೊಟ್ಟ ಸಾಲವಿನ್ನೂ ತೀರಿಸಿಲ್ಲ ಬ್ಯಾಡ್ ಬಾಯ್! 

 

ಅದಿರಲಿ, ಲುಲಿಯಾ ಈಗ ಸುತ್ತಾಟದಲ್ಲಿ ಬ್ಯುಸಿಯಂತೆ. ಈಕೆ ಪ್ರವಾಸವನ್ನು ತುಂಬಾ ಇಷ್ಟಪಡುವವಳು. ಅವಳು ಈ ವಾರ ರೊಮೇನಿಯಾದಲ್ಲಿದ್ದರೆ, ಮುಂದಿನ ವಾರ ಸೈಬೀರಿಯಾದಲ್ಲಿರುತ್ತಾಳೆ. ನಂತರದ ವಾರ ಸಹಾರಾ ಮರುಭೂಮಿಯಲ್ಲಿ ಸುತ್ತಾಡಿದರೆ, ಅದರ ಮರುದಿನವೇ ಬುರ್ಜ್‌ ಖಲೀಫಾದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತ ಇರುತ್ತಾಳೆ. ಗುಂಪಾಗಿ ಟ್ರಾವೆಲ್ ಮಾಡುವುದೂ ಇದೆ; ಅದಕ್ಕಿಂತ ಸೋಲೋ ಟ್ರಾವೆಲ್‌ ಅಂದರೆ ಈಕೆಗೆ ತುಂಬ ಇಷ್ಟ. ಈಕೆಯ ಇನ್‌ಸ್ಟಗ್ರಾಂ ಅಕೌಂಟ್‌ಗೆ ಭೇಟಿ ಕೊಟ್ಟರೆ ಅವಳ ಸುತ್ತಾಟದ ಫೋಟೊಗಳನ್ನು ನೀವು ನೋಡಬಹುದು.

ಇತ್ತೀಚೆಗೆ ಈಕೆ ಬಾಲಿವುಡ್‌ನ ಒಂದು ಸಿನಿಮಾದಲ್ಲಿ ನಟಿಸಲು ಕಾಲ್‌ಶೀಟ್‌ಗೆ ಸಹಿ ಹಾಕಿದ್ದಾಳೆ. "ರಾಧೆ ತು ಕ್ಯೋಂ ಗೋರಿ ಮೈ ಕ್ಯೂಂ ಕಾಲಾ'ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಇದನ್ನು ಪ್ರೇಮ್‌ ಸೋನಿ ನಿರ್ದೇಶಿಸುತ್ತಿದ್ದಾನೆ. ಇದರಲ್ಲಿ ಸಲ್ಮಾನ್‌ ಇಲ್ಲ. ಆದರೆ ಸಲ್ಮಾನ್‌ನ ಕೃಪೆ ಈಕೆಯ ಬಾಲಿವುಡ್‌ನ ಬೆಳವಣಿಗೆಯ ಮೇಲೆ ಇದ್ದೇ ಇದೆ. ಲುಲಿಯಾ, ಸಲ್ಮಾನ್‌ನನ್ನು ಮದುವೆಯಾಗುತ್ತಾಳಾ, ಅಥವಾ ಆತನ ನೂರೆಂಟು ಮಾಜಿ ಪ್ರೇಯಸಿಯಲ್ಲಿ ಈಕೆಯೂ ಒಬ್ಬಳಾಗಿ ಸೇರಿ ಹೋಗುತ್ತಾಳಾ, ಕಾಲವೇ ಹೇಳಬೇಕು.

ಫೆಬ್ರವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ