ಕೊರೋನಾ ಕಾಟ ವಿದೇಶಗಳಲ್ಲಿ ತನ್ನ ಬಾಲ ಬಿಚ್ಚುವ ಸಂದರ್ಭದಲ್ಲಿಯೇ ತೆಲುಗು ಪ್ರಖ್ಯಾತ ನಟ ಪ್ರಭಾಸ್ ಮಾಸ್ಕ್ ಧರಿಸಿಯೇ ಜಾರ್ಜಿಯಾಕ್ಕೆ ಶೂಟಿಂಗ್‌ಗೆ ಹೋಗಿದ್ದರು. ಮರಳಿದ್ದಾರೆ. ದೇಶದ ಪ್ರಜ್ಞಾವಂತ ನಾಗರಿಕನಾಗಿ ಇದೀಗ 14 ದಿನಗಳ ಕಾಲ ಸ್ವಯಂ ಗೃಹ ಬಂಧನದಲ್ಲಿದ್ದಾರೆ.

ಟಾಲಿವುಡ್‌ ಬಾಹುಬಲಿ ಅಲಿಯಾಸ್‌ ಪ್ರಭಾಸ್‌ ಕೊರೋನಾ ವೈರಸ್‌ ಹಾವಳಿ ಹೆಚ್ಚಾಗುವ ಮೊದಲೇ 'ಜಾನ್‌' ಚಿತ್ರತಂಡದ ಜೊತೆ ಚಿತ್ರೀಕರಣಕ್ಕೆಂದು ಜಾರ್ಜಿಯಾಗೆ ತೆರಳಿದ್ದರು. ಯಾವುದಕ್ಕೂ ಜಗ್ಗದ ಪ್ರಭಾಸ್ ಮಾಸ್ಕ್ ಧರಿಸಿಯೇ ಅಲ್ಲಿ ಓಡಾಡುತ್ತಿದ್ದಾರೆಂದು ಸುದ್ದಿಯಾಗಿತ್ತು. 

ಕೊರೋನಾ ವೈರಸ್ ಕಾಟ ಯಾವಾಗ ಹೆಚ್ಚಾಯ್ತೋ, ಆಗ ವಿದೇಶದಿಂದ ಬರುವವರ ಮೇಲೆ ನಿಗಾ ಇಡುವುದು ಭಾರತಕ್ಕೆ ಅನಿವಾರ್ಯವಾಯಿತು. ಅಷ್ಟಕ್ಕೂ ಈ ಮಹಾಮಾರಿ ವಿದೇಶದಿಂದ ಬರುವವರ ಮೂಲಕ ಹಬ್ಬುತ್ತಿದ್ದರಿಂದ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕಾಯಿತು. ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ತಂಡ ಕೊರೋನಾ ವೈರಸ್‌ ವಿಚಾರ ಹಾಗೂ ವಿದೇಶ ವಿಮಾನಗಳನ್ನು ನಿರ್ಬಂಧಿಸಲು ಭಾರತ ನಿರ್ಧರಿಸುತ್ತಿದ್ದಂತೆ, ಜಾನ್‌ ಟೀಂ ಪ್ಯಾಕ್ ಅಪ್‌ ಮಾಡಿ ಭಾರತಕ್ಕೆ ಮರಳಿದೆ. 

ಜಾನ್‌ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಕಾಣಿಸಿಕೊಂಡಿರುವ ಪೂಜಾ ಹೆಗ್ಡೆ ಕೂಡ ಗೃಹ ನಿರ್ಬಂಧನದಲ್ಲಿದ್ದಾರಂತೆ. ಇದರ ಬಗ್ಗೆ ಸ್ವತಃ ಪ್ರಭಾಸ್‌ ಬರೆದುಕೊಂಡಿದ್ದಾರೆ. 'ವಿದೇಶದಿಂದ ಚಿತ್ರೀಕರಣ ಮುಗಿಸಿ ಭಾರತಕ್ಕೆ ಸುರಕ್ಷಿತವಾಗಿ ಆಗಮಿಸಿರುವೆ. ಕೊರೋನಾ ವೈರಸ್‌ ಹೆಚ್ಚಾದ ಕಾರಣ ನಾನು Self Quarantine ಆಗಲು ನಿರ್ಧರಿಸಿದ್ದೇನೆ. ನೀವೆಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೀರೆಂದು ಭಾವಿಸಿದ್ದೇನೆ,' ಎಂದು ಸೋಷಿಯಲ್ ಮೀಡಿಯಾ ಸ್ಟೇಟಸ್ ಅಪ್‌ಡೇಟ್ ಮಾಡಿದ್ದಾರೆ. 

View post on Instagram

ಜಾರ್ಜಿಯಾದಿಂದ ಹಿಂದಿರುಗುವಾಗ ನಟಿ ಪೂಜಾ ಹೆಗ್ಡೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಸ್ಕ್‌ ಧರಿಸಿರುವ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಈಗ ಪೂಜಾ ಕೂಡ ಸ್ವಯಂ ಬಂಧಿಯಾಗಿದ್ದಾರೆ.

View post on Instagram

ಅತ್ತ ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಹಾಸಿನಿ ಹಾಗೂ ಮಣಿರತ್ನಂ ಮಗ ನಂದನ್ ಸಹ ಸ್ವದೇಶಕ್ಕೆ ಮರಳಿದ್ದು, ಗೃಹ ಬಂಧನದಲ್ಲಿದ್ದಾರೆ. ಈ ಸಂಬಂಧ ಸುಹಾಸಿನಿ ವೀಡಿಯೋವವೊಂದನ್ನು ಶೇರ್ ಮಾಡಿಕೊಂಡಿದ್ದರು. ಆದರೆ, ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಹೀಗೆ ತನ್ನನ್ನು ತಾನು ಗೃಹ ಬಂಧನದಲ್ಲಿ ಇಟ್ಟುಕೊಳ್ಳುವ ಬದಲು, ಭಾರತಕ್ಕೆ ಬಂದು ಅಲ್ಲಿ ಇಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅಷ್ಟೇ ಅಲ್ಲ, ನೂರಾರು ಜನರನ್ನು ಒಂದು ಮಾಡಿ ಪಾರ್ಟಿಯನ್ನೂ ಮಾಡಿದ್ದಾರೆ. ಇದೀಗ ಅವರಿಗೆ ಕೊವಿಡ್ 19 ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿಯೂ ಸ್ಟಾರ್ ಟ್ರೀಟ್‌ಮೆಂಟ್ ನಿರೀಕ್ಷಿಸುತ್ತಿದ್ದು, ನೀವೊಬ್ಬ ರೋಗಿ ಎಂಬುದನ್ನು ಮರೆಯಬೇಡಿ ಎಂದು ವೈದ್ಯರ ಹತ್ತಿರವೇ ಮಂಗಳಾರತಿ ಎತ್ತಿಸಿಕೊಂಡಿದ್ದಾರೆ. 

ಲಂಡನ್‌ನಿಂದ ಸುಹಾಸಿನಿ ಪುತ್ರ ರಿಟರ್ನ್‌; 14 ದಿನ ಗೃಹ ಬಂಧನ!

ಈ ಸಂದರ್ಭದಲ್ಲಿ ಈ ರೋಗಣು ಮತ್ತಷ್ಟು ಉಲ್ಬಣವಾಗದಂತೆ ವಿದೇಶದಿಂದ ಬಂದವರು ಪ್ರಭಾಸ್, ಪೂಜಾರಂತೆ ಗೃಹ ಬಂಧನದಲ್ಲಿ ಇರುವುದು ಅನಿವಾರ್ಯ. ಇದರಿಂದ ಮಾತ್ರ ರೋಗ ಹಬ್ಬದಂತೆ ತಡೆಯಬಹುದು. ಪ್ರಜ್ಞಾವಂತ ಭಾರತೀಯ ನಾಗರಿಕರಂತೆ ವರ್ತಿಸುವುದು ಈ ಕ್ಷಣದ ಅಗತ್ಯ ಎಂಬುವುದು ಎಲ್ಲರೂ ಮನಗಾಣಬೇಕು.