ರಾಣಿ ಮುಖರ್ಜಿ ಮಗಳು ಅದಿರಾಗೀಗ ನಾಲ್ಕು ವರ್ಷ. ಅಮ್ಮ ಶೂಟಿಂಗ್‌ಗೆ ಹೋದ ದಿನ ಮೇಲಿಂದ ಮೇಲೆ ಈ ಕೂಸುಮರಿಯ ಫೋನ್‌ ಕಾಲ್‌. ಆ ಕಡೆಯಿಂದ ರಾಣಿ ‘ಹೆಲೋ’ ಅಂದ್ರೆ ಸಾಕು, ‘ಅಮ್ಮಾ..ಯಾವಾಗ ಬರ್ತೀಯಾ?’ ಅಂತ ಒಂದೇ ರಾಗ. ‘ನೀನು ನಿದ್ದೆಹೋಗೋ ಮೊದಲೇ ಬಂದ್ಬಿಡ್ತೀನಿ ಪುಟ್ಟೂ..’ ಅಂತಾರೆ ರಾಣಿ. ‘ಅದಿರಾ ಹುಟ್ಟಿದಾಗಿನಿಂದ ಈವರೆಗೂ ನಾನು ಒಂದು ರಾತ್ರಿಯೂ ಅವಳನ್ನು ಬಿಟ್ಟಿಲ್ಲ..’ ಅನ್ನೋ ಒಂದು ಮಾತೇ ಸಾಕು, ಅವರ ತಾಯಿಪ್ರೀತಿ ಎಷ್ಟು ಸ್ಟ್ರಾಂಗ್‌ ಅಂತ ತೋರಿಸಲಿಕ್ಕೆ.  

‘ಅವಳು ಬೆಳಗ್ಗೆದ್ದು ಸ್ಕೂಲ್‌ಗೆ ಹೋಗ್ತಾಳೆ. ಮಧ್ಯಾಹ್ನ ಒಂದು ಗಂಟೆಗೆಲ್ಲ ಮನೆಗೆ ಬರ್ತಾಳೆ. ನಾನು ಶೂಟಿಂಗ್‌ಗೆ ಹೋದ ದಿನ ಸ್ಕೂಲ್‌ನಿಂದ ಬಂದು ಫ್ರೆಶ್‌ ಆಗಿ ಊಟ ಮಾಡಿ ಅವಳಪ್ಪನ ಆಫೀಸ್‌ಗೆ ಹೋಗ್ತಾಳೆ. ಅಲ್‌ ಹೋದ್ರೆ ಇವಳೇ ರಾಣಿ. ಇಡೀ ಆಫೀಸ್‌ ಇವಳ ಜೊತೆಗೆ ಆಟ ಆಡುತ್ತಿರುತ್ತೆ. ಸಂಜೆ ಮನೆಗೆ ಬಂದು ಪಾರ್ಕ್‌ನಲ್ಲಿ ಆಟ ಆಡ್ತಾಳೆ. ರಾತ್ರಿ ನಾನು ಬರುವವರೆಗೂ ಮಲಗೋದಿಲ್ಲ’ ಅಂತ ಮಗಳ ಬಗ್ಗೆ ಹೇಳ್ತಾರೆ ಈ ಮರ್ದಾನಿ 2 ನಟಿ.
‘ಮರ್ದಾನಿ 2’ ಸಿನಿಮಾದಲ್ಲಿ ರಾಣಿ ಮುಖರ್ಜಿ ಪೊಲೀಸ್‌ ಆಫೀಸರ್‌ ಶಿವಾನಿಯಾಗಿ ಮಿಂಚಿದ್ದಾರೆ. ರೇಪ್‌ ಆ್ಯಂಡ್‌ ಮರ್ಡರ್‌ ಅಪರಾಧಿಗಳನ್ನು ಬೆನ್ನಟ್ಟುವ ಆಫೀಸರ್‌ ಪಾತ್ರ. ಐದು ದಿನಗಳಲ್ಲೇ ಹತ್ತಿರತ್ತಿರ 22 ಕೋಟಿ ರು.ಗಳಷ್ಟು ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ ಮರ್ದಾನಿ. ಇಂಥಾ ರೊಚ್ಚಿನ ಪೊಲೀಸ್‌ ಪಾತ್ರವನ್ನೇನೋ ಮಾಡಬಹುದು, ಆದರೆ ರಿಯಲ್‌ ಲೈಫ್‌ನಲ್ಲಿ ನಮ್ಮ ಯೋಚನೆಗಳು ಇಷ್ಟು ಸ್ಟ್ರಾಂಗ್‌ ಇರಲೇಬೇಕಾಗಿಲ್ಲ. ಆದರೆ ರಾಣಿ ರಿಯಲ್‌ನಲ್ಲೂ ಸ್ಟ್ರಾಂಗ್‌ ವುಮನ್‌. ಮಾತ್ರವಲ್ಲ, ತನ್ನ ಮಗಳನ್ನೂ ಬಹಳ ಸ್ಟ್ರಾಂಗ್‌ ಆಗಿ ಬೆಳೆಸಬೇಕು ಅನ್ನೋದು ಇವರ ಗುರಿ.  ಅದನ್ನವರು ಪಬ್ಲಿಕ್‌ನಲ್ಲಿ ಹೇಳಿಯೂ ಇದ್ದಾರೆ.

ಅಮ್ಮನನ್ನು ಖುಷಿಯಾಗಿಡಲು ಇಲ್ಲಿವೆ ಟಿಪ್ಸ್

ನೇಹ ದುಪಿಯಾ ನಡೆಸಿಕೊಡೋ ರೇಡಿಯೋ ಪ್ರೋಗ್ರಾಂ ‘ನೋ ಫಿಲ್ಟರ್‌ ನೇಹಾ..’ ದಲ್ಲಿ ಇದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ‘ಇತ್ತೀಚೆಗೆ ಅತ್ಯಾಚಾರದಂಥ ಪ್ರಕರಣಗಳು ಹೆಚ್ಚೆಚ್ಚು ನಡೆಯುತ್ತಿವೆ. ಇದಕ್ಕೆ ದೊಡ್ಡ ಕಾರಣ ಹುಡುಗರನ್ನು ಬೆಳೆಸುವ ರೀತಿಯಲ್ಲಿದೆ. ಹುಡುಗಿಯರನ್ನು ಬಹಳ ಮುಚ್ಚಟೆಯಿಂದ ಬೆಳೆಸೋ ನಮ್ಮ ಜನ ಹುಡುಗರನ್ನು ಸ್ವೇಚ್ಛೆಯಾಗಿ ಬೆಳೆಯಲು ಬಿಟ್ಟಿದ್ದಾರೆ. ಇವೆರಡೂ ಬದಲಾಗಬೇಕು. ಹುಡುಗರನ್ನು ಸೆನ್ಸಿಬಲ್‌ ಆಗಿ ಬೆಳೆಸಬೇಕು. ನಮ್ಮ ಹೆಣ್ಣುಮಕ್ಕಳನ್ನು ಸ್ಟ್ರಾಂಗ್‌ ಆಗಿ ಬೆಳೆಸೋ ಹಾಗಾಗಬೇಕು. ನಾನಂತೂ ಮಗಳಿಗೆ ಹೇಳ್ತಾ ಇರ್ತೀನಿ.. ಅದಿರಾ, ನೀನು ಸ್ಟ್ರಾಂಗೆಸ್ಟ್‌, ನೀನು ಧೈರ್ಯವಂತೆ. ನಿನ್ನಪ್ಪಂಗಿಂತಲೂ ಸ್ಟ್ರಾಂಗ್‌ ಮಸಲ್‌ ನಿಂಗಿದೆ ನೋಡು..ಅಂತ ಈಗಿಂದಲೇ ಅವಳಿಗೆ ಬಾರಿ ಬಾರಿ ಹೇಳ್ತೇನೆ..’ ಅನ್ನೋ ರಾಣಿಗೆ, ಭವಿಷ್ಯದಲ್ಲಿ ಯಾರೂ ತನ್ನ ಮಗಳನ್ನು ನೀನು ಸ್ಟ್ರಾಂಗ್‌ ಅಲ್ಲ, ಪವರ್‌ಫುಲ್‌ ಅಲ್ಲ ಅಂತ ಹೇಳದೇ ಇರೋ ಥರ ಬೆಳೆಸುವ ಆಸೆ ಇದೆ.

ಬ್ಯಾಕ್‌ಲೆಸ್ ಫೋಟೋಗಳನ್ನು ಶೇರ್ ಮಾಡಿಕೊಂಡ ಆಮೀರ್ ಪುತ್ರಿ

ತನ್ನ ಮಗಳು ಎಲ್ಲ ಹೆಣ್ಣುಮಗಳಿಗೆ ಮಾದರಿಯಾಗಬೇಕು. ಎಂಥಾ ಕಠಿಣ ಪರಿಸ್ಥಿತಿಯಲ್ಲೂ ಅವಳು ಧೃತಿಗೆಡಬಾರದು ಅನ್ನೋದು ಅವರಾಸೆ. ಜೊತೆಗೆ ಪೇರೆಂಟಿಂಗ್‌ ಸಿಸ್ಟಮ್‌ ಹೇಗೆ ಬದಲಾಗಬೇಕು ಅನ್ನುವುದನ್ನು ರಾಣಿ ಹೇಳ್ತಾರೆ. ನಮ್ಮ ಹೆಣ್ಣುಮಕ್ಕಳಿಗೆ ಬಾಲ್ಯದಿಂದಲೇ ನೀನು ಸ್ಟ್ರಾಂಗ್‌, ಧೈರ್ಯವಂತೆ, ನಿನ್ನ ಎದುರು ನಿಲ್ಲೋ ಧೈರ್ಯ ಯಾರಿಗೂ ಇಲ್ಲ ಅನ್ನೋ ಹಾಗೆ ಬೆಳೆಸಿದರೆ ಅವರ ಮನಸ್ಸಲ್ಲೂ ಧೈರ್ಯ ತುಂಬಿಕೊಳ್ಳುತ್ತಾ ಹೋಗುತ್ತೆ. ಎಂಥಾ ಟೈಮ್‌ ಬಂದರೂ ಅವರದನ್ನು ಫೇಸ್‌ ಮಾಡ್ತಾರೆ. ದೈಹಿಕವಾಗಿ ಹುಡುಗರಿಗಿಂತ ತುಸು ಶಕ್ತಿ ಕಡಿಮೆ ಇರಬಹುದು, ಆದರೆ ನಾವು ಅವಳಲ್ಲಿ ಧೈರ್ಯ ತುಂಬಿದರೆ ಅವಳು ಅವಳು ಆ ಸಣ್ಣ ಲಿಮಿಟ್‌ಅನ್ನು ಗಣನೆಗೆ ತೆಗೆದುಕೊಳ್ಳದೇ ಧೈರ್ಯವಾಗಿ ಮುನ್ನುಗ್ಗುತ್ತಾಳೆ ಅನ್ನೋದು ಶಿವಾನಿ ಅರ್ಥಾತ್‌ ರಾಣಿ ಮುಖರ್ಜಿ ಮಾತು.