ಆಡಿಷನ್‌ಗೆ ಕರ್ದು ತಬ್ಬಿಕೋ ಅಂದ್ರು, ಕ್ಯಾಮೆರಾನೇ ಇರ್ಲಿಲ್ಲ, ಆದ್ರೂ ನಾನು.. ಉರ್ಫಿ ಹೇಳಿದ್ದೇನು?
ನಟಿ ಉರ್ಫಿ ಜಾವೇದ್ ನಿರ್ದೇಶಕರೊಬ್ಬರಿಂದ ತಮಗಾಗಿರುವ ಕಾಸ್ಟ್ ಕೌಚಿಂಗ್ ಅನುಭವ ಬಿಚ್ಚಿಟ್ಟಿದ್ದಾರೆ. ಆ ನಿರ್ದೇಶಕ ನಟಿಗೆ ಮಾಡಿದ್ದೇನು?
ಉರ್ಫಿ ಜಾವೇದ್ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಬಿಕಿನಿ, ಬಟ್ಟೆ ಕ್ಲಿಪ್, ಚ್ಯುಯಿಂಗ್ ಗಮ್, ಮಕ್ಕಳಾಟಿಕೆ, ನ್ಯೂಸ್ ಪೇಪರ್, ಚಿಪ್ಸ ಪ್ಯಾಕೇಟ್, ಮಲ್ಲಿಗೆ ಹೂವು, ಪರದೆ ರೀತಿಯ ದಿರಿಸು, ಕಿವಿ ಹಣ್ಣಿನ ರೀತಿ, ಪ್ಲ್ಯಾಸ್ಟರ್ ಹೀಗೆ ವಿಭಿನ್ನ ವಿಶೇಷ ರೀತಿಯ ಬಟ್ಟೆಗಳನ್ನು ತೊಟ್ಟು ಟ್ರೋಲ್‌ಗೆ ಒಳಗಾಗುತ್ತಿದ್ದರೂ ಅದಕ್ಕೆ ಅವರು ತಲೆನೇ ಕೆಡಿಸಿಕೊಳ್ಳುವುದಿಲ್ಲ. ಬಟ್ಟೆ ಧರಿಸಿದರೆ ತಮಗೆ ಚರ್ಮಕ್ಕೆ ಅಲರ್ಜಿ ಆಗುತ್ತದೆ ಎಂದು ಕಾರಣವನ್ನೂ ಈ ಹಿಂದೆ ನೀಡಿದ್ದರು. ಅವರ ಬಟ್ಟೆ ಎಷ್ಟು ಫೇಮಸ್ ಎಂದರೆ, ಒಂದು ವೇಳೆ ಫುಲ್ ಡ್ರೆಸ್ ಧರಿಸಿದರೂ ಉರ್ಫಿ ಟ್ರೋಲ್ ಆಗುವುದುಂಟು.
ಆದರೆ ಇದೀಗ ಉರ್ಫಿ ಬಟ್ಟೆಯಿಂದ ಅಲ್ಲ, ಬದಲಿಗೆ ತಮಗಾಗಿರುವ ಕಾಸ್ಟಿಂಗ್ ಕೌಚ್ ಕರಾಳ ಅನುಭವವನ್ನು ಹೇಳಿಕೊಂಡಿದ್ದಾರೆ. ಈ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. ಕಾಸ್ಟಿಂಗ್ ಕೌಚ್ (cast couching) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್ ಕೌಚ್ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಪುರುಷರ ಮೇಲೂ ಇಂಥ ಘಟನೆಗಳು ನಡೆದಿದ್ದು, ಕೆಲವು ನಟರೂ ತಮಗಾಗಿರುವ ಅನುಭವ ಶೇರ್ ಮಾಡಿಕೊಂಡಿರುವುದು ಇದೆ. ಇದೀಗ ಉರ್ಫಿ ಸರದಿ.
ಅಬ್ಬಾ! ಉರ್ಫಿ ಜಾವೇದ್ ನಿಜಕ್ಕೂ ಹೀಗಿದ್ರಾ? ಮೊದಲ ಆಡಿಷನ್ ವಿಡಿಯೋ ವೈರಲ್!
ತಾವು ಮುಂಬೈಗೆ ಬಂದ ಪ್ರಾರಂಭದ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಎದುರಿಸಿದ ಬಗ್ಗೆ ಒಟಿಟಿ ಫ್ಲಾಟ್ ಫಾರ್ಮ್‌ನ ಬಿಗ್ ಬಾಸ್‌ನಲ್ಲಿ ಉರ್ಫಿ ಹೇಳಿಕೊಂಡಿದ್ದಾರೆ. ಒಬ್ಬ ನಿರ್ದೇಶಕ ಹೇಗೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದಿದ್ದರು ಎನ್ನುವುದನ್ನು ನಟಿ ಹೇಳಿದ್ದಾರೆ. ಉರ್ಫಿ ಅವರ ಮಾತಿನಲ್ಲಿಯೇ ಹೇಳುವುದಾದರೆ: ನಾವು ಇರುವ ಉದ್ಯಮದಲ್ಲಿ ಸಾಕಷ್ಟು ಪರಭಕ್ಷಕರಿದ್ದಾರೆ. ಈ ಧೋರಣೆ ನಮಗಿರಬೇಕು. ಇಲ್ಲವಾದಲ್ಲಿ ಜನ ಸಂಪೂರ್ಣ ಲಾಭ ಪಡೆದುಕೊಳ್ಳುತ್ತಾರೆ. ನನ್ನ ಬಳಿ ಕೆಲವರು ಹಾಗೆ ನಡೆದುಕೊಂಡಿದ್ದಾರೆ ಎಂದಿದ್ದಾರೆ. ಅವರು ಹೇಳಿದ್ದಕ್ಕೆ ಇಲ್ಲ ಎನ್ನುವ ಅನೇಕ ಸಂದರ್ಭಗಳನ್ನು ನಾನೂ ಎದುರಿಸಿದ್ದೇನೆ ಎಂದಿರುವ ನಟಿ, ಆಗ ತಾನೇ ಮುಂಬೈಗೆ ಬಂದ ದಿನಗಳಲ್ಲಿ ಎದುರಿಸಿರುವ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.
ನಿರ್ದೇಶಕರ ಹೆಸರ ಹೇಳದ ಉರ್ಫಿ, ಒಮ್ಮೆ ನಿರ್ದೇಶಕರೊಬ್ಬರು ಆಡಿಷನ್ (Audition) ಹೆಸರಿನಲ್ಲಿ ತಮ್ಮ ಮನೆಗೆ ಬರಲು ಹೇಳಿದ್ದರು. ನಾನು ಹೋಗಿದ್ದಾಗ ಅವರ ಪ್ರಿಯತಮೆ ರೀತಿಯಲ್ಲಿ ನಟನೆ ಮಾಡಿ ನನ್ನ ಹತ್ತಿರ ಬಂದು ತಬ್ಬಿಕೊಳ್ಳಬೇಕು ಎಂದು ಹೇಳಿದರು. ಅತ್ತ ಇತ್ತ ನೋಡಿದೆ. ಅಲ್ಲಿ ಯಾವುದೇ ಕ್ಯಾಮೆರಾ ಇರಲಿಲ್ಲ ಎನ್ನುವುದನ್ನು ಗಮನಿಸಿದೆ. ಇದು ಎಂತಹ ಆಡಿಷನ್? ಕ್ಯಾಮೆರಾ ಎಲ್ಲಿದೆ ಎಂದು ಪ್ರಶ್ನಿಸಿದೆ. ಆದರೆ ಆಗ ಆಗುವುದಿಲ್ಲ ಎಂದು ಹೇಳಲು ಆಗಲಿಲ್ಲ. ಹಿಂಜರಿಕೆಯಿಂದಲೇ ತಬ್ಬಿಕೊಂಡು, ಸರ್ ನಾನು ಹೊರಡುತ್ತಿದ್ದೇನೆ ಎಂದು ಹೇಳಿದೆ. ನಿರ್ದೇಶಕರ ಬಳಿ ಕ್ಯಾಮೆರಾ ಎಲ್ಲಿ ಕೇಳಿದ್ದಕ್ಕೆ ಅವರು ಅವರ ತಲೆ ತೋರಿಸಿ ಇದು ನನ್ನ ಕ್ಯಾಮೆರಾ ಎಂದು ಹೇಳಿದರು. ಅಂತಹ ಅಹಿತಕರ ಘಟನೆಗಳು ನನಗೆ ಜೀವನದಲ್ಲಿ ಉತ್ತಮ ಪಾಠಗಳನ್ನು ಕಲಿಸಿವೆ ಎಂದು ಅವರು ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ವಿವರಿಸಿದರು.
ಉರ್ಫಿ ಬೆಂಬಲಿಸೋ ಭರದಲ್ಲಿ ನಮ್ದು ಕಾಮಸೂತ್ರದ ಭೂಮಿ ಎನ್ನೋದಾ ನಟಿ ಶೆರ್ಲಿನ್ ಚೋಪ್ರಾ?