ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ಚಿತ್ರೋದ್ಯಮ ಪ್ರದರ್ಶಕರು ಭಾಗವಹಿಸಿದ್ದ ಸಭೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಈ ಸಭೆಯ ಪ್ರಮುಖ ಅಂಶಗಳೆಂದರೆ...
ಹೊಸ ಸಿನಿಮಾಗಳು ಓಟಿಟಿಗೆ ಯಾವಾಗ ಬರಬೇಕು ಎಂಬುದಕ್ಕೆ ದಕ್ಷಿಣ ಭಾರತ ಸಿನಿಮಾ ಪ್ರದರ್ಶಕರ ಸಂಘ ಒಂದು ಲಕ್ಷಣ ರೇಖೆ ಹಾಕಿ, ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ಚಿತ್ರೋದ್ಯಮ ಪ್ರದರ್ಶಕರು ಭಾಗವಹಿಸಿದ್ದ ಸಭೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಈ ಸಭೆಯ ಪ್ರಮುಖ ಅಂಶಗಳೆಂದರೆ...
1. ಸಿನಿಮಾಗಳು ಥಿಯೇಟರ್‌ನಲ್ಲಿ ಬಿಡುಗಡೆ ಆಗಿ ಎಂಟು ವಾರ ಕಳೆದ ನಂತರ ಓಟಿಟಿ, ಟಿವಿ ಸೇರಿದಂತೆ ಯಾವುದೇ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಪ್ರಸಾರವಾಗಬೇಕು.
2. ಶೂಟಿಂಗ್ ಹಂತದಲ್ಲಿ ಅಥವಾ ಥಿಯೇಟರ್‌ಗೆ ಬರುವ ಮೊದಲೇ ಓಟಿಟಿ ಅಥವಾ ಡಿಜಿಟಲ್ ಬ್ಯುಸಿನೆಸ್ ಮಾಡಿಕೊಂಡಿರುವ ಸಿನಿಮಾಗಳಿಗೆ ಈ ನಿಯಮ ಅನ್ವಯ.
3. ಎಂಟು ವಾರಗಳ ನಂತರ ಓಟಿಟಿ ಅಥವಾ ಟಿವಿಗಳಲ್ಲಿ ಸಿನಿಮಾ ಬಿಡುಗಡೆ ಆಗಬೇಕೆಂಬ ಈ ನಿಯಮ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳನ್ನು ಒಳಗೊಂಡ ದಕ್ಷಿಣ ಭಾರತೀಯ ಚಿತ್ರಗಳಿಗೆ ಅನ್ವಯಿಸುತ್ತದೆ.
ಯಾಕೆ ಈ ನಿರ್ಧಾರ?
ಉತ್ತರ ಭಾರತದ ಚಿತ್ರರಂಗ ಇಂಥದ್ದೊಂದು ನಿಯಮವನ್ನು ಈಗಾಗಲೇ ಪಾಲಿಸಿಕೊಂಡು ಬರುತ್ತಿದೆ. ಹಾಗೆ ನೋಡಿದರೆ ದಕ್ಷಿಣ ಭಾರತೀಯ ಚಿತ್ರಗಳು ಕೂಡ ಇದೇ ನಿಯಮದ ಮೇಲೆ ಸಿನಿಮಾಗಳ ಬಿಡುಗಡೆ ಮತ್ತು ಪ್ರದರ್ಶನ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಕೆಲವೊಂದು ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಆಗುತ್ತಿದ್ದಾಗಲೇ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು.
ಇದರಿಂದ ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುತ್ತಾ ಬಂತು. ಹೀಗೆ ಮುಂದುವರಿದರೆ ಚಿತ್ರಮಂದಿರಗಳ ಸಂಸ್ಕೃತಿ ಹೋಗುತ್ತದೆ. ಥಿಯೇಟರ್ ವ್ಯವಸ್ಥೆ ಕಣ್ಮರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗೆ ಬಂದ 8 ವಾರಗಳ ನಂತರ ಇತರ ವೇದಿಕೆಗಳಲ್ಲಿ ಸಿನಿಮಾಗಳನ್ನು ಪ್ರಸಾರ ಮಾಡಲಿ ಎಂಬುದು ಪ್ರದರ್ಶಕರ ವಾದ.
ಚಿತ್ರಮಂದಿರಗಳನ್ನು ಉಳಿಸುವ ಮತ್ತು ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬಂದು ಹೋಗುವ ಪರಂಪರೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದೇನು ಹೊಸ ನಿರ್ಧಾರವಲ್ಲ. ಉತ್ತರ ಭಾರತೀಯ ಚಿತ್ರರಂಗ ಅನುಸರಿಸಿಕೊಂಡು ಬರುತ್ತಿರುವುದನ್ನೇ ನಾವು ಮಾಡಿದ್ದೇವೆ. ಅದೇ ಮಾನದಂಡಗಳ ಆಧಾರದ ಮೇಲೆ 8 ವಾರಗಳ ಗಡುವು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
- ಕೆ.ವಿ.ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ಪ್ರದರ್ಶನಕರ ಸಂಘದ ಅಧ್ಯಕ್ಷ


