ನವದೆಹಲಿ(ಜ.18): ಭಾರತೀಯ ಜನತಾ ಪಕ್ಷದ ಅನೇಕ ನಾಯಕರು ತಾಂಡವ್ ವೆಬ್ ಸೀರೀಸ್ ನಿಷೇಧಿಸುವಂತೆ ಆಗ್ರಹಿಸಿದ್ದಾರೆಪಕ್ಷದ ನಾಯಕ ಕಪಿಲ್ ಮಿಶ್ರಾ ವೆಬ್ ಸೀರೀಸ್ ತಾಂಡವ್ ಒಂದು ದಲಿತ ವಿರೋಧಿ ಹಾಗೂ ಹಿಂದೂ ವಿರೋಧಿ ಎಂದಿದ್ದಾರೆ. ಇದಾದ ಬಳಿಕ ಈ ವೆಬ್ ಸೀರೀಸ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸದ್ಯ ಅಮೆಜಾನ್ ಪ್ರೈಮ್ ವಿಡಿಯೋ ತಂಡಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಮನ್ಸ್ ಜಾರಿಗೊಳಿಸಿದೆ. ತಾಂಡವ್ ಸಂಬಂಧ ಈ ಸಮನ್ಸ್ ಜಾರಿಗೊಳಿಸಿದ್ದಾರೆ.

ನೂತನ ವೆಬ್ ಸೀರೀಸ್ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡುವ ಯತ್ನ ನಡೆಸುತ್ತಿದ್ದಾರೆಂದು ಬಿಜೆಪಿಯ ಅನೇಕ ನಾಯಕರು ಆರೋಪಿಸಿದ್ದಾರೆ. 

ಇನ್ನು ಬಿಜೆಪಿ ಶಾಸಕ ರಾಮ್ ಕದಮ್ ಕೂಡಾ ಈ ವೆಬ್ ಸೀರೀಸ್ ವಿರುದ್ಧ ಘಾಟ್‌ಕೋಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಚಿವ ಪ್ರಕಾಶ್ ಜಾವ್ಡೇಕರ್‌ಗೆ ತಾಂಡವ್‌ ನಿಷೇಧಿಸುವಂತೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದರು. ತಮ್ಮ ಈ ಪತ್ರದಲ್ಲಿ ಈ ಸೀರೀಸ್‌ನಲ್ಲಿ ನಟಿಸಿದ ನಟ, ನಟಿಯರು, ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.