ಬಹುಭಾಷಾ ತಾರೆ ವಿದ್ಯಾ ಬಾಲನ್‌ ಅವರನ್ನು ಏಕಾಏಕಿ 9 ಸಿನಿಮಾಗಳಿಂದ ತೆಗೆದುಹಾಕಲಾಗಿತ್ತು. ಇದರ ಕುರಿತು ನಟಿ ಮಾತನಾಡಿದ್ದಾರೆ. ಸಿನಿ ಇಂಡಸ್ಟ್ರಿಯ ಇನ್ನೊಂದು ಮುಖವನ್ನೂ ಅವರು ಹೇಳಿದ್ದಾರೆ. 

ಬಹುಭಾಷಾ ತಾರೆ ವಿದ್ಯಾ ಬಾಲನ್‌ (Vidya Balan) ತಮ್ಮ ಸಿನಿ ಜರ್ನಿಯ ಕುರಿತು ಆಗಾಗ ಹಂಚಿಕೊಳ್ಳುತ್ತಾರೆ. ಇದೀಗ ಅವರು ಬಾಲಿವುಡ್‌ನಲ್ಲಿ ತಮ್ಮ ಆರಂಭಿಕ ದಿನಗಳಲ್ಲಿ ಎದುರಿಸಿದ ಸವಾಲುಗಳ ಕುರಿತು ಮಾತನಾಡಿದ್ದಾರೆ. ರಾತ್ರೋರಾತ್ರಿ ತಮ್ಮನ್ನು 9 ಸಿನಿಮಾಗಳಿಂದ ತೆಗೆದುಹಾಕಿದ್ದ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ, ಶಕುನ, ಅಪಶಕುನ ಎನ್ನುವುದು ಚಿತ್ರರಂಗವನ್ನೂ ಬಿಟ್ಟಿಲ್ಲ. ಇಂದು ದೊಡ್ಡ ಮಟ್ಟದ ಸ್ಟಾರ್​ ನಟಿಯಾಗಿ ಗುರುತಿಸಿಕೊಂಡಿರೋ ಬಹುಭಾಷಾ ತಾರೆ ವಿದ್ಯಾ ಬಾಲನ್​ ಕೂಡ ಹಿಂದೊಮ್ಮೆ ಪನೌತಿ ಅಂದರೆ ಅಪಶಕುನ ನಟಿ ಎಂದು ಎನ್ನಿಸಿಕೊಂಡವರು. ಇದೇ ಕಾರಣಕ್ಕೆ ಅವರಿಗೆ ಚಿತ್ರಗಳಲ್ಲಿ ಅವಕಾಶವೂ ಸಿಕ್ಕಿರಲಿಲ್ಲ. ಈ ಬಗ್ಗೆ ಇದೀಗ ಖುದ್ದು ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅದರ ವಿಡಿಯೋ ವೈರಲ್​ ಆಗಿದೆ. ಅಂದಹಾಗೆ ಅದು ಮಲಯಾಳಿ ಚಿತ್ರರಂಗದಲ್ಲಿ ಹುಟ್ಟಿಕೊಂಡಿರೋ ಕಳಂಕ. ಮೋಹನ್‌ಲಾಲ್‌ ಜೊತೆ ಮಲಯಾಳ ಚಿತ್ರದಲ್ಲಿ ವಿದ್ಯಾ ಬಾಲನ್​ ಆಯ್ಕೆಯಾಗಿದ್ದರು. ನಟ-ನಟಿಯೇನೋ ಆಯ್ಕೆಯಾದರು. ಆದರೆ ಈ ಚಿತ್ರ ಶೆಡ್ಯೂಲ್​ ಆಗಿದ್ದರೂ ಶೂಟಿಂಗ್​ ನಡೆಯಲೇ ಇಲ್ಲ. ಅದೂ ಮೋಹನ್​ಲಾಲ್​ ಚಿತ್ರ ಬೇರೆ. ಈಗ ಎಲ್ಲರ ಬೊಟ್ಟು ಹೋಗಿದ್ದು ವಿದ್ಯಾ ಬಾಲನ್​ ಕಡೆಗೆ. ಈ ಚಿತ್ರ ಬಿಡುಗಡೆಯಾಗದೇ ಇರುವುದಕ್ಕೆ ಕಾರಣ ವಿದ್ಯಾ ಬಾಲನ್​, ಈಕೆಯೊಬ್ಬ ಪನೌತಿ (ಅಪಶಕುನ) ಎಂದು ನುಡಿದ ಮಲಯಾಳಂ ಚಿತ್ರರಂಗ ವಿದ್ಯಾ ಅವರನ್ನು ಪ್ರಾಜೆಕ್ಟ್‌ಗಳಿಂದ ಹೊರಕ್ಕೆ ಹಾಕಿದ್ದರಂತೆ!

ಈ ಕುರಿತು ನಟಿ ಖುದ್ದು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಆಯ್ಕೆಯಾದ ಮೇಲೆ ಏಳೆಂಟು ಚಿತ್ರಗಳಲ್ಲಿ ಆಫರ್​ ಸಿಕ್ಕಿದ್ದವು. ಆದರೆ ನನಗೆ ಎಲ್ಲಾ ಪ್ರಾಜೆಕ್ಟ್​ಳಿಂದ ಹೊರಕ್ಕೆ ಹಾಕಲಾಯಿತು. ನನ್ನದು ಐರನ್ ಲೆಗ್‌, ನಾನು ಕಾಲಿಟ್ಟರೆ ಚಿತ್ರ ಬಿಡುಗಡೆಯಾಗುವುದಿಲ್ಲ, ಈಕೆ ಅಪಶಕುನ ಎಂದೆಲ್ಲ ಸುದ್ದಿ ಹಬ್ಬಿತು. ಇದೇ ಕಾರಣಕ್ಕೆ ನನಗೆ ಯಾವ ಚಿತ್ರಗಳೂ ಸಿಗಲೇ ಇಲ್ಲ. ಇದರಿಂದ ನಾನು ಮೂರು ವರ್ಷ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಏಕೆಂದರೆ, ನನ್ನನ್ನು ಹಾಕಿಕೊಂಡು ಚಿತ್ರ ಮಾಡುವ ಧೈರ್ಯ ಯಾರೂ ಮಾಡಲೇ ಇಲ್ಲ. ಇದರಿಂದ ಧೃತಿಗೆಟ್ಟ ನಾನು ಸದಾ ಅಳುತ್ತಾ ಕುಳಿತುಕೊಳ್ಳುವಂತಾಯ್ತು ಎಂದು ವಿದ್ಯಾ ಈ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರತಿದಿನವೂ ಅಳುವುದೇ ವಿದ್ಯಾ ಅವರಿಗೆ ಕೆಲಸವಾಯಿತಂತೆ. ಆದರೆ ಅವರ ಬದುಕಿನ ದಿಕ್ಕು ಬದಲಾದದ್ದು, ಪ್ರದೀಪ್‌ ಸರ್ಕಾರ್‌ ಅವರು ತಮ್ಮ ಕಭಿ ಆನಾ ತು ಮೇರಿ ಗಲಿ ವಿಡಿಯೋ ಆಲ್ಬಂನಲ್ಲಿ ವಿದ್ಯಾ ಬಾಲನ್​ ಅವರಿಗೆ ಅವಕಾಶ ನೀಡಿದಾಗ. ಅಲ್ಲಿಂದ ಮಿಂಚಿದ ವಿದ್ಯಾ ಅವರಿಗೆ ಪರಿಣೀತಾ ಚಿತ್ರದಿಂದ ಆಫರ್​ ಬಂತು. ಇದು ಕೂಡ ಹಿಟ್​ ಆಯಿತು. ಅದಾದ ಬಳಿಕ ವಿದ್ಯಾ ಬಾಲನ್​ ಅವರಿಗೆ ಒಂದರ ಮೇಲೊಂದಂತೆ ಸಿನಿಮಾ ಹುಡುಕಿ ಬಂದವು. ಹಲವಾರು ಬ್ಲಾಕ್​ಬಸ್ಟರ್​ ಚಿತ್ರಗಳನ್ನು ಕೊಟ್ಟರು. ಕೊನೆಗೆ ಗೌರಮ್ಮ ಎಂದು ಎನಿಸಿಕೊಂಡಿದ್ದ ವಿದ್ಯಾ ಬಾಲನ್​ ಹಾಟೆಸ್ಟ್​ ಆಗಿ ಕಾಣಿಸಿಕೊಂಡಿದ್ದು ಡರ್ಟಿ ಫಿಕ್ಚರ್ ಮೂಲಕ. ಇಲ್ಲಿ ಇವರ ಹಾಟೆಸ್ಟ್​ ಅವತಾರಕ್ಕೆ ಬಾಲಿವುಡ್​ ಬೆಚ್ಚಿ ಬಿತ್ತು. ಜೊತೆಗೆ ರಾತ್ರೋರಾತ್ರಿ ವಿದ್ಯಾ ಸ್ಟಾರ್​ ಪಟ್ಟವನ್ನೂ ಗಿಟ್ಟಿಸಿಕೊಮಡರು. ಬಳಿಕ ಮಿಷನ್‌ ಮಂಗಲ್‌ ಕೂಡ ಸಕ್ಸಸ್ ತಂದಿತು.

ವಿದ್ಯಾ ಬಾಲನ್​ ಅವರು ಬ್ಯಾಕ್​ ಟು ಬ್ಯಾಕ್​ ಐದು ಸತತ ವಾಣಿಜ್ಯ ಯಶಸ್ಸಿನಲ್ಲಿ ಹೆಡ್ ಸ್ಟ್ರಾಂಗ್ ಮಹಿಳೆಯಾಗಿ ನಟಿಸಿದರು. ಪಾ (2009), ಇಷ್ಕಿಯಾ (2010), ಥ್ರಿಲ್ಲರ್‌ಗಳಾದ ನೋ ಒನ್ ಕಿಲ್ಡ್ ಜೆಸ್ಸಿಕಾ (2011) ಮತ್ತು ಕಹಾನಿ (2012), ಮತ್ತು ಬಯೋಪಿಕ್​ ದಿ ಡರ್ಟಿ ಪಿಕ್ಚರ್ (2011) ಸಾಕಷ್ಟು ಹೆಸರು ತಂದುಕೊಟ್ಟವು. ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಲಭಿಸಿತು. ತುಮ್ಹಾರಿ ಸುಲು (2017) ಮತ್ತು ಮಿಷನ್ ಮಂಗಲ್ (2019) ನಲ್ಲಿ ಕೆಲಸ ಮಾಡುತ್ತಲೇ ಕುಟುಂಬ ಜೀವನವನ್ನೂ ನಡೆಸಿದರು. ಮಂಗಲ್​ ಮಿಷನ್​ ವಿದ್ಯಾ ಅವರ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ಬಳಿಕ ಅಮೆಜಾನ್ ಪ್ರೈಮ್ ವಿಡಿಯೋ ಚಿತ್ರಗಳಾದ ಶಕುಂತಲಾ ದೇವಿ (2020), ಶೆರ್ನಿ (2021), ಮತ್ತು ಜಲ್ಸಾ (2022) ನಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ .