ನಟ ಸುಶಾಂತ್‌ಸಿಂಗ್‌ ರಜಪೂತ್‌ ಸಾವಿನ ನಂತರ ತೆರೆಗೆ ಬರಲು ಸಜ್ಜಾಗಿರುವ ಸಿನಿಮಾ ‘ದಿಲ್‌ ಬೇಚಾರ’. ಈ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದ್ದು, ಬಿಡುಗಡೆಯಾದ 22 ಗಂಟೆಗಳಲ್ಲೇ 25 ಮಿಲಿಯನ್‌ ವ್ಯೂಸ್‌ ಪಡೆದುಕೊಂಡು ನಂ.1 ಟ್ರೆಂಡಿಂಗ್‌ನಲ್ಲಿ ಸದ್ದು ಮಾಡುತ್ತಿದೆ.

ಯೂಟ್ಯೂಬ್‌ವೊಂದರಲ್ಲಿ ಹೀಗೆ ನಿರೀಕ್ಷೆಗೂ ಮೀರಿ ಟ್ರೇಲರ್‌ ನೋಡುವ ಮೂಲಕ ಸುಶಾಂತ್‌ಸಿಂಗ್‌ ರಜಪೂತ್‌ ಈಗ ಆಕಾಶದ ತಾರೆಯಂತಾಗಿದ್ದಾರೆ. ಎರಡುವರೆ ನಿಮಿಷದ ಟ್ರೇಲರ್‌ನಲ್ಲಿ ಸುಶಾಂತ್‌ಸಿಂಗ್‌ ಅವರೇ ತುಂಬಿಕೊಂಡಿದ್ದಾರೆ. ತರಲೆ, ತಮಾಷೆ, ನಗುವ ಯುವಕನ ಪಾತ್ರದಲ್ಲಿ ಸುಶಾಂತ್‌ ಮಿಂಚಿದ್ದಾರೆ. ಸಾವಿನಂಚಿನಲ್ಲಿರುವ ನಾಯಕಿಗೆ ಜೀವನೋತ್ಸಾಹ ತುಂಬುವ ಸುಶಾಂತ್‌ರ ಮಾತುಗಳಿಗೆ ನೋಡುಗರು ಫಿದಾ ಆಗಿದ್ದಾರೆ. ಸುಶಾಂತ್‌ಸಿಂಗ್‌ ರಜಪೂತ್‌ ಇಲ್ಲದ ಹೊತ್ತಿನಲ್ಲಿ ಚಿತ್ರದ ಟ್ರೇಲರ್‌ ಬಂದಿದ್ದು, ನೋಡಗರ ಕುತೂಹಲಕ್ಕೆ ಮತ್ತಷ್ಟು ಕಾರಣವಾಗಿದೆ.

 

ಮುಖೇಶ್‌ ಚಾಬ್ರ ನಿರ್ದೇಶನದ, ಫಾಕ್ಸ್‌ ಸ್ಟುಡಿಯೋ ನಿರ್ಮಾಣದ ಈ ಚಿತ್ರಕ್ಕೆ ಎ ಆರ್‌ ರೆಹಮಾನ್‌ ಸಂಗೀತ ನೀಡಿದ್ದಾರೆ. ಸಂಜನಾ ಸಿಂಗ್‌ ನಾಯಕಿಯಾಗಿ ನಟಿಸಿದ್ದಾರೆ. ಕ್ಯಾನ್ಸರ್‌ಗೆ ತುತ್ತಾಗಿ ಸಾವು, ಬದುಕಿನ ನಡುವೆ ಪಯಣಿಸುತ್ತಿರುವ ನಾಯಕಿಯನ್ನು ಪ್ರೀತಿಸಿ, ಆಕೆಗೆ ಜೀವನ ಉತ್ಸಾಹ ತುಂಬುವ ಪಾತ್ರ ಸುಶಾಂತ್‌ಸಿಂಗ್‌ ಅವರದ್ದು. ಇಡೀ ಟ್ರೇಲರ್‌ನಲ್ಲಿ ಸುಶಾಂತ್‌ ನಗುತ್ತಲೇ ಇರುತ್ತಾರೆ. ಆದರೆ, ನಾಯಕಿಯಿಂದ ಬೇರೆಯಾಗುವ ಅವರ ಒಳಗಿನ ದುಃಖ, ಹೊರಗಿನ ನಗು ಎರಡು ಒಟ್ಟಿಗೆ ತೋರಿಸಿರುವ ರೀತಿ ಅದ್ಭುತ ಎನ್ನುತ್ತಿದ್ದಾರೆ ಟ್ರೇಲರ್‌ ನೋಡಿದವರು.

24 ಗಂಟೆಯಲ್ಲಿ 4.3 ಮಿಲಿಯನ್ ಲೈಕ್ಸ್ ಪಡೆದ 'ದಿಲ್ ಬೇಚಾರಾ'; ಸುಶಾಂತ್ ಖುಷಿ ಪಡಲಿದ್ದಾನೆ!

‘ಯಾವಾಗ ಹುಟ್ಟುತ್ತೇವೆ, ಯಾವಾಗ ಸಾಯುತ್ತೇವೆ ಎಂದು ನಾನು ನಿರ್ಧರಿಸಲು ಸಾಧ್ಯವಿಲ್ಲ. ಆದರೆ, ಹೇಗೆ ಬದುಕಬೇಕೆಂದು ನಾವು ಡಿಸೈಡ್‌ ಮಾಡಬಹುದು’ ಎನ್ನುವ ಸಂಭಾಷಣೆಗಳು ನೋಡುಗರ ಗಮನ ಸೆಳೆಯುತ್ತಿವೆ. ‘ದಿ ಫಾಲ್ಟ್‌ ಇನ್‌ ಅವರ್‌ ಸ್ಟಾರ್ಸ್‌’ ಕಾದಂಬರಿಯನ್ನು ಆಧರಿಸಿ ಮೂಡಿ ಬಂದಿರುವ ಇದು, ಸುಶಾಂತ್‌ಸಿಂಗ್‌ ರಜಪೂತ್‌ ಅವರ ಕೊನೆಯ ಸಿನಿಮಾ. ಟ್ರೇಲರ್‌ ಬಿಡುಗಡೆಯಾದ 22 ಗಂಟೆಗಳಲ್ಲಿ ಫಾಕ್ಸ್‌ ಸ್ಟಾರ್‌ ಹಿಂದಿ ಅಧಿಕೃತ ಯೂಟ್ಯೂಬ್‌ ಚಾನಲ್‌ನಲ್ಲೇ 26 ಮಿಲಿಯನ್‌ ಹಿಟ್ಸ್‌ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ.