Asianet Suvarna News Asianet Suvarna News

ಚಿತ್ರ ನಟರು ಹುಲಿ ಉಗುರು ಯಾಕೆ ಧರಿಸ್ಬಾರ್ದು? ಇವ್ರು ಕೊಟ್ಟಿದ್ದಾರೆ ಕಾರಣ ನೋಡಿ...

ಹುಲಿ ಉಗುರಿನ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬೇರೆಯವರಿಂಗಲೂ ಹೆಚ್ಚಾಗಿ ಚಿತ್ರನಟರು ಈ ತಪ್ಪು ಮಾಡಿದರೆ ಏನಾಗುತ್ತದೆ ಎಂಬ ಬಗ್ಗೆ ಜಾಲತಾಣ ಬಳಕೆದಾರ ಸಂತೋಷ್​ ಕುಮಾರ್​ ಏನು ಬರೆದಿದ್ದಾರೆ ನೋಡಿ: 
 

What happens if  actors wore tiger claws other than any one else suc
Author
First Published Oct 26, 2023, 5:48 PM IST

ಈಗ ಎಲ್ಲೆಲ್ಲೂ ಹುಲಿ ಉಗುರಿನದ್ದೇ ಮಾತು. ಬಿಗ್​ಬಾಸ್​ ಮನೆಯಿಂದ ವರ್ತೂರ್​ ಸಂತೋಷ್​ ಅವರನ್ನು ನೇರವಾಗಿ ಅರೆಸ್ಟ್​ ಮಾಡಿಹೋದ ಬಳಿಕ ಇದೀಗ ಹುಲಿ ಉಗುರು ಧರಿಸಿರುವ  ನಟರು ಸೇರಿದಂತೆ ಕೆಲವರಿಗೆ ಭೀತಿ ಉಂಟಾಗಿದೆ. ಇದಾಗಲೇ ಕೆಲ ನಟರ ವಿರುದ್ಧ ದೂರು ಕೂಡ ದಾಖಲಾಗಿದೆ. ಹೀಗೆ ಅರಣ್ಯ ಇಲಾಖೆ ಅಧಿಕಾರಿಗಳು ಅರೆಸ್ಟ್​ ಮಾಡುತ್ತಿರುವುದಕ್ಕೆ ಇಲ್ಲವೇ ಮನೆಗೆ ಬಂದು ಪರಿಶೋಧನೆ ನಡೆಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೋಷಿಯಲ್​ ಮೀಡಿಯಾದಲ್ಲಿ ಬಹು ದೊಡ್ಡ ಮಟ್ಟಿನ ಚರ್ಚೆ ನಡೆಯುತ್ತಿದೆ. ಕೆಲವರು ಇದರ ಪರವಾಗಿದ್ದರೆ, ಇನ್ನು ಕೆಲವರು ಇದನ್ನು ಧರಿಸಿದರೆ ಅಂಥ ತಪ್ಪೇನಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ನೆಚ್ಚಿನ ನಾಯಕರ ಮೇಲೆ ಅರಣ್ಯ ಇಲಾಖೆ ಕಣ್ಣು ನೆಟ್ಟಿರುವುದರಿಂದ ಗರಂ ಆಗಿದ್ದು, ಚಿತ್ರ ನಟರ ಮೇಲೆ ಏಕೆ ಕಣ್ಣು, ಇದನ್ನು ತುಂಬಾ ಜನ ಧರಿಸುತ್ತಿದ್ದಾರೆ, ಅವರನ್ನೂ ಹಿಡಿಯಲಿ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಇದಕ್ಕೆ ರಾಜಕೀಯದ ರಂಗು ಸೇರಿಸುತ್ತಿದ್ದಾರೆ.

ಅದೇನೇ ಇದ್ದರೂ, ಹುಲಿ ಉಗುರನ್ನು ಧರಿಸುವುದು ಕಾನೂನಿನ ರೀತ್ಯಾ ಅಪರಾಧವೇ. ಆದರೆ ಅದನ್ನು ಸೆಲೆಬ್ರಿಟಿಗಳು ಅದರಲ್ಲಿಯೂ ಹೆಚ್ಚಾಗಿ ಚಿತ್ರತಾರೆಯರು ಹುಲಿಯುಗುರು ಏಕೆ ಧರಿಸಬಾರದು? ಉಳಿದವರು ತಪ್ಪು ಮಾಡುವುದಕ್ಕೂ, ಚಿತ್ರ ನಟರು ತಪ್ಪು ಮಾಡುವುದಕ್ಕೂ ಏನು ವ್ಯತ್ಯಾಸವಿದೆ? ಚಿತ್ರ ನಟರು ತಪ್ಪು ಮಾಡಿದರೆ ಸಮಾಜದ ಮೇಲೆ ಆಗುವ ಪರಿಣಾಮವೇನು ಎಂಬ ಬಗ್ಗೆ ಸಂತೋಷ್​ಕುಮಾರ್​ ಎಲ್​.ಎಂ ಎನ್ನುವ ಸೋಷಿಯಲ್​ ಮೀಡಿಯಾ ಬಳಕೆದಾರರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದಿದ್ದು, ಅದೀಗ ವೈರಲ್​ ಆಗುತ್ತಿದೆ.

ಸಂತೋಷ್​ ಕುಮಾರ್​ ಅವರು ಹೇಳುವಂತೆ:  
'ತುಂಬಾ ಸರಳ ವಿಷಯ. ಹುಲಿಯುಗುರಿನ ಪೆಂಡೆಂಟ್ ಅನ್ನು ಕುತ್ತಿಗೆಗೆ ಧರಿಸಿ ಗತ್ತು ಅನ್ನುವಂತೆ ನಡೆದರೆ ಅದು ಇತರೆ ಜನರ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲೂ ಸೆಲೆಬ್ರಿಟಿಗಳು, ಸಾಮಾಜಿಕ ಜೀವನದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವವರು ಅವನ್ನು ಧರಿಸಿದರೆ ಅದರ ಪರಿಣಾಮ ಇನ್ನೂ ಹೆಚ್ಚು. ಒಬ್ಬ ಸೆಲೆಬ್ರಿಟಿ ಸುಟ್ಟಾ ಸೇದುತ್ತಾ ಪೋಸು ಕೊಟ್ಟರೆ ಮುಗೀತು, "ನಮ್ಮ ಆರೋಗ್ಯದ ಮೇಲೆ ಅದರ ಕೆಟ್ಟ ಪರಿಣಾಮ ಏನು?" ಅನ್ನುವುದನ್ನೇ ಮರೆತು ಅವನ ಅಭಿಮಾನಿಗಳು ಅದನ್ನೇ ಅನುಕರಿಸುವುದರಲ್ಲಿ ತೊಡಗುತ್ತಾರೆ. ಅಂಥಾದ್ರಲ್ಲಿ ಅದರಿಂದ ತಮಗೇನೂ ಆಗದ ಇಂಥ ವಿಷಯಗಳಿಂದ ಪ್ರಭಾವಿತರಾದರೆ ಅದರಿಂದಾಗುವ ಪರಿಣಾಮ ಇನ್ನೂ ಕೆಟ್ಟದ್ದು. 

3 ವರ್ಷಗಳ ಹಿಂದೆ ಹುಲಿ ಉಗುರು ಖರೀದಿಸಿದ ಬಗ್ಗೆ ಬಿಗ್‌ಬಾಸ್‌ ವರ್ತೂರ್‌ ಸಂತೋಷ್‌ ತಪ್ಪೊಪ್ಪಿಗೆ

ಹುಲಿಯುಗುರಿನ ಪೆಂಡೆಂಟ್‌ನಿಂದ ಪ್ರಭಾವಿತರಾಗಿ ಜನರು ಅದನ್ನು ಹೇಗಾದರೂ ಮಾಡಿ ಕೊಳ್ಳಲು ಮುಗಿಬಿದ್ದರೆ ಮೊದಲಿಗೆ ನಕಲಿಗಳ ದಂಧೆ ಶುರುವಾಗಿ ಅಲ್ಲೂ ಮೋಸವಾಗುತ್ತದೆ. ಅದಿರಲಿ. ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಈ ಉಗುರು, ಚರ್ಮಕ್ಕಾಗಿ ಮತ್ತು ಅವುಗಳಿಂದ ಬರುವ ಹೇರಳ ಹಣಕ್ಕಾಗಿ ಅರಣ್ಯಗಳಲ್ಲಿ ಈಗ ಉಳಿದಿರುವ ಬೆರಳೆಣಿಕೆಯ ಹುಲಿಗಳ ಎದೆಗೆ ಗುಂಡಿಕ್ಕುವ ಕಾರ್ಯ ಶುರುವಾಗುತ್ತದೆ. ಮುಂದೆ ಹುಲಿಗಳನ್ನು ಕೇವಲ ದೇವರ ಫೋಟೋಗಳಲ್ಲಿ ನೋಡಬೇಕಾದೀತು. ಇದಕ್ಕೆ ಅವರು ಇವರಂತ ಇಲ್ಲ. ಅರಣ್ಯವಾಸಿಗಳಾದರೂ ಆಗಬಹುದು, ಅರಣ್ಯ ಇಲಾಖೆಯ ಸಿಬ್ಬಂದಿಯೇ ಆಗಬಹುದು. ಅವರೇ ಈ ಕೃತ್ಯಕ್ಕೆ ಇಳಿದರೂ ಅಚ್ಚರಿಯಿಲ್ಲ. ಹಾಗಾಗಿ ಏನಾದರೂ ಮಾಡಿ ಇದಕ್ಕೆ ಕಡಿವಾಣ ಹಾಕಲೇಬೇಕು.
ಇಲ್ಲಿ ಇನ್ನೂ ಒಂದು ಸೂಕ್ಷ್ಮವಿದೆ. ಒಂದು ದೃಶ್ಯದಲ್ಲಿ ಆ ಸಿನಿಮಾ ನಟ ವ್ಹಿಸ್ಕಿ ಗ್ಲಾಸಿನಲ್ಲಿ ಅದೇ ಬಣ್ಣದ ನೀರು ಕುಡಿಯುತ್ತಾನೆ ಅಂದಿಟ್ಟುಕೊಳ್ಳಿ. ಆದರೆ ಸಿನಿಮಾ ತಂಡದವರು "ಅದರಲ್ಲಿದ್ದದ್ದು ನೀರು ಸರ್" ಅಂತ ಉಡಾಫೆ ಮಾಡಲಾಗದು. ಮದ್ಯಪಾನದ ಬಗೆಗಿನ ಎಚ್ಚರಿಕೆಯನ್ನು ಅವರು ಹಾಕಲೇಬೇಕು! ನೋಡುವ ಪ್ರೇಕ್ಷಕನಿಗೆ ಅದು ಮದ್ಯವೇ. ಹಾಗಾಗಿ ಅದರಿಂದ ಆತ ಪ್ರಭಾವಿತನಾಗಬಾರದು ಅನ್ನುವುದು ಅದರ ಉದ್ದೇಶ. ಈ ನಿಟ್ಟಿನಲ್ಲಿ ಆಲೋಚಿಸಿದಾಗ ನನಗೆ ಬಂದ ಆಲೋಚನೆಯೆಂದರೆ ಅದು ಅಸಲಿಯಿರಲಿ, ನಕಲಿಯಿರಲಿ. ಹುಲಿಯುಗುರನ್ನೇ ಹೋಲುವ ಪೆಂಡೆಂಟ್ ಅನ್ನೇ ಸೆಲೆಬ್ರಿಟಿಗಳು ಸೇರಿದಂತೆ ಯಾರೂ ಧರಿಸಬಾರದು ಅನ್ನುವ ನಿಯಮಾವಳಿಯನ್ನು ತರಬೇಕು. ಆಗಲಾದರೂ ಅದು ಇತರರನ್ನು ಪ್ರಭಾವಿಸುವುದನ್ನು ತಡೆಗಟ್ಟಬಹುದು. ಚಿನ್ನ-ಬೆಳ್ಳಿ ಅಂಗಡಿಯವರಿಂದ ಹಿಡಿದು ಎಲ್ಲರಿಗೂ ಈ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. 

ಕೆಲ ವರ್ಷಗಳ ಹಿಂದೆ ಶಬರಿಮಲೆಗೆ ಹೋಗಿದ್ದಾಗ ಎರುಮೇಲಿಯ ದೇವಸ್ಥಾನದ ಮುಂದೆ ಒಬ್ಬಾತ  ಅದ್ಯಾವೋ ಪ್ರಾಣಿಗಳ ಉಗುರುಗಳನ್ನು ತಟ್ಟೆಯಲ್ಲಿಟ್ಟುಕೊಂಡು ಹುಲಿಯುಗುರು ಅಂತ ಮಾರುತ್ತಿದ್ದ. ಇಂಥವುಗಳನ್ನು ಎಲ್ಲ ಕಡೆ ತಡೆಯಬೇಕು.  ಸದ್ಯಕ್ಕೆ ಈಗ ಆಗುತ್ತಿರುವ ಘಟನೆಗಳು ಒಳ್ಳೆಯದೇ. ಜನರಿಗೆ ಈ ದಾರಿಯಲ್ಲಾದರೂ ಅಳಿವಿನಂಚಿನಲ್ಲಿರುವ  ವನ್ಯಜೀವಿಗಳ ಬಗೆಗೆ ಅರಿವು ಮೂಡಲಿ. ಯಾವುದು ಸರಿಯಿಲ್ಲ ಅನ್ನುವ ಕಾನೂನು-ನಿಯಮಗಳ ಬಗ್ಗೆ ಈ ಥರದಲ್ಲಾದರೂ ಅರಿವು ಮೂಡಲಿ. ಯಾರ ಪರವಾಗಿಯೂ ನಾವು ನಿಲ್ಲುವುದು ಬೇಡ. ಕಾನೂನು ಎಲ್ಲರಿಗೂ ಒಂದೇ. ಆದರೆ ಸೆಲೆಬ್ರಿಟಿಗಳು ಅಂತ ಬಂದಾಗ ಅವರಿಗಿರಬೇಕಾದ ಸಾಮಾಜಿಕ ಜವಾಬ್ದಾರಿ ಇತರರಿಗಿಂತ ಹೆಚ್ಚೇ ಅನ್ನುವುದನ್ನು ಮರೆಯದಿರೋಣ' ಎಂದಿದ್ದಾರೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ತಮ್ಮ ಅಭಿಪ್ರಾಯ ಬರೆಯುತ್ತಿದ್ದಾರೆ.

ತಲೆ ತಗ್ಗಿಸುವ ಯಾವ ಕೆಲಸ ಮಾಡಿಲ್ಲಾ, ಅಮ್ಮ ನೀಡಿದ ಹಳೆಯ ಲಾಕೆಟ್‌ ಎಂದಿದ್ದೇನೆ: ಪಾಚ್ಕೊಳಿ ಎಂದ ನಟ ಜಗ್ಗೇಶ್‌!

Follow Us:
Download App:
  • android
  • ios