'ಎಲಿಫೆಂಟ್ ವಿಸ್ಪರರ್ಸ್' ಬೊಮ್ಮನ್-ಬೆಳ್ಳಿ ದಂಪತಿಗೆ ವಿಮಾನದಲ್ಲಿ ವಿಶೇಷ ಗೌರವ; ವಿಡಿಯೋ ವೈರಲ್
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಮುಡಿಗೇಡಿಸಿಕೊಂಡ 'ಎಲಿಫೆಂಟ್ ವಿಸ್ಪರರ್ಸ್'ನ ಬೊಮ್ಮನ್ ಮತ್ತು ಬೆಳ್ಳಿ ದಂಪತಿಗೆ ವಿಮಾನದಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ.
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಮುಡಿಗೇಡಿಸಿಕೊಂಡ 'ಎಲಿಫೆಂಟ್ ವಿಸ್ಪರರ್ಸ್'ನ ಬೊಮ್ಮನ್ ಮತ್ತು ಬೆಳ್ಳಿ ದಂಪತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆನಾಥ ಆನೆ ಮರಿಗಳನ್ನು ಸಾಕಿದ ಈ ದಂಪತಿಯ ಜೀವನ ಅನೇಕರಿಗೆ ಸ್ಫೂರ್ತಿ. ಆಸ್ಕರ್ ಮುಡಿಗೇರಿಸಿಕೊಂಡ ಬಳಿಕ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಎಲಿಫೆಂಟ್ ವಿಸ್ಪರರ್ಸ್ ನ ರಿಯಲ್ ಹೀರೋಗಳಾದ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಕೈಗೆ ಪ್ರಶಸ್ತಿ ಇಟ್ಟಿದ್ದಾರೆ. ಪ್ರತಿಷ್ಠಿತ ಪ್ರಶಸ್ತಿಯನ್ನು ಹಿಡಿದು ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಸಂತಸ ಪಟ್ಟಿದ್ದಾರೆ.
ಫೋಟೋವನ್ನು ಶೇರ್ ಮಾಡಿ ನಿರ್ದೇಶಕಿ ಕಾರ್ತಿಕಿ ಗೋನ್ಸಾಲ್ವೆಸ್, 'ನಾವು (ಚಿತ್ರತಂಡದಿಂದ) ದೂರವಾಗಿ ನಾಲ್ಕು ತಿಂಗಳಾಗಿದೆ ಮತ್ತು ಈಗ ನಾನು ಮನೆಯಲ್ಲಿದ್ದೇನೆ ಎಂದು ಭಾಸವಾಗುತ್ತಿದೆ' ಎಂದು ಕ್ಯಾಪ್ಷನ್ ನೀಡಿ ಬೊಮ್ಮನ್ ಮತ್ತು ಬೆಳ್ಳಿ ಫೋಟೋ ಶೇರ್ ಮಾಡಿದ್ದರು. ನಗು ಬೀರುತ್ತಾ ಕ್ಯಾಮರಾಗೆ ಪೋಸ್ ಮಾಡಿದ್ದಾರೆ. ಇಬ್ಬರ ಮುದ್ದಾದ ಫೋಟೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಇತ್ತೀಚೆಗಷ್ಟೆ ಮುಂಬೈಗೆ ತೆರಳಿದ್ದರು. ಪತ್ರಕರ್ತರ ಮುಂದೆ ಹಾಜರಾಗಿದ್ದರು. ಬಳಿಕ ಊಟಿಗೆ ವಿಮಾನದಲ್ಲಿ ಪ್ರಯಾಣಿಸಿದರು. ಬೊಮ್ಮನ್ ಮತ್ತು ಬೆಳ್ಳಿ ದಂಪತಿ ವಿಮಾನ ಏರುತ್ತಿದ್ದಂತೆ ವಿಶೇಷವಾಗಿ ಗೌರವ ನೀಡಲಾಯಿತು. ಕ್ಯಾಪ್ಟನ್ ಸೇರಿದಂತೆ ಪ್ರಯಾಣಿಕರು ಚಪ್ಪಾಳೆ ತಟ್ಟುವ ಮೂಲಕ ಆಸ್ಕರ್ ವಿನ್ನಿಂಗ್ ದಂಪತಿಯನ್ನು ಬರಮಾಡಿಕೊಂಡರು. ವಿಮಾನದಲ್ಲಿ ಸಿಕ್ಕ ಗೌರವ ಮತ್ತು ಪ್ರೀತಿಗೆ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಸಂತಸ ಪಟ್ಟರು.
ಆಸ್ಕರ್ ಹಿಡಿದು ಪೋಸ್ ಕೊಟ್ಟ The Elephant Whisperers ಬೊಮ್ಮನ್, ಬೆಳ್ಳಿ: ಕಾರ್ತಿಕಿಗೆ ಭೇಷ್ ಎಂದ ನೆಟ್ಟಿಗರು
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಕ್ಯಾಪ್ಟನ್, 'ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ದಿ ಎಲಿಫೆಂಟ್ ವಿಸ್ಪರ್ಸ್ ತಂಡ ತಮ್ಮ ಜೊತೆ ಇದೆ. ಒಂದು ದೊಡ್ಡ ಚಪ್ಪಾಳೆ' ಎಂದು ಹೇಳಿದರು. ಬಳಿಕ ಎಲ್ಲರೂ ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು. ಬೊಮ್ಮನ್ ಮತ್ತು ಬಳ್ಳಿ ದಂಪತಿ ಎದ್ದು ನಿಂತು ನಮಸ್ಕರಿಸಿದರು.
ಅನಾಥ ಆನೆ ಮರಿಗಳನ್ನು ಮಕ್ಕಳಂತೆ ಸಾಕಿದ ಬೊಮ್ಮನ್-ಬೆಳ್ಳಿ ದಂಪತಿಯ ಸ್ಫೂರ್ತಿದಾಯಕ ಜೀವನಕ್ಕೆ 'ಆಸ್ಕರ್' ಗರಿ
ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಆನೆ ಸಾಕಾಣಿಕೆ ಶಿಬಿರದಲ್ಲಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಕೆಲಸ ಮಾಡುತ್ತಿದ್ದಾರೆ. 2017ರಲ್ಲಿ ತೆಂಕಣಿಕೊಟ್ಟೈ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಆನೆ ಮರಿಯನ್ನು ಕರೆತಂದು ಸಾಕಿದರು. ಬಳಿಕ 2018ರಲ್ಲಿ ಸತ್ಯಮಂಗಲಂ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಮತ್ತೊಂದು ಆನೆ ಮರಿಯನ್ನು ಮುದುಮಲೈ ಶಿಬಿರಕ್ಕೆ ಕರೆತಂದು ಸಾಕಿದರು. ಮುದ್ದಾದ ಮರಿಗಳಿಗೆ ರಘು ಮತ್ತು ಬೊಮ್ಮಿ ಎಂದು ಹೆಸರಿಟ್ಟರು. ಎರಡು ಪುಟ್ಟ ಮರಿಗಳನ್ನು ಬೊಮ್ಮನ್ ಮತ್ತು ಬೆಳ್ಳಿ ದಂಪತಿ ತಮ್ಮ ಮಕ್ಕಳಂತೆ ಮುದ್ದಾಗಿ ಬೆಳೆಸಿದರು. ಇವರ ಸ್ಫೂರ್ತಿದಾಯಕ ಜೀವನವನ್ನು ಸೆರೆ ಹಿಡಿದು ಆಸ್ಕರ್ ಅಂಗಳಕ್ಕೆ ಕೊಂಡೊಯ್ದಿದ್ದು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್.