ಮಲೇಷಿಯಾದಲ್ಲಿ ನಡೆದ ಶೂಟಿಂಗ್​ ವೇಳೆ ಭಾರಿ ಅವಘಡ ಸಂಭವಿಸಿದ್ದು, ನಟ ವಿಜಯ್​ ಸ್ಥಿತಿ ಗಂಭೀರವಾಗಿದೆ, ಅಲ್ಲಿ ನಡೆದದ್ದೇನು?

ವರ್ಷದಿಂದೀಚೆಗೆ ಚಿತ್ರರಂಗದಲ್ಲಿ ಒಂದರ ಮೇಲೊಂದು ಅನಾಹುತಗಳು ಸಂಭವಿಸುತ್ತಿವೆ. ಪ್ರಖ್ಯಾತ ನಟ ನಟಿಯರ ಸಾವು, ಅಪಘಾತಗಳು ವರದಿಯಾಗುತ್ತಲೇ ಇವೆ. ಈಗ ಅಂಥದ್ದೇ ಇನ್ನೊಂದು ಅನಾಹುತ ನಡೆದಿದೆ. ಮಲೇಷ್ಯಾದಲ್ಲಿ ಸಿನಿಮಾ ಶೂಟಿಂಗ್‌ ವೇಳೆ ಸಂಭವಿಸಿದ ಭಾರಿ ಅವಘಡದಲ್ಲಿ ತಮಿಳು ನಟ ವಿಜಯ್ ಆಂಟನಿ (Vijay Antony) ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಅವರನ್ನು ಮಲೇಷ್ಯಾದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಲೇಷ್ಯಾದಲ್ಲಿ ವಿಜಯ್ ಅವರು ‘ಪಿಚ್ಚೈಕಾರನ್ 2’ (ಭಿಕ್ಷುಕ) ಸಿನಿಮಾ ಶೂಟಿಂಗ್​ (Shooting)ನಲ್ಲಿದ್ದರು. ಈ ವೇಳೆ ಅನಾಹುತ ಸಂಭವಿಸಿದೆ. ದೋಣಿಯೊಂದರಲ್ಲಿ ನಡೆಯುತ್ತಿದ್ದ ಸಾಹಸ ಸನ್ನಿವೇಶದ ದೃಶ್ಯದಲ್ಲಿ ದೋಣಿ ಅಪಘಾತಕ್ಕೀಡಾಗಿ ವಿಜಯ್​ ಅವರಿಗೆ ಗಂಭೀರ ಗಾಯಗಳಾಗಿವೆ. ಪಿಚ್ಚೈಕಾರನ್ 2 (Pichaikkaran 2)ಸಿನಿಮಾವನ್ನು ಬೇಸಿಗೆಯಲ್ಲಿ ಬಿಡುಗಡೆ ಮಾಡುವುದಾಗಿ ಮೊನ್ನೆಯಷ್ಟೇ ಘೋಷಿಸಿದ್ದ ಬೆನ್ನಲ್ಲೇ ಈ ಅನಾಹುತದ ಸುದ್ದಿ ಬಂದಿದೆ.

ಈ ಅಪಘಾತದಲ್ಲಿ ವಿಜಯ್ (Vijay Antony) ಅವರ ಹಲ್ಲು ಮತ್ತು ದವಡೆಗೆ ತೀವ್ರತರಹದ ಪೆಟ್ಟು ಬಿದ್ದಿದ್ದು. ಮೂಳೆಗಳು ಮುರಿದಿವೆ ಎನ್ನಲಾಗಿದೆ. ನಿನ್ನೆ (ಜ.18) ಈ ಅವಘಡ ನಡೆದಿತ್ತು. ಆಗಿನಿಂದಲೇ ಪ್ರಜ್ಞಾಹೀನರಾಗಿರುವ ವಿಜಯ್​ ಅವರು ಇದುವರೆಗೂ ಚೇತರಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಸಮುದ್ರ ಮಧ್ಯ ದೋಣಿಯಲ್ಲಿ ಚಿತ್ರೀಕರಣ (shooting)ಮಾಡಲಾಗುತ್ತಿತ್ತು. ಒಂದು ದೋಣಿ ಮತ್ತೊಂದು ದೋಣಿಯನ್ನು ಅಟ್ಟಿಸಿಕೊಂಡು ಬರುವ ದೃಶ್ಯ ಅದಾಗಿತ್ತು. ರಭಸವಾಗಿ ದೋಣಿಗಳು ಬರುವ ವೇಳೆಯಲ್ಲಿ ಒಂದು ದೋಣಿ ನಿಯಂತ್ರಣ ತಪ್ಪಿ ಮತ್ತೊಂದು ದೋಣಿಗೆ ಡಿಕ್ಕಿ ಹೊಡೆದಿರುವುದಾಗಿ ಚಿತ್ರತಂಡ ಹೇಳಿದೆ. 

'ಮೀ ಟೂ' ನಟಿ ತನುಶ್ರೀ ನುಡಿದ ಬಾಲಿವುಡ್​ನ ಭಯಾನಕ ಭವಿಷ್ಯ!

 ಈ ಅವಘಡದಲ್ಲಿ ಕಾವ್ಯಾ ತಾಪರ್ (kavya Tapar) ಅವರು ಒಂದು ಬೋಟ್‌ನಲ್ಲಿದ್ದರು. ಅವರ ತಲೆಗೂ ಏಟಾಗಿದೆ ಎಂದು ಚಿತ್ರತಂಡ ಹೇಳಿದೆ. 'ವಿಜಯ್ ಮತ್ತು ನಟಿ ಕಾವ್ಯಾ ತಾಪರ್ ಅವರು ಒಂದು ಬೋಟ್‌ನಲ್ಲಿ ಒಟ್ಟಿಗೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಬೋಟ್​ ಅನ್ನು ವಿಜಯ್ ಚಲಾಯಿಸುತ್ತಿದ್ದರು. ಮತ್ತೊಂದು ದೊಡ್ಡ ಬೋಟ್‌ನಲ್ಲಿ ಕ್ಯಾಮೆರಾ (Camera)ತಂಡವಿತ್ತು. ಕ್ಯಾಮೆರಾದ ಜೊತೆಗೆ ಇಡೀ ಸಿನಿಮಾ ತಂಡದ ಸದಸ್ಯರು ಆ ಇನ್ನೊಂದು ಬೋಟ್​ನಲ್ಲಿ ಇದ್ದರು. ಈ ವೇಳೆ ಅನಾಹುತ ಸಂಭವಿಸಿದೆ. ವಿಜಯ್​ ಅವರು ಬೋಟ್​ ಚಲಾಯಿಸುತ್ತಿದ್ದ ವೇಳೆ ಅದು ನಿಯಂತ್ರಣ ತಪ್ಪಿದೆ. ಅದು ಚಿತ್ರತಂಡವಿದ್ದ ಮತ್ತೊಂದು ದೊಡ್ಡ ಬೋಟ್‌ಗೆ ಡಿಕ್ಕಿ ಹೊಡೆದಿದೆ. ವಿಜಯ್ ಮತ್ತು ಕಾವ್ಯಾ ನೀರಿಗೆ ಬಿದ್ದರು. ಆ ಕ್ಷಣ ಅಲ್ಲಿದ್ದ ಸಿಬ್ಬಂದಿಗೆ ಅದು ಆಘಾತವನ್ನುಂಟು ಮಾಡಿತು. ತಕ್ಷಣವೇ ವಿಜಯ್ ಮತ್ತು ಕಾವ್ಯಾ ಅವರನ್ನು ರಕ್ಷಿಸಿದರು ಎಂದು ನಿರ್ಮಾಪಕ ಧನಂಜಯನ್ ಗೋವಿಂದ್ ಮಾಹಿತಿ ನೀಡಿದ್ದಾರೆ. 

 ಇದರಿಂದ ವಿಜಯ್ ಅವರ ತಲೆ, ಮುಖ ಮತ್ತು ಎದೆಗೆ ಬಲವಾದ ಪೆಟ್ಟು ಬಿದ್ದಿದೆ. ಕಾವ್ಯಾ ಅವರ ತಲೆಗೂ ಪೆಟ್ಟಾಗಿದ್ದು, ಅವರು ಚೇತರಿಸಿಕೊಂಡಿದ್ದಾರೆ. ಕಾವ್ಯಾರನ್ನು ಮುಂಬೈಗೆ (Mumbai) ಕಳಿಸಲಾಗಿದ್ದರೆ, ವಿಜಯ್ ಅವರನ್ನು ಮಲೇಷ್ಯಾದಲ್ಲಿಯೇ ದಾಖಲು ಮಾಡಲಾಗಿದೆ ಎಂದು ವಿಜಯ್ ಅವರ ಕುಟುಂಬಸ್ಥರೂ ಮಲೇಷ್ಯಾಗೆ (Malaysia) ಪ್ರಯಾಣ ಬೆಳೆಸಿದ್ದಾರೆ ಎಂದು ಧನಂಜಯನ್​ ಹೇಳಿದ್ದಾರೆ. 

ಲವ್​ ಜಿಹಾದ್​ಗೆ ನಟಿ ಬಲಿ? ನಟ ಶೀಜಾನ್​ ಖಾನ್​ಗೆ ಸಿಗಲಿಲ್ಲ ಬೇಲ್​, ಕೋರ್ಟ್​ ಹೇಳಿದ್ದೇನು?

ವಿಜಯ್ ಆಂಟನಿ ಅವರು ನಟನಾಗಿ ಮಾತ್ರವಲ್ಲದೇ ಸಂಗೀತ ನಿರ್ದೇಶಕರಾಗಿಯೂ ಪ್ರಸಿದ್ಧಿರಾಗಿದ್ದಾರೆ. 2012ರಲ್ಲಿ 'ನಾನ್' ಸಿನಿಮಾದ ಮೂಲಕ ಹೀರೋ ಆಗಿ ಪದಾರ್ಪಣೆ ಮಾಡಿದರು. ಇದಾದ ಬಳಿಕ ಸಾಲು ಸಾಲು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಪಿಚ್ಚೈಕಾರನ್' ಸಿನಿಮಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು. ಆ ಸಿನಿಮಾ ತೆಲುಗಿಗೆ ಡಬ್ ಆಗಿ, ಅಲ್ಲಿಯೂ ದೊಡ್ಡ ಹಿಟ್ ಆಗಿದೆ. ಸದ್ಯ ವಿಜಯ್ ಕೈಯಲ್ಲಿ ಹಲವು ಸಿನಿಮಾಗಳಿವೆ.

ವಿಜಯ್ ಆಂಟೋನಿ ನಿರ್ದೇಶನದ ಈ ಚಿತ್ರದಲ್ಲಿ ದೇವ್ ಗಿಲ್, ಹರೀಶ್ ಪೆರಾಡಿ, ಜಾನ್ ವಿಜಯ್, ರಾಧಾ ರವಿ, ಮನ್ಸೂರ್ ಅಲಿ ಖಾನ್, ವೈ.ಜಿ ಮಹೇಂದ್ರನ್, ರಾಜಾ ಕೃಷ್ಣಮೂರ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಘಟನೆಯಿಂದಾಗಿ ಶೂಟಿಂಗ್ ಮುಂದೂಡಲಾಗಿದೆ.