ಪ್ರತಿ ಸಿನಿಮಾ ಮಾಡುವಾಗಲೂ ಕೊನೆ ಸಿನಿಮಾ ಅಂದ್ಕೊಳ್ಳುತ್ತಿದ್ದೆ ; 'ಕೇರಳ ಸ್ಟೋರಿ' ನಟಿ ಅದಾ ಶರ್ಮಾ
ಪ್ರತಿ ಸಿನಿಮಾ ಮಾಡುವಾಗಲೂ ಇದು ಕೊನೇ ಸಿನಿಮಾ ಅಂದ್ಕೊಳ್ಳುತ್ತಿದ್ದೆ ಎಂದು 'ಕೇರಳ ಸ್ಟೋರಿ' ನಟಿ ಅದಾ ಶರ್ಮಾ ಹೇಳಿದ್ದಾರೆ.
ವಿವಾದ ಮತ್ತು ಬ್ಯಾನ್‌ಗಳ ನಡುವೆಯೂ ಕೇರಳ ಸ್ಟೋರಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಮೇ 5ರಂದು ತೆರೆಗೆ ಬಂದ ದಿ ಕೇರಳ ಸ್ಟೋರಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 139 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ 150 ಕೋಟಿಯತ್ತ ಮುನ್ನುಗ್ಗುತ್ತಿದೆ. ಮುಂದಿನ ವೀಕೆಂಡ್‌ಗೆ 200 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ. ಪ್ರಾರಂಭದಲ್ಲಿ ನಿಧಾನಗತಿಯಲ್ಲಿ ಕಲೆಕ್ಷನ್ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಕಳೆದ ಶನಿವಾರ ಮತ್ತು ಭಾನುವಾರ ಭರ್ಜರಿ ಕಲೆಕ್ಷನ್ ಮಾಡಿದೆ ದಿ ಕೇರಳ ಸ್ಟೋರಿ.
ಶನಿವಾರ 19 ಕೋಟಿ ರೂಪಾಯಿ ಬಾಚಿಕೊಂಡರೆ ಭಾನುವಾರ 23 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಕೇರಳ ಸ್ಟೋರಿಯ ಅತೀ ಹೆಚ್ಚು ಕಲೆಕ್ಷನ್ ಆಗಿದೆ. ದಿ ಕೇರಳ ಸ್ಟೋರಿಯಲ್ಲಿ ನಾಯಕಿಯಾಗಿ ಮಿಂಚಿದ್ದ ನಟಿ ಅದಾ ಶರ್ಮಾಗೆ ಈ ಸಕ್ಸಸ್ ದೊಡ್ಡ ಬ್ರೇಕ್ ತಂದುಕೊಟ್ಟಿದೆ. ಯಶಸ್ಸು ಕಾಣದೆ ಮಂಕಾಗಿದ್ದ ಅದಾ ಶರ್ಮಾ ಸಿನಿ ಜೀವನವನ್ನು ಉತ್ತಂಗಕ್ಕೆ ಕರೆದೊಯ್ದಿದೆ ಕೇರಳ ಸ್ಟೋರಿ. ಕೇರಳ ಸ್ಟೋರಿ ಬಳಿಕ ಮಾತನಾಡಿರುವ ಅದಾ ಶರ್ಮಾ, ಪ್ರತಿ ಸಿನಿಮಾ ಮಾಡುವಾಗಲೂ ಇದು ಕೊನೆಯ ಸಿನಿಮಾ ಅಂದ್ಕೊಂಡು ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಮತ್ತೊಂದು ಅವಕಾಶ ಸಿಗುತ್ತೆ ಅಂತ ನಾನು ಅಂದುಕೊಳ್ಳುತ್ತಿರಲಿಲ್ಲ ಎಂದು ಅದಾ ಶರ್ಮಾ ಹೇಳಿದ್ದಾರೆ.
ಸುದ್ದಿ ಸಂಸ್ಥೆ ANI ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅದಾ, 'ನಾನು ಮಾಡುವ ಪ್ರತಿಯೊಂದು ಚಿತ್ರವೂ ನನ್ನ ಕೊನೆಯ ಚಿತ್ರ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನನಗೆ ಇನ್ನೊಂದು ಅವಕಾಶ ಸಿಗುತ್ತದೆಯೇ ಅಥವಾ ಯಾರಾದರೂ ಮತ್ತೆ ನನ್ನ ಮೇಲೆ ನಂಬಿಕೆ ತೋರಿಸುತ್ತಾರೆಯೇ ಎಂದು ನನಗೆ ತಿಳಿದಿರಲಿಲ್ಲ. ಆದರೆ ನನ್ನ ಬಗ್ಗೆ ಪ್ರೇಕ್ಷಕರ ಕನಸುಗಳು ಯಾವಾಗಲೂ ದೊಡ್ಡದಾಗಿದ್ದವು. ಈ ಪಾತ್ರ ಅಥವಾ ಆ ಪಾತ್ರ ನೀಡಬೇಕಾಗಿತ್ತು ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಆ ಕನಸುಗಳೆಲ್ಲವೂ ಈಗ ನಿಜವಾಗಿವೆ, ನಾನು ತುಂಬಾ ಅದೃಷ್ಟಶಾಲಿ, ನನ್ನ ಕನಸುಗಳು ಯಾವಾಗಲೂ ನಾನು ಬಯಸಿದಂತೆ ಚಿಕ್ಕದಾಗಿದ್ದವು. ಆದರೆ ನನಗೆ ಎಷ್ಟು ಸಿಗುತ್ತದೆ ಎಂದು ತಿಳಿದಿರಲಿಲ್ಲ' ಎಂದು ಅದಾ ಹೇಳಿದ್ದಾರೆ.
ರಸ್ತೆ ಅಪಘಾತ: 'ದಿ ಕೇರಳ ಸ್ಟೋರಿ' ನಾಯಕಿ ಅದಾ ಶರ್ಮಾ, ನಿರ್ದೇಶಕರಿಗೆ ಗಾಯ
'ನಾವು ಈ ಸಿನಿಮಾ ಮಾಡಲು ಪ್ರಾರಂಭಿಸಿದಾಗ ಹುಡುಗಿಯರಲ್ಲಿ ಜಾಗೃತಿ ಮೂಡಿಸುವ ಆಲೋಚನೆಯನ್ನು ಹೊಂದಿದ್ದೆವು. ಈಗ ಅನೇಕ ಜನರು ಇದನ್ನು ವೀಕ್ಷಿಸುತ್ತಿದ್ದಾರೆ ಎಂದು ನನಗೆ ತುಂಬಾ ಸಂತೋಷವಾಗಿದೆ, ಆದ್ದರಿಂದ ನಿಜವಾದ ಕಥೆ ಏನು ಮತ್ತು ಏನಾಗುತ್ತಿದೆ ಎಂದು ಅವರಿಗೆ ತಿಳಿದಿದೆ. ಒಬ್ಬ ನಟನಾಗಿ ನಿಮ್ಮ ಕೆಲಸವನ್ನು ಜನರು ನೋಡಬೇಕೆಂದು ನೀವು ಯಾವಾಗಲೂ ಬಯಸುತ್ತೀರಿ. ನನಗೆ ಅಂತಹ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ಅಂತಹ ಅವಕಾಶವನ್ನು ಪಡೆಯಲು ಓಂ ಶಾಂತಿ ಓಂನಲ್ಲಿ ಶಾರುಖ್ ಖಾನ್ ಅವರಂತೆ ನಾನು ಮರುಹುಟ್ಟು ಪಡೆಯಬೇಕಾಯಿತು ಎಂದು ಆಶ್ಚರ್ಯ ಪಡುತ್ತೇನೆ. ನನಗೆ ಈ ಅವಕಾಶ ಸಿಕ್ಕಿದ್ದು ಮತ್ತು ಜನರು ಚಲನಚಿತ್ರವನ್ನು ವೀಕ್ಷಿಸುತ್ತಿರುವುದು ಮತ್ತು ತುಂಬಾ ಮೆಚ್ಚುಗೆಯನ್ನು ನೀಡುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ' ಎಂದು ಅದಾ ಖುಷಿ ಹಂಚಿಕೊಂಡಿದ್ದಾರೆ.
ದಿ ಕೇರಳ ಸ್ಟೋರಿ ನಟಿ ಅದಾ ಶರ್ಮ: ನಿಮಗೆ ಗೊತ್ತಿಲ್ಲದ ಫ್ಯಾಕ್ಟ್ಸ್
ಸುದೀಪ್ತೋ ಸೇನ್ ಸಾರಥ್ಯದಲ್ಲಿ ಮೂಡಿ ಬಂದಿರುವ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಬಲವಂತದ ಮತಾಂತರ, ಹುಡುಗಿಯನ್ನು ಬ್ರೈನ್ ವಾಶ್ ಮಾಡಿ ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ತೋರಿಸಲಾಗಿದೆ. ಈ ವಿಚಾರ ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು. ಸಿನಿಮಾ ಬಿಡುಗಡೆಯಾಗಬಾರದು ಎಂದು ಭಾರಿ ವಿರೋಧ ವ್ಯಕ್ತವಾಗಿತ್ತು. ಕೊನೆಗೂ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.